;Resize=(412,232))
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾಡಿನ ರೈತರು, ಶ್ರಮಿಕರು, ಯುವಜನರು, ನಿರಾಶ್ರಿತರನ್ನು ಕೇಂದ್ರವಾಗಿಟ್ಟುಕೊಂಡು ಹಲವು ಹೊಸ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಸಣ್ಣ ರೈತರ ಭೂಮಿಯನ್ನು ಸರ್ಕಾರದಿಂದಲೇ ಉಚಿತ ಉಳುಮೆ ಮಾಡಿಕೊಡುವ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವ ಸಂಪುಟ ಸಭೆ ನಿರ್ಧಾರಗಳನ್ನು ತಿಳಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯನ್ನು ಪ್ರಾಯೋಗಿಕವಾಗಿ ವಿವಿಧ ಜಿಲ್ಲೆಗಳ 31 ತಾಲೂಕುಗಳಲ್ಲಿ ಮೊದಲು ಜಾರಿಗೊಳಿಸಲಾಗುವುದು. ಇದು ಯಶಸ್ವಿಯಾದರೆ ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
ಈ ಯೋಜನೆಯಡಿ ಗರಿಷ್ಠ 3 ಎಕರೆ ಕೃಷಿ ಭೂಮಿ ಹೊಂದಿರುವ ಸಣ್ಣ ರೈತರ ಜಮೀನನ್ನು ಸರ್ಕಾರದಿಂದಲೇ ಉಚಿತವಾಗಿ ಉಳುಮೆ ಮಾಡಿಕೊಡಲಾಗುವುದು. ಇಂತಹ 59 ಲಕ್ಷ ರೈತರು ರಾಜ್ಯದಲ್ಲಿದ್ದಾರೆ. ಇದಕ್ಕಾಗಿ ಪ್ರತಿ ಹಳ್ಳಿಯಲ್ಲೂ ಟ್ರ್ಯಾಕ್ಟರ್ ಹೊಂದಿರುವ ರೈತರಿಂದ ಐದು ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಆ ಟ್ರ್ಯಾಕ್ಟರ್‌ಗಳಿಂದ ಸಣ್ಣ ರೈತರ ಜಮೀನು ಉಳುಮೆ ಮಾಡಿಕೊಡಲಾಗುತ್ತದೆ. ಒಂದು ವೇಳೆ ಯಾವುದೇ ಹಳ್ಳಿಯಲ್ಲಿ ಟ್ರ್ಯಾಕ್ಟರ್‌ಗಳು ಬಾಡಿಗೆಗೆ ಸಿಗದಿದ್ದರೆ ಅಂತಹ ಹಳ್ಳಿಗಳಿಗೆ ಅಗತ್ಯಾನುಸಾರ ಸರ್ಕಾರದಿಂದಲೇ ಟ್ರ್ಯಾಕ್ಟರ್‌ಗಳನ್ನು ಖರೀದಿಸಲಾಗುವುದು. ಇದಕ್ಕಾಗಿ 152 ಕೋಟಿ ರು. ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ರೈತರ ಭೂಮಿಯನ್ನು ಸರ್ಕಾರ ಉಚಿತವಾಗಿ ಉಳುಮೆ ಮಾಡಿಕೊಡುವ ಬಗ್ಗೆ ‘ಕನ್ನಡಪ್ರಭ’ ಸೆ.7ರ ಸೋಮವಾರ ವರದಿ ಮಾಡಿತ್ತು.