ಬಿಜೆಪಿ 39 ಜಿಲ್ಲಾ ಘಟಕಗಳ ಪೈಕಿ 23 ಘಟಕಗಳಿಗೆ ಅಧ್ಯಕ್ಷರ ನೇಮಕ -16 ಜಿಲ್ಲೆಗೆ ಹಾಲಿಗಳೇ ಮುಂದುವರಿಕೆ

ಸಾರಾಂಶ

ರಾಜ್ಯ ಬಿಜೆಪಿಯ 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ಅಧಿಕೃತವಾಗಿ ನೇಮಿಸಲಾಗಿದೆ.

 ಬೆಂಗಳೂರು : ರಾಜ್ಯ ಬಿಜೆಪಿಯ 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ಅಧಿಕೃತವಾಗಿ ನೇಮಿಸಲಾಗಿದೆ.

ಈ ಪೈಕಿ 16 ಜಿಲ್ಲೆಗಳಿಗೆ ಹಾಲಿ ಅಧ್ಯಕ್ಷರನ್ನೇ ಮುಂದುವರೆಸಿದ್ದು, ಏಳು ಜಿಲ್ಲೆಗಳಿಗೆ ಬದಲಾವಣೆ ಮಾಡಿ ಹೊಸಬರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

2ನೇ ಬಾರಿಗೆ ಮುಂದುವರಿದವರು: ಮೈಸೂರು ನಗರ-ಎಲ್‌.ನಾಗೇಂದ್ರ, ಚಾಮರಾಜನಗರ-ಸಿ.ಎಸ್‌.ನಿರಂಜನಕುಮಾರ್‌, ದಕ್ಷಿಣ ಕನ್ನಡ-ಸತೀಶ್‌ ಕುಂಪಲ, ಚಿಕ್ಕಮಗಳೂರು- ದೇವರಾಜ ಶೆಟ್ಟಿ, ಉತ್ತರಕನ್ನಡ-ನಾರಾಯಣ ಶ್ರೀನಿವಾಸ ಹೆಗಡೆ, ಹುಬ್ಬಳ್ಳಿ-ಧಾರವಾಡ- ತಿಪ್ಪಣ್ಣ ಮಜ್ಜಗಿ, ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ, ಬೆಳಗಾವಿ ನಗರ-ಗೀತಾ ಸುತಾರ್‌, ಬೆಳಗಾವಿ ಗ್ರಾಮಾಂತರ- ಸುಭಾಷ್‌ ದುಂಡಪ್ಪ ಪಾಟೀಲ್‌, ಚಿಕ್ಕೋಡಿ-ಸತೀಶ್‌ ಅಪ್ಪಾಜಿಗೋಳ್‌, ಬೀದರ್‌-ಸೋಮನಾಥ ಪಾಟೀಲ್‌, ಕಲಬುರಗಿ ನಗರ- ಚಂದ್ರಕಾಂತ ಪಾಟೀಲ್‌, ಬಳ್ಳಾರಿ-ಅನಿಲ್ ಕುಮಾರ್‌ ಮೋಕಾ, ಬೆಂಗಳೂರು ಉತ್ತರ-ಎಸ್‌.ಹರೀಶ್‌, ಬೆಂಗಳೂರು ಕೇಂದ್ರ-ಸಪ್ತಗಿರಿಗೌಡ, ಬೆಂಗಳೂರು ದಕ್ಷಿಣ-ಸಿ.ಕೆ.ರಾಮಮೂರ್ತಿ.

ಹೊಸ ಜಿಲ್ಲಾಧ್ಯಕ್ಷರು: ಕಲಬುರಗಿ ಗ್ರಾಮಾಂತರ- ಅಶೋಕ್‌ ಶಾಂತಪ್ಪ ಬಗಲಿ, ಯಾದಗಿರಿ- ಬಸವರಾಜ ವಿಭೂತಿಹಳ್ಳಿ, ಕೊಪ್ಪಳ- ದಡೇಸಗೂರು ಬಸವರಾಜ್‌, ವಿಜಯನಗರ- ಸಂಜೀವರೆಡ್ಡಿ ಎಸ್‌., ಚಿಕ್ಕಬಳ್ಳಾಪುರ-ಬಿ.ಸಂದೀಪ್‌, ಕೋಲಾರ- ಓಂ ಶಕ್ತಿ ಛಲಪತಿ.---

ಆಯಾ ಮಂಡಲದಲ್ಲಿ ಸಕ್ರಿಯ ಸದಸ್ಯರು ಎಷ್ಟು ಮಂದಿ ಆಗಿದ್ದಾರೆ ಎನ್ನುವುದನ್ನು ಪಟ್ಟಿ ತೆಗೆದು ನೋಡಬೇಕು. ಇದು ಒಂದೇ ರಾತ್ರಿ ಬೆಳಗಾಗುವುದರೊಳಗೆ ಆಗುವ ಪ್ರಕ್ರಿಯೆ ಅಲ್ಲ. ಮೂರು ತಿಂಗಳಿನಿಂದ ನಡೆಯುತ್ತಿರುವ ಪ್ರಕ್ರಿಯೆ ಇದು.

