‘ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ-ಜೆಡಿಎಸ್ ನಡೆಸಿದ ನಿರಂತರ ಹೋರಾಟ ಮತ್ತು ದಾಖಲೆ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಲು ಕಾರಣ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರು : ‘ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ-ಜೆಡಿಎಸ್ ನಡೆಸಿದ ನಿರಂತರ ಹೋರಾಟ ಮತ್ತು ದಾಖಲೆ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಲು ಕಾರಣ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಇದು ಕೇವಲ ಬಿಜೆಪಿಗೆ ಸಿಕ್ಕಿರುವ ಜಯವಲ್ಲ. ಇಡೀ ದಲಿತ ಸಮುದಾಯಕ್ಕೆ ಸಂದಿರುವ ಜಯ. ಹೊಸ ಮುಖ್ಯಮಂತ್ರಿ ಬಂದ ಮೂರೇ ತಿಂಗಳಲ್ಲಿ ಒಬ್ಬ ಸಚಿವರ ವಿಕೆಟ್ ಬಿದ್ದಿದೆ. ಈ ಕ್ರೆಡಿಟ್ ಹೋರಾಟ ಮಾಡಿದ ಎಲ್ಲರಿಗೂ ದೊರೆಯುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಧಿವೇಶನ ಆರಂಭವಾದಾಗಿನಿಂದ ಎಂಟು ದಿನಗಳ ಕಾಲ ನಿರಂತರವಾಗಿ ನಾವು ಹೋರಾಟ ಮಾಡಿದ್ದೇವೆ. ದಲಿತರ ಹಣ ನುಂಗಿದರೆ ಉಳಿಗಾಲವಿಲ್ಲ ಎಂಬ ಪಾಠವನ್ನು ಕಾಂಗ್ರೆಸ್‌ಗೆ ಕಲಿಸಿದ್ದೇವೆ. ಬಿಜೆಪಿ-ಜೆಡಿಎಸ್ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ಮಾಡಿ ನಾಗೇಂದ್ರ ಅವರ ರಾಜೀನಾಮೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ. ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಘಟನೆ ನಡೆದಿದೆ. ನಮ್ಮ ಹೋರಾಟ ಹಾಗೂ ಗುರಿ ಸ್ಪಷ್ಟವಾಗಿತ್ತು ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಸಲ ನಾಗೇಂದ್ರ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ನಿಶ್ಚಯಿಸಿ ನೀಲನಕ್ಷೆ ಸಿದ್ಧಪಡಿಸಿಕೊಂಡು ಕಾರ್ಯತಂತ್ರ ರೂಪಿಸಲಾಗಿತ್ತು. ಅದರನ್ವಯ ಮೈತ್ರಿ ಪಕ್ಷದ ನಾಯಕರಾದ ಕುಮಾರಸ್ವಾಮಿ ಮತ್ತು ಇತರೆ ಮುಖಂಡರ ಜತೆ ಚರ್ಚೆ ನಡೆಸಲಾಯಿತು.
ಪ್ರತಿನಿತ್ಯ ನಮ್ಮ ಕಾರ್ಯತಂತ್ರ ಭಿನ್ನವಾಗಿರುತ್ತಿತ್ತು. ಶಾಸಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.
