ಸರ್ಕಾರ ಶೀಘ್ರ ಪತನ - ಹೆಗಲ ಮೇಲೆ ‘ಕಾಗೆ’ ಕೂತಿದೆ : ಬಿಜೆಪಿ ಭವಿಷ್ಯ

Published : Jun 24, 2025, 10:33 AM IST
DV Sadananda Gowda, BY Vijayendra, R Ashok

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರು ಮಾಡುತ್ತಿರುವ ಆರೋಪವನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ

 ಬೆಂಗಳೂರು :  ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರು ಮಾಡುತ್ತಿರುವ ಆರೋಪವನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಬಿ.ಆರ್‌.ಪಾಟೀಲ, ರಾಜು ಕಾಗೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಾಯ್ಬಿಡಲಿದ್ದಾರೆ. ಸ್ವಪಕ್ಷೀಯ ಶಾಸಕರೇ ಆರೋಪಿಸಿದಂತೆ ಇದೊಂದು ಭ್ರಷ್ಟ ಸರ್ಕಾರ, ಈ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ಶಾಸಕ ರಾಜು ಕಾಗೆ ಮಾತ್ರವಲ್ಲ; ಇನ್ನೂ ಹತ್ತಾರು ಶಾಸಕರಿದ್ದಾರೆ. ಒಬ್ಬೊಬ್ಬರೇ ಬಾಯಿ ಬಿಡಲಿದ್ದಾರೆ. ನೀವೇ ಕಾದು ನೋಡಿ’ ಎಂದರು.

ಮನೆ ಕೊಡುವ ಸಂದರ್ಭದಲ್ಲಿ ಲಂಚ ಕೊಡದೆ ಏನೂ ಕೆಲಸ ಆಗುವುದಿಲ್ಲ ಎಂದು ಹಿರಿಯ ಶಾಸಕ ಬಿ.ಆರ್‌.ಪಾಟೀಲ ಗುರುತರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಯವರು ಕರೆದರೆ ಅವರ ಮುಂದೆಯೂ ವಾಸ್ತವಿಕ ಸ್ಥಿತಿಯನ್ನು ತಿಳಿಸುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಯವರು ಬಿ.ಆರ್.ಪಾಟೀಲರನ್ನು ಕರೆದು, ಬಾಯಿ ಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ. ಸಿಎಂ ಶಾಸಕ ರಾಜು ಕಾಗೆ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. ಮುಂದೆ ಇನ್ನೂ ಅನೇಕ ಶಾಸಕರು ಈ ಬಗ್ಗೆ ಬಾಯಿ ಬಿಡುತ್ತಾರೆ, ಕಾದು ನೋಡಿ ಎಂದರು.

ಈ ಮಧ್ಯೆ, ಬೆಳಗಾವಿಯಲ್ಲಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಟೆಂಡರ್ ಮಾಡಿದರೂ ವರ್ಕ್ ಆರ್ಡರ್ ಕೊಡುವುದಿಲ್ಲ ಎಂಬ ರಾಜು ಕಾಗೆ, ಬಿ.ಆರ್. ಪಾಟೀಲ ಹೇಳಿಕೆಗಳು ಸರಿಯಾಗಿವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರು ಬಿಜೆಪಿಗೆ ಬರ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜು ಕಾಗೆ ಸೇರಿದಂತೆ ಬಹಳಷ್ಟು ಶಾಸಕರು ಬಿಜೆಪಿಗೆ ಬರಲು ರೆಡಿ ಇದ್ದಾರೆ. ನಾವೇನು ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ‌. ಅಲ್ಲಿನ ಇನ್ ಫೈಟಿಂಗ್ ಯಾವಾಗ ಸ್ಫೋಟ ಆಗುತ್ತೆ ಎಂಬುದು ಗೊತ್ತಾಗುತ್ತಿಲ್ಲ. ಸಿಎಂ ಬದಲಾವಣೆ ಯಾವಾಗ ಆಗುತ್ತೋ ಗೊತ್ತಿಲ್ಲ. ಆದರೆ, ಶೀಘ್ರವೇ ಸರ್ಕಾರ ಪತನ ಆಗುವುದು ಖಚಿತ ಎಂದರು.

