ಬೆಂಗಳೂರು : ರಾಜಧಾನಿಯಲ್ಲಿ ಆಟೋ ಗ್ಯಾಸ್ ಅಭಾವ 20 ದಿನವಾದರೂ ಮುಂದುವರಿದಿದ್ದು, ಬಹಳಷ್ಟು ಗ್ಯಾಸ್ ಸ್ಟೇಷನ್‌ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್ ಸಾಮಾನ್ಯವಾಗಿದೆ.
ನಗರದಲ್ಲಿರುವ ಒಂದಷ್ಟು ಬಂಕ್‌ಗಳಲ್ಲೇ ಗ್ಯಾಸ್ ತುಂಬಿಸಲು ಮುಂದಾದರೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಗ್ಯಾಸ್ ತುಂಬಿಸೋಣ ಎಂದುಕೊಂಡರೆ ದುಬಾರಿ ದರ ಜೇಬು ಸುಡುತ್ತಿದೆ. ಇದರಿಂದಾಗಿ ಬೇಸತ್ತಿರುವ ಆಟೋ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಸರಿಯಾಗಿ ಗ್ಯಾಸ್ ಸರಬರಾಜು ಆಗದಿರುವುದರಿಂದ ಸಮಸ್ಯೆಯಾಗಿದ್ದು ಇದನ್ನೇ ‘ಬಂಡವಾಳ’ ಮಾಡಿಕೊಂಡ ಕೆಲ ಗ್ಯಾಸ್ ಸ್ಟೇಷನ್‌ನವರು ಮನಸ್ಸಿಗೆ ಬಂದಂತೆ ದರ ನಿಗದಿ ಮಾಡಿದ್ದಾರೆ. ಇಷ್ಟೊಂದು ಹಣ ತೆತ್ತು ಗ್ಯಾಸ್ ಹಾಕಿಸಿದರೆ ನಾವು ಜೀವನ ಸಾಗಿಸುವುದಾದರೂ ಹೇಗೆ ಎಂದು ಆಟೋ ಚಾಲಕರು ಅವಲತ್ತುಕೊಳ್ಳುತ್ತಿದ್ದಾರೆ.
‘ಮಾಗಡಿ ರಸ್ತೆಯ ಆಟೋ ಬಂಕ್‌ನಲ್ಲಿ ಮಂಗಳವಾರ ರಾತ್ರಿಯಿಂದಲೇ ಕಾಯುತ್ತಿದ್ದರೂ ಗ್ಯಾಸ್ ಬಂದಿಲ್ಲ ಎಂದು ನೋ ಸ್ಟಾಕ್ ಬೋರ್ಡ್ ಹಾಕಿದ್ದಾರೆ. ಗ್ಯಾಸ್ ಬರಬಹುದು ಎಂದು ಆಶಾಭಾವನೆಯಿಂದ ಕಾಯುತ್ತಿದ್ದೇವೆ. ನಮ್ಮ ಕಷ್ಟ ಕೇಳೋರು ಯಾರೂ ಇಲ್ಲದಂತಾಗಿದೆ. ಮನೆಗೆ ತೆರಳದೇ ರಾತ್ರಿಯೆಲ್ಲಾ ಆಟೋದಲ್ಲೇ ಕಳೆದರೂ ಗ್ಯಾಸ್ ಸಿಗುತ್ತಿಲ್ಲ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇಷಾದ್ರಿಪುರಂನ ಗ್ಯಾಸ್ ಬಂಕ್‌ವೊಂದರಲ್ಲಿ ಒಂದು ಕೆಜಿ ಗ್ಯಾಸ್‌ಗೆ 120 ರು. ನಿಗದಿ ಮಾಡಿದ್ದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು. ‘ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇಳಿದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ನಾವು ಮತ ಹಾಕಿರುವುದು ಯಾರಿಗೆ. ಈ ಸರ್ಕಾರಕ್ಕೆ ಆಟೋ ಚಾಲಕರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.
ನಾಗರಬಾವಿಯ ಆಟೋ ಗ್ಯಾಸ್ ಬಂಕ್ ಸಮೀಪ ಮಂಗಳವಾರ ರಾತ್ರಿಯೇ 500ಕ್ಕೂ ಅಧಿಕ ಆಟೋಗಳಿದ್ದವು. ಬುಧವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಣ್ಣೀರು ಹಾಕಿದ ಆಟೋ ಚಾಲಕ ಮತ್ತು ಆತನ ಪತ್ನಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ‘ಸಮಸ್ಯೆ ಪರಿಹರಿಸಲು ಏ.10ರಂದು ಸಭೆ ನಡೆಸುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಅಷ್ಟೊಂದು ತಡವಾಗಿ ಮೀಟಿಂಗ್ ಮಾಡುವ ಬದಲು ತುರ್ತಾಗಿ ಮಾಡಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದರು. ‘ನಮ್ಮ ಯಜಮಾನರು 5 ದಿನದಿಂದ ಆಟೋ ಚಲಾಯಿಸಿಲ್ಲ. ಈಗ ನೋಡಿದರೆ ಕೆಜಿಗೆ ₹120 ಕೇಳುತ್ತಿದ್ದಾರೆ. 15 ದಿನದಿಂದ ಸರಿಯಾಗಿ ಸಂಪಾದನೆ ಇಲ್ಲ. ಮನೆಯ ನಾಯಿಗೂ ಹುಷಾರಿಲ್ಲ. ಮನೆಯಲ್ಲಿ ಒಟ್ಟು 6 ಜನರಿದ್ದೇವೆ. ಹೀಗಾದರೆ ನಾವು ಜೀವನ ಮಾಡುವುದು ಹೇಗೆ. ಒಂದೊಂದು ಕಡೆ ಒಂದೊಂದು ದರ ನಿಗದಿ ಮಾಡಿದ್ದಾರೆ. ಹೇಳೋರು-ಕೇಳೋರು ಯಾರೂ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್‌ಕುಮಾರ್ ರಸ್ತೆಯ ಸುಬ್ರಮಣ್ಯ ನಗರದ ಗ್ಯಾಸ್ ಸ್ಟೇಷನ್‌ನಲ್ಲಿ ಮಂಗಳವಾರ ರಾತ್ರಿ ಲೋಡ್ ಬಂದಿದ್ದು ಬುಧವಾರ ಬೆಳಗ್ಗೆಯಿಂದ ಗ್ಯಾಸ್ ತುಂಬಿಸಲಾಯಿತು. ಪ್ರತಿ ಕೆಜಿಗೆ 89.52 ಪೈಸೆಯಂತೆ 500 ರು. ಮೊತ್ತಕ್ಕೆ ಮಾತ್ರ ಗ್ಯಾಸ್ ಫಿಲ್ ಮಾಡಲಾಯಿತು. ಗಂಟೆಗಟ್ಟಲೇ ಕಾದರೂ ಹೆಚ್ಚಿನ ಪ್ರಮಾಣದ ಗ್ಯಾಸ್ ಸಿಗದಿರುವುದಕ್ಕೆ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.