ಜೆಡಿಎಸ್ ಶಾಸಕರಿಗೆ ಅಶೋಕ್ ಸೂಚನೆಯಂತೆ ನಡೆದುಕೊಳ್ಳುವಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದರು. ಅದಕ್ಕೆ ಪೂರಕವಾಗಿ ಸದನದ ಹೊರಗೆ ಕೂಡ ಪ್ರತಿಭಟನೆ ನಡೆಸಲಾಗುತ್ತಿತ್ತು. ಮಾಧ್ಯಮಗಳು ನಮ್ಮ ಹೋರಾಟದ ನೈಜತೆ ಗಮನಿಸಿ ಬೆಂಬಲಿಸಿದವು. ಕಾಂಗ್ರೆಸ್ ಮುಖಂಡರ ಹೇಳಿಕೆಗಳಿಗೆ ಪ್ರತಿಯಾಗಿ ದಾಖಲೆಗಳನ್ನು ಬಿಡುಗಡೆ ಮಾಡುತ್ತಾ ಬಂದೆ. ಅಂತಿಮವಾಗಿ ಸುಪ್ರೀಂ ಕೋರ್ಟ್ ತೀರ್ಪನ್ನೂ ಉಲ್ಲೇಖಿಸಿ ಅವರ ಕೈಕಟ್ಟಿ ಹಾಕಲಾಯಿತು. ಒಟ್ಟು 37 ದಾಖಲೆ ಬಿಡುಗಡೆ ಮಾಡಿದ್ದೇನೆ. ಕೊನೆಯಲ್ಲಿ ನಮ್ಮ ಧರಣಿಯನ್ನು ಸದನದ ಬಾವಿಗೆ ಸ್ಥಳಾಂತರಿಸಿ ಹಗಲು - ರಾತ್ರಿ ಧರಣಿ ಮಾಡುವುದಾಗಿ ಘೋಷಿಸುತ್ತಿದ್ದಂತೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಎರಡು ದಿನ ಮುಂಚಿತವಾಗಿ ಕಲಾಪ ಮುಂದೂಡಿದರು. ಆಗಲೇ ರಾಜೀನಾಮೆ ನೀಡಲು ಸಿಎಂ ನಾಗೇಂದ್ರ ಅವರಿಗೆ ಸೂಚನೆ ಕೊಟ್ಟಿದ್ದರು ಎಂದು ಅಶೋಕ್ ವಿವರಿಸಿದರು.
ಒಕ್ಕಲಿಗರು, ಲಿಂಗಾಯತರು ತಪ್ಪು ಮಾಡಿದರೆ ಅವರು ಜಾತಿ ಹೆಸರಲ್ಲಿ ರಕ್ಷಣೆ ಪಡೆಯುತ್ತಾರೆಯೇ? ದಲಿತರು ತಪ್ಪು ಮಾಡಿದರೆ ಆ ಜಾತಿ ಹೆಸರಲ್ಲಿ ರಕ್ಷಣೆ ಪಡೆಯುತ್ತಾರೆಯೇ? ಅಂಥ ಅವಕಾಶ ಸಂವಿಧಾನದಲ್ಲಿ ಇದೆಯೇ? ನಾಗೇಂದ್ರ ಜಾತಿ ಹೆಸರಲ್ಲಿ ರಕ್ಷಣೆ ಪಡೆಯಲು ಮುಂದಾದರೂ ಅವರ ಸಮಾಜದ ಯಾರೂ ಸಹಾಯಕ್ಕೆ ಬಂದಿಲ್ಲ. ಇದು ನಮ್ಮ ಬಾಂಧವರ ಹಣ, ದಲಿತರ ಹಣ ಎಂದು ಲೂಟಿ ಮಾಡುವಾಗಲೇ ಯೋಚಿಸಬೇಕಿತ್ತು. ಲೂಟಿ ಮಾಡುವಾಗ ಇಲ್ಲದ ಆಲೋಚನೆಗಳು ರಾಜೀನಾಮೆ ನೀಡುವಾಗ ಬಂದಿದೆ. ನಾವು ದಲಿತರ ಪರವಾಗಿ ಹೋರಾಟ ಮಾಡಿದ್ದೇವೆ. ತಪ್ಪು ಯಾರದೆಂದು ನ್ಯಾಯಾಲಯದಲ್ಲಿ ಸಾಬೀತಾಗಬೇಕು. ಅಲ್ಲಿಯವರೆಗೆ ಕಾಯಬೇಕು ಎಂದರು.
