ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಅರ್ಹರನ್ನು ಗುರುತಿಸಲು ಫಲಾನುಭವಿಗಳ ಬಯೋಮೆಟ್ರಿಕ್‌ ಮತ್ತು ಫೇಶಿಯಲ್‌ ಅಥೆಂಟಿಕೇಷನ್‌ ಮೂಲಕ ಮರುಪರಿಶೀಲನೆ ನಡೆಸಲು ಸರ್ಕಾರ ಆದೇಶಿಸಿದೆ.ಮಾದರಿಯಾದ ಯೋಜನೆಗೆ ಭಾನುವಾರ 3 ವರ್ಷ ತುಂಬುತ್ತಿರುವಾಗಲೇ ಈ ಕ್ರಮ ತೆಗೆದುಕೊಂಡಿದೆ.

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಅರ್ಹರನ್ನು ಗುರುತಿಸಲು ಫಲಾನುಭವಿಗಳ ಬಯೋಮೆಟ್ರಿಕ್‌ ಮತ್ತು ಫೇಶಿಯಲ್‌ ಅಥೆಂಟಿಕೇಷನ್‌ ಮೂಲಕ ಮರುಪರಿಶೀಲನೆ ನಡೆಸಲು ಸರ್ಕಾರ ಆದೇಶಿಸಿದೆ. ಮಹಿಳೆಯರಿಗೆ ಮಾಸಿಕ 2000 ರು. ನೀಡಿ ಅವರಿಗೆ ಆರ್ಥಿಕ ಶಕ್ತಿ ತುಂಬಿದ, ದೇಶದ ಹಲವು ರಾಜ್ಯಗಳ ಚುನಾವಣಾ ಪ್ರಣಾಳಿಕೆಗಳಿಗೆ ಮಾದರಿಯಾದ ಯೋಜನೆಗೆ ಭಾನುವಾರ 3 ವರ್ಷ ತುಂಬುತ್ತಿರುವಾಗಲೇ ಈ ಕ್ರಮ ತೆಗೆದುಕೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ, ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, 2023ರ ಆಗಸ್ಟ್‌ನಿಂದ ಈವರೆಗೆ 1.24 ಕೋಟಿ ಫಲಾನುಭವಿಗಳಿಗೆ 32 ಕಂತುಗಳಲ್ಲಿ 76951.13 ಕೋಟಿ ರು. ಗೃಹಲಕ್ಷ್ಮೀ ಸಹಾಯಧನ ಪಾವತಿಸಲಾಗಿದೆ. ಈ ಅವಧಿಯಲ್ಲಿ ಮರಣ ಹೊಂದಿದ ಪ್ರಕರಣ, ವಲಸೆ ಹೋದವರು ಸೇರಿದಂತೆ ಅರ್ಹರಲ್ಲದವರೂ ಗೃಹಲಕ್ಷ್ಮಿ ಸಹಾಯಧನ ಪಡೆದಿದ್ದಾರೆ. ಹೀಗಾಗಿ ಅನರ್ಹರನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಮುಂದುವರಿಸಲು ಮರುಪರಿಶೀಲನಾ ಅಭಿಯಾನ ನಡೆಸಲಾಗುತ್ತಿದ್ದು, ಅದಕ್ಕೆ 20 ಕೋಟಿ ರು. ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಯೋಮೆಟ್ರಿಕ್‌ ಮತ್ತು ಫೇಶಿಯಲ್‌ ಅಥೆಂಟಿಕೇಷನ್‌