ಇದೇ ವೇಳೆ, ಬೆಳಗಾವಿಯಲ್ಲಿ ಮಾತನಾಡಿದ ಎಂಎಲ್‌ಸಿ ಸಿ.ಟಿ.ರವಿ, ರಾಜು ಕಾಗೆ, ಬಿ.ಆರ್‌.ಪಾಟೀಲ ಸತ್ಯ ಹೇಳೀದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. ಗ್ಯಾರಂಟಿ ಕೊಟ್ಟಿದ್ದೇವೆ ಎಂದರೆ ಅದು ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಂತಲ್ಲ. ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ. ಶಾಸಕರ ಆರೋಪಗಳ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿ. ಸಚಿವ ಜಮೀರ್ ಅಹಮ್ಮದ್ ಖಾನ್‌ ಅವರ ರಾಜೀನಾಮೆ ತಗೊಳ್ಳಿ ಎಂದು ಆಗ್ರಹಿಸಿದರು.

ಇದೇ ವೇಳೆ, ಹಾವೇರಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ್, ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ ನಂಬರ್‌ ಒನ್‌ ಆಗಿದೆ ಎಂಬುದನ್ನು ಕಾಂಗ್ರೆಸ್‌ ಶಾಸಕರೇ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು 6 ತಿಂಗಳಲ್ಲಿ ಸಿದ್ದರಾಮಯ್ಯನವರು ಸಿಎಂ ಸ್ಥಾನವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು, ಅದಕ್ಕೆ ಲೂಟಿ ಮಾಡೋರಿಗೆ ಅವರು ಅವಕಾಶ ನೀಡ್ತಿದ್ದಾರೆ. ಬಿಹಾರದ ಚುನಾವಣೆಗಾಗಿ ಹಣ ಸಂಗ್ರಹ ಮಾಡ್ತಿದ್ದಾರೆ. ಎಲ್ಲಾ ಮಂತ್ರಿಗಳಿಗೂ ಹಣ ಫಿಕ್ಸ್ ಆಗಿದೆ ಎಂದು ಆರೋಪಿಸಿದರು.

ರಾಜು ಕಾಗೆ ಆರೋಪ ಕುರಿತು ಪ್ರತಿಕ್ರಿಯಿಸಿ, ‘ಈಗ ಕಾಗೆ ಕೂಗಿದೆ. ಕಾಗೆ ಕೂಗಿದರೆ 6 ತಿಂಗಳಿನಲ್ಲಿ ಮನೆ ಬಿಡಬೇಕು. ಈಗ ಸರ್ಕಾರದ ಮೇಲೆ ಕಾಗೆ ಕುಳಿತಿದೆ. ಈ ಸರ್ಕಾರಕ್ಕೆ ಉಳಿಗಾಲ ಇಲ್ಲ’ ಎಂದರು.

ಇದೇ ವೇಳೆ, ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯದ ಪರಿಸ್ಥಿತಿ ಆಲಿಬಾಬಾ ಮತ್ತು 40 ಕಳ್ಳರು ಎನ್ನುವ ರೀತಿ ಆಗಿದೆ. ಮುಖ್ಯಮಂತ್ರಿ, ಸಚಿವರು ಕಮಿಷನ್‌ ಉಡಾಯಿಸಿ ಮೋಜು ಮಾಡುತ್ತಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಮುಖ ಹಾಕಲಾರದ ದುಃಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೇನಿದೆ? ಎಂದರು.

ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕರಾದ ಬಿ.ಆರ್.‌ಪಾಟೀಲ, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅಂಥವರೇ ಈ ಸರ್ಕಾರಕ್ಕೆ ಸರ್ಟಿಫಿಕೇಟ್‌ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಗರು ಹೇಳಿದ್ದೇನು?

- ಕಾದು ನೋಡಿ, ಇನ್ನಷ್ಟು ಮಂದಿ ಬಾಯ್ಬಿಡಲಿದ್ದಾರೆ: ಬಿಎಸ್‌ವೈ

- ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿಗೆ ಬರಲು ರೆಡಿ: ಶೆಟ್ಟರ್‌

- ಸರ್ಕಾರದ ಮೇಲೆ ಕಾಗೆ ಕುಳಿತಿದೆ, ಉಳಿಗಾಲ ಇಲ್ಲ: ಅಶೋಕ್‌

- ರಾಜ್ಯದಲ್ಲಿ ಆಲಿಬಾಬಾ ಮತ್ತು 40 ಕಳ್ಳರು ಎಂಬ ಸ್ಥಿತಿ: ಎಚ್‌ಡಿಕೆ

- ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ: ಸಿ.ಟಿ. ರವಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