ಮುಜುಗರದ ಹಿನ್ನೆಲೆಯಲ್ಲಿ ರಾಜೀನಾಮೆ:
ರಾಜ್ಯಪಾಲರಿಂದ ಅನುಮತಿ ಸಿಕ್ಕಿದರೆ ಸಚಿವರು ಮತ್ತೆ ಬಂಧನ ಆಗಿ ವಿಚಾರಣೆ ಎದುರಿಸಬೇಕಾಗುತ್ತದೆ. ಆಗ ಪ್ರತಿ ದಿನ ಮಾಧ್ಯಮಗಳಲ್ಲಿ ಸುದ್ದಿ ಬಂದು ಸರ್ಕಾರಕ್ಕೆ ಮುಜುಗರವಾಗುತ್ತದೆ. ಅದಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಈ ಹೋರಾಟಕ್ಕೆ ಕೈ ಜೋಡಿಸಿದ ಎಲ್ಲ ಶಾಸಕರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಾರ ನಾಗೇಂದ್ರ ಅಮಾಯಕರಾಗಿದ್ದರೆ ಎಲ್ಲ ಚಾರ್ಜ್‌ಶೀಟ್‌ಗಳಲ್ಲೂ ಅವರು ಆರೋಪಿಯಾಗುತ್ತಿರಲಿಲ್ಲ. ಜೊತೆಗೆ ಇವರ ಬಲಗೈ ನೆಕ್ಕಂಟಿ ನಾಗರಾಜ್ ಮೇಲೆ ಕೂಡ ಆರೋಪ ಇದೆ. ಈ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗಿತ್ತು. ನಾಗೇಂದ್ರ ಹೆಸರಲ್ಲಿ ನಾವು ಟಾರ್ಗೆಟ್ ಮಾಡುತ್ತಿದ್ದೇವೆ ಅನ್ನುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಪಿ.ಚಂದ್ರಶೇಖರನ್ ಕೂಡ ದಲಿತರೇ ಆಗಿದ್ದರು ಎಂಬುದನ್ನು ಮರೆಯಬಾರದು ಎಂದು ಅಶೋಕ್ ಹೇಳಿದರು.
ದಲಿತ ಅಧಿಕಾರಿಗೆ ನ್ಯಾಯ ಸಿಕ್ಕಿಲ್ಲ:
ಆ ದಲಿತ ಅಧಿಕಾರಿಗೆ ನ್ಯಾಯವಿಲ್ಲ. ಅವರ ಕುಟುಂಬದವರಿಗೆ ನ್ಯಾಯ ಸಿಕ್ಕಿಲ್ಲ. ಅಂತಹ ಅಧಿಕಾರಿ ಮನೆಗೆ ಹೋಗಿ ಕಾಂಗ್ರೆಸ್‌ನವರು ಸಾಂತ್ವನ ಹೇಳಿಲ್ಲ. ಈ ಪ್ರಕರಣದಲ್ಲಿ ಹಣದ ದುರ್ಬಳಕೆ ನಡೆದು ಬೇನಾಮಿ ಟೆಂಡರ್ ನೀಡಲಾಗಿತ್ತು. ಈ ಅಕ್ರಮಕ್ಕಾಗಿ ಒಬ್ಬ ದಲಿತ ಅಧಿಕಾರಿ ಸಾಯಬಹುದು. ಆದರೆ ಸಚಿವರ ರಾಜೀನಾಮೆ ಪಡೆಯಬಾರದು ಎಂಬುದು ಕಾಂಗ್ರೆಸ್ ನಿಲುವು ಎಂದು ಹರಿಹಾಯ್ದರು.