ಈ ಪ್ರಕ್ರಿಯೆ ಅಡಿಯಲ್ಲಿ ನೋಂದಾಯಿತ ಫಲಾನುಭವಿಗಳನ್ನು ಬಯೋಮೆಟ್ರಿಕ್‌ ಮತ್ತು ಫೇಶಿಯಲ್‌ ಅಥೆಂಟಿಕೇಷನ್‌ ಮೂಲಕ ಮರುಪರಿಶೀಲನೆ ಮಾಡಲಾಗುತ್ತದೆ. ಎಲೆಕ್ಟ್ರಾನಿಕ್‌ ಡೆಲಿವರಿ ಆಫ್‌ ಸಿಟಿಜನ್ಸ್‌ ಸರ್ವೀಸಸ್‌ ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ತಂತ್ರಾಂಶ ಮತ್ತು ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಮನೆಮನೆ ಸಮೀಕ್ಷೆ, ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಪರಿಶೀಲನಾ ಕಾರ್ಯ ನಡೆಸಲಾಗುತ್ತದೆ. ಅಲ್ಲದೆ, ಮುಖ್ಯಮಂತ್ರಿ ಅವರು ಅನುಮೋದಿಸಿದ ನಿರ್ದಿಷ್ಟ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಮೂಲಕವೇ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಲು ಸೂಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮರು ಪರಿಶೀಲನಾ ಸಮೀಕ್ಷೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮರು ಪರಿಶೀಲನಾ ಸಮೀಕ್ಷೆಯ ಮಾದರಿ ನಮೂನೆಗಳನ್ನು ಸಿದ್ಧಪಡಿಸಲಿದೆ. ಮಾಸ್ಟರ್‌ ತರಬೇತುದಾರರ ಮೂಲಕ ಕ್ಷೇತ್ರ ಗಣತಿದಾರರಿಗೆ ಸಮೀಕ್ಷೆ ಕುರಿತಂತೆ ತರಬೇತಿ ನೀಡಲಾಗುತ್ತದೆ. ಆ. 30ರಿಂದ ಒಂದು ತಿಂಗಳೊಳಗೆ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಲಾಗುತ್ತದೆ. ಜಿಲ್ಲಾ ಮತ್ತು ತಾಲೂಕು ಸಮಿತಿಗಳು ಪರಿಶೀಲನಾ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಸರ್ಕಾರ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು, ಕಂದಾಯ ನಿರೀಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಗಣತಿದಾರರನ್ನಾಗಿ ನೇಮಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಾರ್ಡ್‌ ಮತ್ತು ಗ್ರಾಮವಾರು ನಿಯೋಜನೆ ಮಾಡಲಿದ್ದಾರೆ. ಗ್ಯಾರಂಟಿ ಸಮಿತಿ ಸದಸ್ಯರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಬೇಕು ಹಾಗೂ ಫಲಾನುಭವಿಗಳು ಅದನ್ನು ಭರ್ತಿ ಮಾಡಿ ಆಗಲೇ ವಾಪಸ್‌ ನೀಡಬೇಕು. ಈ ವೇಳೆ ಗಣತಿದಾರರು ಮೊಬೈಲ್‌ ಆ್ಯಪ್‌ ಬಳಸಿ ಫಲಾನುಭವಿಯ ಫೋಟೋ, ಮನೆಯ ಫೋಟೋ ಹಾಗೂ ಸ್ವಯಂಚಾಲಿತ ಜಿಪಿಎಸ್‌ ನಿರ್ದೇಶಾಂಕಗಳನ್ನು ಸೆರೆ ಹಿಡಿಯಬೇಕು ಎಂದು ನಿರ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ.

ಗಣತಿ ವೇಳೆಯಲ್ಲೇ ಫಲಾನುಭವಿಯ ಫೇಶಿಯಲ್‌ ಅಥೆಂಟಿಕೇಷನ್‌ ಮತ್ತು ಮತದಾರ ಗುರುತಿನ ಚೀಟಿ ವಿವರಗಳನ್ನು ಮೊಬೈಲ್‌ ಆ್ಯಪ್‌ನಲ್ಲಿ ಡಿಜಿಟಲ್‌ ರೂಪದಲ್ಲಿ ದಾಖಲಿಸಲಾಗುತ್ತದೆ. ಇನ್ನು, ಫಲಾನುಭವಿ ವಲಸೆ ಹೋಗಿದ್ದರೆ, ಸ್ಥಳಾಂತರಗೊಂಡಿದ್ದರೆ ಅಥವಾ ಮೃತಪಟ್ಟಿದ್ದರೆ ಅದರ ಮಾಹಿತಿಯನ್ನೂ ಆ್ಯಪ್‌ನಲ್ಲಿ ನಮೂದಿಸಬೇಕು. ಫಲಾನುಭವಿಯ ಫೇಶಿಯಲ್‌ ಅಥೆಂಟಿಕೇಷನ್‌ ಮಾಡಲಾಗದಿದ್ದರೆ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಒನ್‌ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್‌ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಮರು ಪರಿಶೀಲನೆಯಿಂದ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅರ್ಹರಿಗೆ ಮಾತ್ರ ಯೋಜನೆಯ ಸೌಲಭ್ಯ ಮುಂದುವರಿಸಲು ಅನುಕೂಲವಾಗುತ್ತದೆ. ಇನ್ನು, ಅಧಿವೇಶನದಲ್ಲಿ ಅನರ್ಹ ಫಲಾನುಭವಿಗಳಿಗೆ ಹಣ ನೀಡುವುದನ್ನು ತಡೆಯಲು ಕೈಗೊಳ್ಳುವ ಕ್ರಮಗಳ ಕುರಿತಂತೆ ಪ್ರಶ್ನೆ ಕೇಳಿದ್ದೆ. ಅದಕ್ಕೆ ಮುಖ್ಯಮಂತ್ರಿ ಅವರು ಬಯೋಮೆಟ್ರಿಕ್‌ ಮತ್ತು ಫೇಶಿಯಲ್‌ ಅಥೆಂಟಿಕೇಶನ್‌ ಬಳಿ ಸಮಗ್ರ ಮರುಪರಿಶೀಲನೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಅದರಂತೆ ಇದೀಗ ಸರ್ಕಾರ ಆದೇಶಿಸಿದೆ ಎಂದು ತಿಳಿಸಿದ್ದಾರೆ.