-ಪಿ.ರಾಜೀವ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

3 ತಿಂಗಳಿಂದ ಪ್ರಕ್ರಿಯೆ-ರಾಜೀವ್‌: ಆಯಾ ಮಂಡಲದಲ್ಲಿ ಸಕ್ರಿಯ ಸದಸ್ಯರು ಎಷ್ಟು ಮಂದಿ ಆಗಿದ್ದಾರೆ ಎನ್ನುವುದನ್ನು ಪಟ್ಟಿ ತೆಗೆದು ನೋಡಬೇಕು. ಇದು ಒಂದೇ ರಾತ್ರಿ ಬೆಳಗಾಗುವುದರೊಳಗೆ ಆಗುವ ಪ್ರಕ್ರಿಯೆ ಅಲ್ಲ. ಮೂರು ತಿಂಗಳಿನಿಂದ ನಡೆಯುತ್ತಿರುವ ಪ್ರಕ್ರಿಯೆ ಇದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೂತ್ ಮಟ್ಟದಿಂದ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ, ಎಲ್ಲವೂ ಪಾರದರ್ಶಕವಾಗಿವೆ. ಎಲ್ಲಾ ನಾಯಕರೂ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಕೊಳ್ಳಬೇಕು ಎಂದು ಪ್ರತಿಯೊಬ್ಬರಿಗೂ ಸೂಚನೆ ಇತ್ತು. ಈ ಎಲ್ಲ ಪ್ರಕ್ರಿಯೆಯಲ್ಲಿ ಭಾಗವಹಿಸಿದವರಿಗೆ ಯಾವ ಗೊಂದಲವೂ ಉಂಟಾಗಲು ಸಾಧ್ಯವೇ ಇಲ್ಲ ಎಂದರು.

ಎಲ್ಲರ ವಿಶ್ವಾಸ ತೆಗೆದುಕೊಂಡು ಚುನಾವಣಾಧಿಕಾರಿಗಳು ಚುನಾವಣೆ ಮಾಡುತ್ತಿದ್ದಾರೆ. ಎಲ್ಲರನ್ನೂ ಓಪನ್ ಆಗಿ ಕೂರಿಸಿ ಸಭೆ ಮಾಡಲಾಗಿದೆ. ನಂತರ ನಾಮಪತ್ರಗಳನ್ನು ಸ್ವೀಕಾರ ಮಾಡಲಾಗಿದೆ. ಬಳಿಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಆ ಬಳಿಕ ಮರುಪರಿಶೀಲನೆ ನಡೆಯುತ್ತದೆ. ಆಗಿರುವ ಪ್ರಕ್ರಿಯೆಗಳ ಎಲ್ಲ ಮಾಹಿತಿಯನ್ನು ಹಂತ ಹಂತವಾಗಿ ಕೊಡುತ್ತೇವೆ. ಜಿಲ್ಲೆಗಳಿಂದ ಬಂದ ಅಭಿಪ್ರಾಯಗಳನ್ನು ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ಜಿಲ್ಲಾ ಕೋರ್ ಕಮಿಟಿ ಅಭಿಪ್ರಾಯ, ಜನಪ್ರತಿನಿಧಿಗಳ ಅಭಿಪ್ರಾಯ ಎಲ್ಲವನ್ನೂ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ಇರುತ್ತದೆ. ನಂತರ ಜಿಲ್ಲಾಧ್ಯಕ್ಷರ ಅಭಿಪ್ರಾಯವನ್ನೂ ಪಡೆದುಕೊಳ್ಳಬೇಕು. ಮೊದಲ ಹಂತದಲ್ಲಿ ಯಾರು ಅರ್ಹರು ಎಂಬ ಪಟ್ಟಿ ಮಾಡಲಾಗುತ್ತದೆ. ನಂತರ ಅವರ ಮೇಲೆ ಏನಾದರೂ ಕ್ರಿಮಿನಲ್ ಕೇಸುಗಳಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಯಾವುದಾದರೂ ಪಕ್ಷ ವಿರೋಧಿ ಚಟುವಟಿಕೆ ಇದ್ದರೆ ಅದನ್ನೂ ಪರಿಶೀಲಿಸಲಾಗುತ್ತದೆ. ಆಮೇಲೆ ಅಭಿಪ್ರಾಯ ಸಂಗ್ರಹ, ಯಾರಿಗೆ ಬಹುಮತ, ಸರ್ವಾನುಮತ ಎಂಬುದನ್ನು ಚುನಾವಣಾಧಿಕಾರಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

Share this article