ದಲಿತ ನಾಯಕನ ವಿರುದ್ಧ ಬಿಜೆಪಿ ಷಡ್ಯಂತ್ರ: ಕೈ ಕಿಡಿ

Published : Aug 30, 2026, 08:17 AM IST
b nagendra

ಸಾರಾಂಶ

ಸಚಿವ ಬಿ.ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ, ‘ಬಿಜೆಪಿಯವರು ಷಡ್ಯಂತ್ರ ಮಾಡಿ ನಾಗೇಂದ್ರ ರಾಜೀನಾಮೆ ಪಡೆದಿದ್ದಾರೆ. ಇದು ದಲಿತ ನಾಯಕನ ವಿರುದ್ಧದ ಷಡ್ಯಂತ್ರ-ಕುತಂತ್ರದ ಗೆಲುವು’ ಎಂದು ಬಿಜೆಪಿಗೆ ದಲಿತ ವಿರೋಧಿ ಪಟ್ಟ ಕಟ್ಟಿ ತಿರುಗೇಟು ನೀಡಲು ಕಾಂಗ್ರೆಸ್‌ ಮುಂದಾಗಿದೆ.

ಬೆಂಗಳೂರು : ಸಚಿವ ಬಿ.ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ, ‘ಬಿಜೆಪಿಯವರು ಷಡ್ಯಂತ್ರ ಮಾಡಿ ನಾಗೇಂದ್ರ ರಾಜೀನಾಮೆ ಪಡೆದಿದ್ದಾರೆ. ಇದು ದಲಿತ ನಾಯಕನ ವಿರುದ್ಧದ ಷಡ್ಯಂತ್ರ-ಕುತಂತ್ರದ ಗೆಲುವು’ ಎಂದು ಬಿಜೆಪಿಗೆ ದಲಿತ ವಿರೋಧಿ ಪಟ್ಟ ಕಟ್ಟಿ ತಿರುಗೇಟು ನೀಡಲು ಕಾಂಗ್ರೆಸ್‌ ಮುಂದಾಗಿದೆ.

ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವಾಗಲೇ ಬಿಜೆಪಿ ವಿರುದ್ಧ ದಲಿತ ವಿರೋಧಿ ಅಸ್ತ್ರ ಬಳಸಿದ್ದರು. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹ ಹೇಳಿಕೆ ನೀಡಿದ್ದರು. ಶನಿವಾರ ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿ ವಿರುದ್ಧ ದಲಿತ ವಿರೋಧಿ ಹೆಸರಿನಲ್ಲಿ ಮುಗಿಬಿದ್ದಿದ್ದು, ತನ್ಮೂಲಕ ಬಿಜೆಪಿ ದಲಿತ ಅದರಲ್ಲೂ ವಾಲ್ಮೀಕಿ ವಿರೋಧಿ ಎಂದು ಬಿಂಬಿಸಲು ಪ್ರಯತ್ನ ನಡೆಸಿದೆ.

ಬಿಜೆಪಿ ದಲಿತ ಏಳಿಗೆ ಸಹಿಸಲ್ಲ:

ಬಿಜೆಪಿ ವಿರುದ್ಧ ಕಿಡಿ ಕಾರಿರುವ ಸಚಿವ ಶಿವರಾಜ್‌ ತಂಗಡಗಿ, ‘ಬಿಜೆಪಿಯವರು ದಲಿತ ಸಮುದಾಯದ ಏಳಿಗೆ ಸಹಿಸಲ್ಲ. ಯಾವುದೇ ಆಧಾರವಿಲ್ಲದಿದ್ದರೂ ಅನಗತ್ಯವಾಗಿ ನಾಗೇಂದ್ರ ರಾಜೀನಾಮೆಗೆ ಹೋರಾಡಿದರು. ಆ ಮೂಲಕ ಅವರು ದಲಿತ, ವಾಲ್ಮೀಕಿ ವಿರೋಧಿಗಳು ಎಂಬುದು ಸಾಬೀತು ಮಾಡಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿಗೆ ಹೆದರಿ ನಾಗೇಂದ್ರ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್‌ ಬ್ರಿಟಿಷರಿಗೇ ಹೆದರಿಲ್ಲ, ಇನ್ನು ಪುಟ್ಗೋಸಿ ಬಿಜೆಪಿಗೆ ಹೆದರುತ್ತದೆಯೇ? ಇದು ದಲಿತ ವಿರೋಧಿ ಬಿಜೆಪಿ ನಡೆಯಿಂದ ದಲಿತರಿಗೆ ಆದ ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಮಾಡಿದ್ದಾರೆ. ದಲಿತ ಸಮುದಾಯದವರ ಕಣ್ಣೊರೆಸುವ ಸಲುವಾಗಿ ಛಲವಾದಿ‌ ನಾರಾಯಣ ಸ್ವಾಮಿ ಅವರನ್ನು ವಿಧಾನಪರಿಷತ್ ವಿಪಕ್ಷ ನಾಯಕನ್ನಾಗಿ ಮಾಡಿದ್ದಾರೆ‌. ಮುಂದೆ ನಾರಾಯಣ ಸ್ವಾಮಿ ಅವರ ಖುರ್ಚಿಯನ್ನು ಶುದ್ಧೀಕರಣ ಮಾಡಿದರೆ ಯಾವುದೇ ಆಶ್ಚರ್ಯ ಇಲ್ಲ ವ್ಯಂಗ್ಯವಾಡಿದ್ದಾರೆ.