ಅಧಿಕಾರಿಗೆ ಅನ್ಯಾಯವಾದರೆ ನ್ಯಾಯ ಕೊಡಬೇಡಿ, ಸಚಿವನಿಗೆ ಅನ್ಯಾಯ ಎನಿಸಿದರೆ ನ್ಯಾಯ ಕೊಡಿ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆಯೇ? ಇದು ಯಾವ ರೀತಿಯ ದಲಿತ ನ್ಯಾಯ? ಚಂದ್ರಶೇಖರನ್ ಕುಟುಂಬಕ್ಕೆ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಇನ್ನೂ ನೀಡಿಲ್ಲ. ಅವರ ಮಗನಿಗೆ ಉದ್ಯೋಗ ಕೊಡುತ್ತೇನೆಂದು ಘೋಷಣೆ ಮಾಡಿ, ಅದನ್ನೂ ಈಡೇರಿಸಿಲ್ಲ. ಆದರೆ ನಾಗೇಂದ್ರಗೆ ಮಾತ್ರ ಅನ್ಯಾಯವಾಗಿದೆ. ಇಡೀ ಕರ್ನಾಟಕದಲ್ಲಿ ನಾಗೇಂದ್ರ ಒಬ್ಬರೇ ದಲಿತರಾ? ದಲಿತರ 187 ಕೋಟಿ ರು. ದಲಿತರ ಪ್ರದೇಶಾಭಿವೃದ್ಧಿಗೆ, ಅವರ ಮಕ್ಕಳ ಶಾಲೆಗೆ, ಉದ್ಯೋಗ ಯೋಜನೆಗಳಿಗೆ ಬಳಕೆಯಾಗಬೇಕಿತ್ತು. ನಾವು ಇದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದ ಮೇಲೆ ಇದು ಹೇಗೆ ದಲಿತರ ವಿರೋಧಿ ನಿಲುವಾಗುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು.
ನಾನು ಅಧಿವೇಶನದಲ್ಲಿ ಸರಿಯಾದ ದಾಖಲೆಗಳನ್ನು ನೀಡಿದ್ದೇನೆ. ಸುಮ್ಮನೆ ಮಾತಾಡಲು ಇದು ಕಡಲೆಕಾಯಿ ವ್ಯಾಪಾರವಲ್ಲ. ಅಧಿಕಾರಿ ಆತ್ಮಹತ್ಯೆ ಪತ್ರದಲ್ಲಿ ಹಣದ ಮೊತ್ತ ನಮೂದಿಸಿರುವ ಬಗ್ಗೆ ನಾನು ದಾಖಲೆಗಳನ್ನು ನೀಡಿದ್ದೇನೆ. ಸಿಬಿಐ ಪ್ರಕಟಿಸಿದ್ದ ಅಂಶಗಳನ್ನು ಕೂಡ ದಾಖಲೆಯಾಗಿ ಸದನಕ್ಕೆ ನೀಡಿದ್ದೇನೆ. ಸಿಬಿಐ ಪ್ರಕಟಣೆಯಲ್ಲೇ ನಾಗೇಂದ್ರ ಅವರನ್ನು ‘ಕಿಂಗ್‌ಪಿನ್ʼ ಎಂದು ಉಲ್ಲೇಖಿಸಲಾಗಿದೆ. ಇದು ತಪ್ಪಾಗಿದ್ದರೆ ಸಿಬಿಐ ಹಾಗೂ ಇ.ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಿತ್ತು ಎಂದು ಸವಾಲು ಹಾಕಿದರು.
ಐದು ಕೋಟಿ ರು. ಗಿಂತ ಹೆಚ್ಚಿನ ಟೆಂಡರ್ ಅಥವಾ ವರ್ಗಾವಣೆಗೆ ಸಚಿವ ಸಂಪುಟದ ಅನುಮೋದನೆ ಬೇಕಾಗುತ್ತದೆ. ಹಾಗಿದ್ದಾಗ 50-60 ಕೋಟಿ ರು. ವರ್ಗಾವಣೆ ಮಾಡಿದ್ದು ಹೇಗೆ? ಸುಮಾರು 600 ಖಾತೆಗಳಿಗೆ ಒಬ್ಬ ಅಕೌಂಟೆಂಟ್ ಹಣ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ. ಇದನ್ನು ಮಾಡಿದ್ದು ಸಚಿವರ ಮೌಖಿಕ ಸೂಚನೆ ಮೇರೆಗೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆಯಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬ್ಯಾಂಕ್‌ಗಳಿಗೆ ಅಧಿಕೃತವಾಗಿ ಪತ್ರ ಬರೆಯಲಾಗಿದೆ. ಯೂನಿಯನ್ ಬ್ಯಾಂಕ್‌ನ ಎಂ.ಜಿ.ರಸ್ತೆ ಶಾಖೆಯಲ್ಲಿ ಹಣ ಠೇವಣಿ ಇಟ್ಟು, ಅದಕ್ಕೆ ಸಾಲ ನೀಡಿ ಎಂದು ಕೇಳಲಾಗಿದೆ. ಹಣ ಇರುವಾಗ ಸಾಲ ಯಾಕೆ ಪಡೆಯಬೇಕು? ಈ ಎಲ್ಲ ವಿಷಯಗಳ ಕುರಿತು 37 ದಾಖಲೆಗಳನ್ನು ನಾನು ಬಿಡುಗಡೆಗೊಳಿಸಿದ್ದೇನೆ. ವಿಧಿವಿಜ್ಞಾನ ಪರೀಕ್ಷೆಯ ಮೊಬೈಲ್ ಚಾಟ್ ವಿವರವನ್ನೂ ಸದನದಲ್ಲಿ ತೋರಿಸಿದ್ದೇನೆ ಎಂದರು.
