ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಆದ ‘ಗೃಹ ಲಕ್ಷ್ಮಿ’ ಯೋಜನೆ ಇಂದಿಗೆ (ಆ.30) ಮೂರು ವರ್ಷ ಪೂರೈಸಿದ್ದು, 1.24 ಕೋಟಿ ಫಲಾನುಭವಿಗಳ ಖಾತೆಗಳಿಗೆ ಬರೋಬ್ಬರಿ ಖಾತೆಗೆ 76,951 ಕೋಟಿ ರು. ಸಂದಾಯವಾಗಿದೆ.

ಬೆಂಗಳೂರು : ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಆದ ‘ಗೃಹ ಲಕ್ಷ್ಮಿ’ ಯೋಜನೆ ಇಂದಿಗೆ (ಆ.30) ಮೂರು ವರ್ಷ ಪೂರೈಸಿದ್ದು, 1.24 ಕೋಟಿ ಫಲಾನುಭವಿಗಳ ಖಾತೆಗಳಿಗೆ ಬರೋಬ್ಬರಿ ಖಾತೆಗೆ 76,951 ಕೋಟಿ ರು. ಸಂದಾಯವಾಗಿದೆ.

ದೇಶದಲ್ಲೇ ಜನಪ್ರಿಯ ಹಾಗೂ ಉಳಿದ ರಾಜ್ಯಗಳಿಗೆ ಮಾದರಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಇಂದು 3 ವರ್ಷ ಪೂರೈಸಿದ ಸಂಭ್ರಮ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಭಾನುವಾರ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪಿಂಕ್‌ ಲೈಟಿಂಗ್‌ ವ್ಯವಸ್ಥೆ ಮಾಡಿದ್ದು, ಕಟ್ಟಡಗಳು ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ.

ಅನ್ಯ ರಾಜ್ಯಗಳಿಗೂ ಮಾದರಿ:

ರಾಜ್ಯ ಸರ್ಕಾರ 2023ರ ಆ.30 ರಂದು ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರು. ನೀಡುವ ಯೋಜನೆ ಶುರು ಮಾಡಿತ್ತು. ಇದುವರೆಗೆ 32 ಕಂತುಗಳಲ್ಲಿ 1.24 ಕೋಟಿ ಫಲಾನುಭವಿಗಳ ಖಾತೆಗೆ 76,951 ಕೋಟಿ ರು. ಪಾವತಿಸಲಾಗಿದೆ.

ಇದು ದೇಶಕ್ಕೇ ಮಾದರಿಯಾಗಿದ್ದು, ಗೃಹ ಲಕ್ಷ್ಮಿ ಪ್ರೇರಣೆಯಿಂದ ಮಹಾರಾಷ್ಟ್ರದಲ್ಲಿ ''''ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್'''' ಯೋಜನೆ ಆರಂಭಿಸಿತು. ಮಧ್ಯಪ್ರದೇಶದಲ್ಲಿ ''''ಲಾಡ್ಲಿ ಬೆಹನಾ'''', ಜಾರ್ಖಂಡ್‌ ರಾಜ್ಯದಲ್ಲಿ ''''ಮುಖ್ಯಮಂತ್ರಿ ಮೈಯಿ ಸಮ್ಮಾನ್'''' ಯೋಜನೆ ಘೋಷಿಸಲಾಯಿತು. ತೆಲಂಗಾಣದಲ್ಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ.

ತಲಾದಾಯದಲ್ಲೇ ದೇಶಕ್ಕೆ ನಂ.1:

ರಾಜ್ಯದ ಗೃಹ ಲಕ್ಷ್ಮಿ ಯೋಜನೆಯು ಕೋಟ್ಯಂತರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ. ತನ್ಮೂಲಕ ತಲಾದಾಯದಲ್ಲಿ ದೇಶ ಭಾರತದಲ್ಲೇ ಮೊದಲ ಸ್ಥಾನ ಪಡೆಯಲು ಪ್ರಮುಖ ಕೊಡುಗೆ ನೀಡಿದೆ. ಗ್ರಾಮೀಣ ಭಾಗದ ಹಲವು ಮಹಿಳೆಯರು ಈ ಯೋಜನೆ ಹಣವನ್ನು ಒಗ್ಗೂಡಿಸಿ ಸಣ್ಣ ಉದ್ಯೋಗ, ಹೈನುಗಾರಿಕೆ ಅಥವಾ ಬೋರ್‌ವೆಲ್ ಕೊರೆಸುವಂಥ ಸ್ವಉದ್ಯೋಗಗಳ ಮೂಲಕ ಬದುಕು ಕಟ್ಟಿಕೊಂಡಿರುವುದು ಯೋಜನೆಯ ನೈಜ ಯಶಸ್ಸಿಗೆ ಸಾಕ್ಷಿ.

ಅರ್ಹರಿಗೆ ಮಾತ್ರ ಆದ್ಯತೆ:

ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಮತ್ತು ಮರಣ ಹೊಂದಿದ, ವಲಸೆ ಹೋದ ಅಥವಾ ಆದಾಯ ತೆರಿಗೆ ಪಾವತಿಸುತ್ತಿರುವ ಅನರ್ಹರನ್ನು ಕೈಬಿಡಲು ಸರ್ಕಾರ ಪ್ರಸ್ತುತ ಮರುಪರಿಶೀಲನಾ ಅಭಿಯಾನ ಹಮ್ಮಿಕೊಂಡಿದೆ.

ಇದರ ಮೂಲಕ ಕೇವಲ ನೈಜ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ನಿರಂತರವಾಗಿ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.