ವಿಜಯೇಂದ್ರ ಬದಲಾವಣೆ ಬೇಡಿಕೆ ಬದಲಿಸಲ್ಲ: ಕುಮಾರ್‌ ಬಂಗಾರಪ್ಪ

Published : Jun 24, 2025, 09:57 AM IST
 Kumar Bangarappa

ಸಾರಾಂಶ

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರಾಜ್ಯ ಬಿಜೆಪಿಯ ಅತೃಪ್ತ ಬಣದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

 ಬೆಂಗಳೂರು :  ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರಾಜ್ಯ ಬಿಜೆಪಿಯ ಅತೃಪ್ತ ಬಣದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ.ಹರೀಶ್ ಅವರು ದಾವಣಗೆರೆ ಜಿಲ್ಲೆಯ ಸಂಘಟನೆಗೆ ಸೀಮಿತವಾಗಿ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ ಬಾರಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದಾದಲ್ಲಿ ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂಬ ಅಭಿಪ್ರಾಯವನ್ನು ಈಗಾಗಲೇ ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದೇವೆ. ಈಗ ನಮ್ಮ ಅಭಿಪ್ರಾಯವನ್ನು ನಾವು ಹೇಳಬೇಕಾಗಿದೆ. ಒಂದು ಬಾರಿ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಂಡ ಬಳಿಕ ಮತ್ತೆ ಅದನ್ನು ಮಾರ್ಪಡಿಸಲು ಆಗುವುದಿಲ್ಲ. ಹೀಗಾಗಿಯೇ ನಾವು ನಮ್ಮ ಒತ್ತಾಯ ಮಂಡಿಸುತ್ತಲೇ ಇದ್ದೇವೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಟಸ್ಥ ಬಣ ಎಂದು ಗುರುತಿಸಿಕೊಳ್ಳುವ ಕೆಲ ನಾಯಕರು ತಮ್ಮ ಅಭಿಪ್ರಾಯ ಬಹಿರಂಗವಾಗಿ ಹೇಳಿಲ್ಲ. ನಾವು ಬಹಿರಂಗವಾಗಿಯೇ ನಮ್ಮ ನಿಲುವು ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.

ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಸಹಕಾರ ಸಚಿವರ ಹನಿಟ್ರ್ಯಾಪ್‌ ಪ್ರಕರಣ, ಕ್ರಿಕೆಟ್ ಅಭಿಮಾನಿಗಳ ಕಾಲ್ತುಳಿತ ದುರಂತ ಸೇರಿ ಹಲವು ವಿಚಾರಗಳಲ್ಲಿ ನಮ್ಮ ಪಕ್ಷದ ನಾಯಕರು ಕೈಚೆಲ್ಲಿದರು. ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಕಠಿಣ ನಿಲುವು ಕೈಗೊಳ್ಳದೆ ಒಳಒಪ್ಪಂದ ಮಾಡಿಕೊಂಡರು. ಇದನ್ನು ನಾವು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರ ನಿರ್ಧಾರಕ್ಕೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ವಕ್ಫ್ ಹೋರಾಟ ತಾರ್ಕಿಕ ಹಂತಕ್ಕೆ ಕೊಂಡೊಯ್ಯಲಿಲ್ಲ. ಅಕ್ರಮ ವಲಸಿಗರ ವಿಷಯವನ್ನು ಪಕ್ಷ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕೇವಲ ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದರಿಂದ ಹೋರಾಟ ಮಾಡಿದಂತಾಗುವುದಿಲ್ಲ ಎಂಬುದನ್ನು ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