ಮುಡಾ ಸೇರಿ ವಿವಿಧ ಹಗರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಪ್ರತಿಪಕ್ಷ ಬಿಜೆಪಿ ವಿರುದ್ಧ ರಾಜ್ಯ ಸರ್ಕಾರ ತನ್ನ ತನಿಖಾಸ್ತ್ರ ಮುಂದುವರಿಸಿದೆ.
ಕಲಬುರಗಿ : ಮುಡಾ ಸೇರಿ ವಿವಿಧ ಹಗರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಪ್ರತಿಪಕ್ಷ ಬಿಜೆಪಿ ವಿರುದ್ಧ ರಾಜ್ಯ ಸರ್ಕಾರ ತನ್ನ ತನಿಖಾಸ್ತ್ರ ಮುಂದುವರಿಸಿದೆ. ಎರಡು ವರ್ಷಗಳ ಹಿಂದೆ ಭೋವಿ ನಿಗಮದಲ್ಲಿ ಕೇಳಿಬಂದಿರುವ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿ ಶನಿವಾರ ಹಾಲಿ ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಅವರ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಅಂದರೆ 2022ರಂದು ಭೋವಿ ನಿಗಮದಲ್ಲಿ ಭಾರೀ ಅವ್ಯವಹಾರದ ಕುರಿತು ಆರೋಪಗಳು ಕೇಳಿಬಂದಿದ್ದವು. ಈ ಕುರಿತ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಅದರಂತೆ ಇದೀಗ ಕಲಬುರಗಿಯ ಸಂತೋಷ್ ಕಾಲೊನಿಯಲ್ಲಿರುವ ಮನೆ ಮೇಲೆ ಶನಿವಾರ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳು ಮಧ್ಯಾಹ್ನದಿಂದ ರಾತ್ರಿವರೆಗೆ ಪರಿಶೀಲನೆ ನಡೆಸಿದ್ದಾರೆ.
ಬೊಮ್ಮಾಯಿ ಸರ್ಕಾರಾವಧಿಯಲ್ಲಿ ಸಚಿವರಾಗಿದ್ದ ವಲ್ಯಾಪುರೆ ಅವರು ಭೋವಿ ನಿಗಮದಡಿ ಸೋಲಾರ್ ಪ್ಲಾಂಟ್ ಯೋಜನೆ ಅನುಷ್ಠಾನದಲ್ಲಿ ಬರೋಬ್ಬರಿ 12 ಕೋಟಿ ಹಣವನ್ನು ತಮ್ಮ ಪುತ್ರ ವಿನಯ್ ಹೆಸರಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಇತ್ತು. ನಕಲಿ ಫಲಾನುಭವಿಗಳನ್ನು ತೋರಿಸಿ ಹಣ ಲೂಟಿ ಮಾಡಲಾಗಿದೆ ಎಂಬ ದೂರು ಕೇಳಿಬಂದಿತ್ತು. ಈ ಸಂಬಂಧ ಕಾಳಗಿಯಲ್ಲಿ ದೂರು ಕೂಡ ದಾಖಲಾಗಿತ್ತು.
ಇದೀಗ ಹಿಂದಿನ ಬಿಜೆಪಿ ಮುಖಂಡರ ವಿರುದ್ಧದ ತನಿಖೆಯನ್ನು ಕೈಗೊತ್ತಿಕೊಂಡಿರುವ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಡಿವೈಎಸ್ಪಿ ಅಸ್ಲಾಂ ಬಾಷಾ ನೇತೃತ್ವದಲ್ಲಿ ದಾಳಿ ಮಾಡಿದ ಸಿಐಡಿ ಅಧಿಕಾರಿಗಳ ತಂಡ ಸುಮಾರು ಎಂಟು ಗಂಟೆಗಳ ಕಾಲ ಸುನೀಲ್ ವಲ್ಯಾಪುರೆ ನಿವಾಸದಲ್ಲಿ ತಪಾಸಣೆ ಮಾಡಿದೆ. ಈ ವೇಳೆ ಸೋಲಾರ್ ಯೋಜನೆ ಅನುಷ್ಠಾನದ ಹಲವು ದಾಖಲೆಗಳು ಅವರಿಗೆ ಸಿಕ್ಕಿವೆ. ನಕಲಿ ಫಲಾನುಭವಿಗಳ ಪಟ್ಟಿಗೆ ಸಂಬಂಧಿಸಿ ದಾಖಲೆಗಳು ದೊರಕಿವೆ ಎನ್ನಲಾಗಿದೆ.
ಏನಿದು ಪ್ರಕರಣ?
ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ವಲ್ಯಾಪುರೆ ಅವರು ಭೋವಿ ನಿಗಮದಡಿ ಸೋಲಾರ್ ಪ್ಲಾಂಟ್ ಯೋಜನೆ ಅನುಷ್ಠಾನದಲ್ಲಿ 12 ಕೋಟಿ ರು.ಗಳನ್ನು ತಮ್ಮ ಪುತ್ರನ ಹೆಸರಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ನಕಲಿ ಫಲಾನುಭವಿಗಳನ್ನು ತೋರಿಸಿ ಹಣ ಲೂಟಿ ಮಾಡಲಾಗಿದೆ ಎಂದು ದೂರಲಾಗಿತ್ತು.