ತಪ್ಪು ಮಾಡಿಲ್ಲವೆಂದರೆ ಸಿದ್ದರಾಮಯ್ಯನವರ ಅವಧಿಯಲ್ಲಿ ರಾಜೀನಾಮೆ ಪಡೆದಿದ್ದೇಕೆ? ಸಿದ್ದರಾಮಯ್ಯನವರಿಗೆ ಹಾಗೂ ಆಗ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್‌ಗೆ ಇವರು ದಲಿತರು ಎಂದು ಗೊತ್ತಿರಲಿಲ್ಲವೇ? ಯಾಕೆ ಅದನ್ನು ಸಿಎಂ ಡಿ.ಕೆ.ಶಿವಕುಮಾರ್ ಆಗ ತಡೆಯಲಿಲ್ಲ? ಆಗಲೇ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ರಾಹುಲ್ ಗಾಂಧಿಗೆ ಮನವರಿಕೆ ಮಾಡಿ ರಾಜೀನಾಮೆ ನೀಡುವುದನ್ನು ತಪ್ಪಿಸಬೇಕಿತ್ತು ಎಂದು ಪ್ರತಿಪಕ್ಷದ ನಾಯಕರು ತರಾಟೆ ತೆಗೆದುಕೊಂಡರು.
ಹಣ ವಶಪಡಿಸಿಕೊಂಡರೆ ಆರೋಪಿ ಬಿಟ್ಟುಬಿಡಬೇಕೇ?:
ಪೊಲೀಸರು ಕಳ್ಳನನ್ನು ಹಿಡಿದು ಹಣ ಮರಳಿಸಿದರೆ ಕಳ್ಳನನ್ನು ಬಿಟ್ಟು ಬಿಡುತ್ತಾರೆಯೇ? ಅದೇ ರೀತಿ ಹಣ ವಾಪಸ್ ಬಂದಿದೆ ಎನ್ನುತ್ತಿದ್ದಾರೆ. ಹಣ ಮರಳಿದ್ದರೆ ತಪ್ಪಿತಸ್ಥ ಯಾರೆಂದು ಕಾಂಗ್ರೆಸ್ ತಿಳಿಸಬೇಕು. ತಪ್ಪಿತಸ್ಥ ಯಾರೆಂದು ಸಾಬೀತಾಗುವುದು ಜನತಾ ನ್ಯಾಯಾಲಯವಲ್ಲ. ಅದನ್ನು ತನಿಖಾ ಸಂಸ್ಥೆಗಳು ಸಾಬೀತು ಮಾಡುತ್ತವೆ. ಅವರನ್ನು ಅಪರಾಧಿ ಎಂದೂ ಸಾಬೀತುಪಡಿಸಿ ಶಿಕ್ಷೆ ಕೊಡುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ. ಆದರೆ ನಾಗೇಂದ್ರ ಅವರಿಗೆ ಯಾವುದೇ ನ್ಯಾಯಾಲಯದಿಂದ ಕ್ಲೀನ್ ಚಿಟ್ ಸಿಕ್ಕಿಲ್ಲ ಎಂದು ಅಶೋಕ್ ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ವಿರುದ್ಧ ಆರೋಪ ಬಂದಾಗ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ ಮೊದಲಾದ ನಾಯಕರು ತೊಡೆ ತಟ್ಟಿ ಹಲ್ಲೆ ನಡೆಸುವಂತೆ ಮೇಲೆರಗಿ ಬಂದಿದ್ದರು. ಆಗ ಕಾಂಗ್ರೆಸ್ ನಾಯಕರು ಸದನಕ್ಕೆ ಗೌರವ ತೋರಿರಲಿಲ್ಲ. ನಾವು ಹಾಗೆ ಮಾಡದೆ ನ್ಯಾಯಯುತವಾಗಿ ಧರಣಿ ಮಾಡಿದ್ದೆವು. ನಂತರ ಹಗಲು ರಾತ್ರಿ ಧರಣಿ ಮಾಡುವುದಾಗಿ ಘೋಷಣೆ ಮಾಡಿದ ಕೂಡಲೇ ಸದನ ರದ್ದು ಮಾಡಿದರು. ಬಳಿಕ ರಾಜೀನಾಮೆ ಪಡೆಯಲಾಗಿದೆ ಎಂದರು.
