ಜಮೀರ್‌ ಅಹಮದ್‌ ವಿರುದ್ಧ ಆಡಿಯೋ ಸಂಚಲನ

Published : Jun 02, 2026, 08:02 AM IST
BZ Zameer Ahmed Khan Vs Samarth Shamanur

ಸಾರಾಂಶ

ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕ ಜಮೀರ್ ಅಹಮದ್‌ ಖಾನ್‌ ವಿರುದ್ಧ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

  ಬೆಂಗಳೂರು :  ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕ ಜಮೀರ್ ಅಹಮದ್‌ ಖಾನ್‌ ವಿರುದ್ಧ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದೆಹಲಿಗೆ ತೆರಳುವ ಕೆಲವೇ ನಿಮಿಷಗಳ ಹಿಂದೆ ಈ ಆಡಿಯೋ ಹೊರಗೆ

ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ರಚನೆ ಕುರಿತು ಚರ್ಚಿಸಲು ದೆಹಲಿಗೆ ತೆರಳುವ ಕೆಲವೇ ನಿಮಿಷಗಳ ಹಿಂದೆ ಈ ಆಡಿಯೋ ಹೊರಗೆ ಬಂದಿರುವುದು ತೀವ್ರ ಚರ್ಚೆ ಹುಟ್ಟುಹಾಕಿದೆ.

ದಾವಣಗೆರೆ ಕಾಂಗ್ರೆಸ್ ಮುಖಂಡ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್ನಲಾದ ಮೊಹಮ್ಮದ್ ಸಿರಾಜ್‌ ಜತೆ ಜಮೀರ್‌ ಅಹ್ಮದ್‌ ಮಾತನಾಡಿದ್ದಾರೆ ಎಂಬ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಬದಲು ಎಸ್‌ಡಿಪಿಐ ಅಭ್ಯರ್ಥಿ ಗೆಲ್ಲುವಂತೆ ಮಾಡಲು ಜಮೀರ್ ಅಹ್ಮದ್‌ ಅವರು ಸಿರಾಜ್‌ಗೆ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.

ಜಮೀರ್‌ ಅವರು, ‘ಮುಸ್ಲಿಂ ವೋಟಿಂಗ್ ಕಡಿಮೆ ಆಗಬೇಕು. ಮುಸ್ಲಿಮರು ಹೊರಗಡೆ ಬಂದರೆ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಆದಷ್ಟೂ ಮನೆಗಳಿಂದ ಹೊರ ಬಾರದಂತೆ ನೋಡಿಕೊಳ್ಳಬೇಕು. ಹೊರಗೆ ಬಂದರೆ ಕುಕ್ಕರ್‌ (ಎಸ್‌ಡಿಪಿಐ ಅಭ್ಯರ್ಥಿ ಗುರುತು) ಅಥವಾ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಸೂಚಿಸಬೇಕು’ ಎಂದಿರುವುದಾಗಿ ಆಡಿಯೋದಲ್ಲಿದೆ.

ಈ ಆಡಿಯೋ ರಾಜಕೀಯ ಷಡ್ಯಂತ್ರ: ಜಮೀರ್ ಅಹಮದ್‌

ರಾಜ್ಯದ ಕೆಲ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ ಹಾಗೂ ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ, ಇದನ್ನು ಯಾರೂ ನಂಬಬಾರದು. ಆಡಿಯೋವನ್ನು ತನಿಖೆಗೆ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಂಪುಟದಲ್ಲಿ ಸ್ಥಾನಕ್ಕಾಗಿ ದಿಲ್ಲಿಗೆ ಆಕಾಂಕ್ಷಿಗಳ ದೌಡು
ಕೆಪಿಸಿಸಿ ಪಟ್ಟಕ್ಕೆ ಸತೀಶ್‌, ಹರಿ ಪೈಪೋಟಿ