ಕುತಂತ್ರಕ್ಕೆ ಸಿಕ್ಕ ಗೆಲುವು:

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಗೆಲುವೂ ಅಲ್ಲ. ಇದೊಂದು ದಲಿತ ಸಮುದಾಯ ನಾಯಕರ ಮೇಲಿನ ಷಡ್ಯಂತ್ರ- ಕುತಂತ್ರಕ್ಕೆ ಸಿಕ್ಕ ಗೆಲುವು ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ನಾಯಕರು ನಾಗೇಂದ್ರರ ರಾಜೀನಾಮೆಯನ್ನು ‘ಒಂದು ವಿಕೆಟ್ ಬಿದ್ದಿದೆ’ ಎಂದು ಸಂಭ್ರಮಿಸುತ್ತಿದ್ದಾರೆ. ರಾಜಕೀಯ ಎಂದರೆ ಐಪಿಲ್‌ ಕ್ರಿಕೆಟ್‌ ಅಲ್ಲ. ವಿಕೆಟ್‌ ಬಿದ್ದಿದೆ ಎನ್ನುವ ಬಿಜೆಪಿಯವರು ತಮ್ಮ ತಂಡದಲ್ಲಿ ಎಷ್ಟು ಜನ ಚಾರ್ಜ್‌ ಶೀಟ್‌ ಹಾಕಿಸಿಕೊಂಡಿದ್ದಾರೆ. ಎಷ್ಟು ಜನ ಜೈಲುವಾಸ ಅನುಭವಿಸಿದ್ಧಾರೆ. ಎಷ್ಟು ಜನ ತನಿಖೆ ಎದುರಿಸಿ ಜಾಮೀನು ಮೇಲಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ. ಆರೋಪಿಸುವುದು ತನಿಖಾ ಸಂಸ್ಥೆಗಳ ಕೆಲಸ. ಅಪರಾಧಿ ಹೌದೋ ಅಲ್ಲವೋ ನ್ಯಾಯಾಲಯ ತೀರ್ಮಾನಿಸಬೇಕು. ಬಿಜೆಪಿ ಕಚೇರಿಯು ನ್ಯಾಯಾಲಯವಲ್ಲ ಎಂದು ಹರಿಪ್ರಸಾದ್‌ ಹೇಳಿದರು.

ಮನುವಾದಿ ಧೋರಣೆ:

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಸಚಿವರಾಗಿದ್ದ ಬಿ.ನಾಗೇಂದ್ರ ರಾಜೀನಾಮೆ ಪಡೆದ ಬಿಜೆಪಿಯದ್ದು ಶೋಷಿತ ನಾಯಕರ ಮೇಲೆ ಮನುವಾದಿ ಧೋರಣೆ. ಇದು ಬಿಜೆಪಿ-ಜೆಡಿಎಸ್ ಪಕ್ಷದ ಷಡ್ಯಂತ್ರ ಎಂದು ಕಿಡಿಕಾರಿದ್ದಾರೆ.

ತಿರುಗೇಟು

- ಬಿಜೆಪಿ ವಿರುದ್ಧ ಕಾಂಗ್ರೆಸ್‌ ದಲಿತಾಸ್ತ್ರ

- ಸಚಿವ ನಾಗೇಂದ್ರ ರಾಜೀನಾಮೆ ಕೇಸಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ದಲಿತಾಸ್ತ್ರ

- ಇದು ದಲಿತ ನಾಯಕನೊಬ್ಬನ ವಿರುದ್ಧ ಬಿಜೆಪಿ ಷಡ್ಯಂತ್ರದ ಗೆಲುವೆಂದು ಪ್ರಹಾರ

- ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ತಂಗಡಗಿ, ಹರಿಪ್ರಸಾದ್‌, ಪರಂ ತೀವ್ರ ವಾಗ್ದಾಳಿ

- ಈ ಮೂಲಕ ವಾಲ್ಮೀಕಿ ನಿಗಮ ಕೇಸಲ್ಲಿ ಅಂಟಿದ ಕಳಂಕ ತೊಡೆಯಲು ಪ್ರಯತ್ನ

- ಜತೆಗೆ ಮೂಲಕ ಬಿಜೆಪಿ ದಲಿತ ವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಪ್ರಯತ್ನ

ನಾಗೇಂದ್ರ ಅವರಿಗೆ ಸೂಕ್ತ ಸ್ಥಾನಮಾನ : ಹರಿಪ್ರಸಾದ್

‘ಕಾಂಗ್ರೆಸ್‌ ಪಕ್ಷ ಬಿ.ನಾಗೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿದೆ. ನಾಗೇಂದ್ರ ನಾಲ್ಕು ಬಾರಿ ಶಾಸಕರಾಗಿದ್ದವರು. ಎಸ್ಟಿ ಸಮುದಾಯದ ಬಲಿಷ್ಠ ನಾಯಕರು. ಅವರನ್ನು ಪಕ್ಷ ನಡುನೀರಿನಲ್ಲಿ ಕೈ ಬಿಡುವುದಿಲ್ಲ. ಸೂಕ್ತ ಸ್ಥಾನಮಾನ ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಭರವಸೆ ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾಗೇಂದ್ರ ಕೇಸಲ್ಲಿ ರಣತಂತ್ರ ಹೆಣೆದು ಹೋರಾಟ: ಅಶೋಕ್‌
ಗೃಹಲಕ್ಷ್ಮಿಯರಿಗಾಗಿ ಮನೆಮನೆ ಸಮೀಕ್ಷೆ - ಅನರ್ಹ ಫಲಾನುಭವಿಗಳ ಪತ್ತೆಗೆ ಬೇಟೆ ಶುರು