ಇದು ಕೇವಲ ಬಿಜೆಪಿಗೆ ಸಿಕ್ಕಿರುವ ಜಯವಲ್ಲ. ಇಡೀ ದಲಿತ ಸಮುದಾಯಕ್ಕೆ ಸಂದಿರುವ ಜಯ. ಹೊಸ ಮುಖ್ಯಮಂತ್ರಿ ಬಂದ ಮೂರೇ ತಿಂಗಳಲ್ಲಿ ಒಬ್ಬ ಸಚಿವರ ವಿಕೆಟ್ ಬಿದ್ದಿದೆ. ಈ ಕ್ರೆಡಿಟ್ ಹೋರಾಟ ಮಾಡಿದ ಎಲ್ಲರಿಗೂ ದೊರೆಯುತ್ತದೆ.
-ಆರ್.ಅಶೋಕ್, ಪ್ರತಿಪಕ್ಷದ ನಾಯಕ.
ಹೋರಾಟ ಹೇಗಿತ್ತು?
- ನಾಗೇಂದ್ರ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ನಿಶ್ಚಯಿಸಿ ನೀಲನಕ್ಷೆ ಸಿದ್ಧಪಡಿಸಿ ಕಾರ್ಯತಂತ್ರ ರೂಪಿಸಲಾಗಿತ್ತು
- ಹೋರಾಟದ ಬಗ್ಗೆ ಎಚ್‌ಡಿಕೆ, ಇತರರ ಜತೆ ನಿರಂತರ ಚರ್ಚೆ. ಅದಕ್ಕೆ ತಕ್ಕಂತೆ ನಿತ್ಯವೂ ನಮ್ಮ ಕಾರ್ಯತಂತ್ರ ಭಿನ್ನವಾಗಿರುತ್ತಿತ್ತು
- ಸದನದೊಳಗಿನ ಹೋರಾಟ, ಕೈ ನಾಯಕರ ಹೇಳಿಕೆಗೆ ಪ್ರತಿಯಾಗಿ ದಾಖಲೆ ಬಿಡುಗಡೆ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿತು
- ಕೊನೆಯಲ್ಲಿ ಅಹೋರಾತ್ರಿ ಧರಣಿ ಘೋಷಿಸುತ್ತಿದ್ದಂತೆ ಬೆಚ್ಚಿದ ಸರ್ಕಾರ ಎರಡು ದಿನ ಮುಂಚಿತವಾಗಿ ಅಧಿವೇಶನ ಮುಂದೂಡಿತು
- ಆಗಲೇ ನಾಗೇಂದ್ರ ರಾಜೀನಾಮೆಗೆ ಸೂಚನೆ. ಇದು ಕೇವಲ ಬಿಜೆಪಿ ಸಿಕ್ಕ ಗೆಲುವಲ್ಲ. ಇಡೀ ದಲಿತ ಸಮುದಾಯದ ಜಯ: ಅಶೋಕ್


