ಭೋವಿ ಸಮುದಾಯದ ಪಾರಂಪರಿಕ ಉದ್ಯೋಗವಾದ ಕಟ್ಟಡ ಕಲ್ಲು ಗಣಿಗಾರಿಕೆ ಪುನರ್ ಆರಂಭಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಸ್ಥಳಕ್ಕೆ ಸಮುದಾಯದ ಸ್ವಾಮೀಜಿ ಹಾಗೂ ನಿಗಮದವರು ಆಗಮಿಸಿ ಹೋರಾಟಕ್ಕೆ ಬೆಂಬಲ ನೀಡಿದರು.
ಕನ್ನಡಪ್ರಭ ವಾರ್ತೆ, ಹಾಸನ
ಭೋವಿ ಸಮುದಾಯದ ಪಾರಂಪರಿಕ ಉದ್ಯೋಗವಾದ ಕಟ್ಟಡ ಕಲ್ಲು ಗಣಿಗಾರಿಕೆ ಪುನರ್ ಆರಂಭಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಸ್ಥಳಕ್ಕೆ ಸಮುದಾಯದ ಸ್ವಾಮೀಜಿ ಹಾಗೂ ನಿಗಮದವರು ಆಗಮಿಸಿ ಹೋರಾಟಕ್ಕೆ ಬೆಂಬಲ ನೀಡಿದರು.
ಈ ವೇಳೆ ಚಿತ್ರದುರ್ಗ-ಬಾಗಲಕೋಟೆ ಮಠದ ಸ್ವಾಮೀಜಿಗಳಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಅವರು ಮಾತನಾಡಿ, ಬೋವಿ ಜನಾಂಗ ಎಂದರೇ ಅವರ ಕುಲಕಸುಬು ಕಲ್ಲು ಒಡೆಯುವುದು. ಈಗ ಈ ಕೆಲಸ ಸ್ಥಗಿತಗೊಂಡ ಪರಿಣಾಮ ನೂರಾರು ಕುಟುಂಬಗಳು ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಗಣಿಗಾರಿಕೆಯನ್ನು ಪುನಾರಂಭಿಸಲು ಅವಕಾಶ ನೀಡಬೇಕು.
ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯ ವೈ.ಎನ್.ಪುರ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಾಗಿರುವ ಸುಮಾರು 250 ರಿಂದ 300 ಮಂದಿ ಭೋವಿ ಸಮುದಾಯದವರು ಸ್ವಾವಲಂಬಿ ಬದುಕಿಗಾಗಿ ಮಗ್ಗೆ ಗ್ರಾಮದ ಸರ್ವೆ ನಂ.೧೫೧ರ ಸರ್ಕಾರಿ ಗೋಮಾಳದ 3 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಈ ಕೆಲಸವು ಕೇವಲ ಉದ್ಯೋಗವಲ್ಲದೆ, ಪೀಳಿಗೆಗಳಿಂದ ಬಂದಿರುವ ಅವರ ಪಾರಂಪರಿಕ ಕುಲಕಸುಬಾಗಿದೆ ಎಂದರು.
ಕಳೆದ 20 ವರ್ಷಗಳ ಗುತ್ತಿಗೆ ಪಡೆದುಕೊಂಡು ಸುಮಾರು 60 ರಿಂದ 70 ಮಂದಿ ಕಾರ್ಮಿಕರು ಶ್ರಮಪೂರ್ಣವಾಗಿ ಸುತ್ತಿಗೆ, ಉಳಿ, ಚಮಟಿ ಉಪಯೋಗಿಸಿ ಕಲ್ಲು ಒಡೆದು ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಅವಲಂಬಿಸಿರುವ ಸುಮಾರು 200ರಿಂದ 250 ಕುಟುಂಬಗಳ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿ ದಿನನಿತ್ಯದ ಬದುಕು ಇದೇ ಉದ್ಯೋಗದ ಮೇಲೆ ಅವಲಂಬಿತವಾಗಿದೆ. ಇವರಲ್ಲಿ ಬಹುತೇಕರು ಸ್ವಂತ ಕೃಷಿಭೂಮಿಯಿಲ್ಲದೆ ಸಂಪೂರ್ಣವಾಗಿ ಈ ಕೆಲಸದ ಮೇಲೆಯೇ ನಿರ್ಭರರಾಗಿದ್ದಾರೆ.
ಸುಳ್ಳು ಆರೋಪಗಳನ್ನು ಮಾಡುತ್ತ ಗಣಿಗಾರಿಕೆಗೆ ಅಡ್ಡಿಪಡಿಸುತ್ತಿರುವುದು ತಿಳಿದುಬಂದಿದೆ. ಈ ಒತ್ತಡದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಿರುವುದು ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ತನಿಖೆ ನಡೆಸಿ ಯಾವುದೇ ತಪ್ಪಿಲ್ಲವೆಂದು ದೃಢಪಟ್ಟಿರುವ ಸಂದರ್ಭದಲ್ಲಿ ಮತ್ತೆ ವರದಿ ಕೇಳುವುದು ಅನಾವಶ್ಯಕ ಹಾಗೂ ಅವೈಜ್ಞಾನಿಕ ಕ್ರಮ ಎಂದು ಹೇಳಿದರು. ನಾವು ಯಾರ ಬಳಿಯೂ ಕೈ ಚಾಚದೆ ಸ್ವಾವಲಂಬಿಯಾಗಿ ಬದುಕಲು ಈ ಉದ್ಯೋಗವನ್ನು ಅವಲಂಬಿಸಿದ್ದೇವೆ. ಆದರೆ ನಿರಂತರ ಅಡ್ಡಿಪಡಿಸುವಿಕೆಯಿಂದ ನಮ್ಮ ಜೀವನ ಅಸ್ಥಿರವಾಗಿದೆ ಎಂದು ಅರ್ಥಯಿಸಿದರು. ಕೂಡಲೇ ಸರಿಪಡಿಸುವಂತೆ ಸಲಹೆ ನೀಡಿದರು. ಧರಣಿಯಲ್ಲಿ ಭೋವಿ ಸಂಘದ ರಾಜ್ಯಾಧ್ಯಕ್ಷ ಹೆಚ್. ಮಂಜೇಶ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಸೇತುರಾಮು, ಲತಾ, ಕಲ್ಲು ಕುಟಕರ ಸಂಘದ ಮಹಾದೇವ್, ನಂದೀಶ್, ಆರ್‍ಮುಗ್, ಸರೋಜ, ಅಂಬಿಕಾ ಇದ್ದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.