ನವದೆಹಲಿ: ಲೋಕಸಭಾ ಚುನಾವಣೆಗೆ ಕಣ ರಂಗೇರಿರುವ ನಡುವೆಯೇ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ರಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ 27 ಮಂದಿಯ ಸಮಿತಿಯನ್ನು ರಚನೆ ಮಾಡಿದೆ.ಪ್ರಣಾಳಿಕೆ ಯಾವೆಲ್ಲಾ ಅಂಶಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಬಿಜೆಪಿ ಈಗಾಗಲೇ ಜನರಿಂದ ಅಭಿಪ್ರಾಯ ಸಂಗ್ರಹ ಆರಂಭಿಸಿದೆ. ಹೀಗೆ ಸಂಗ್ರಹವಾದ ಅಭಿಪ್ರಾಯವನ್ನು ಪರಿಗಣಿಸಿ ರಾಜ್‌ನಾಥ್ ನೇತೃತ್ವದ ಸಮಿತಿ ಪ್ರಣಾಳಿಕೆ ದ್ಧಪಡಿಸಲಿದೆ.
ಸಮಿತಿಯ ಸಂಚಾಲಕರಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉಪಸಂಚಾಲಕರಾಗಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ನೇಮಿಸಲಾಗಿದೆ. ಉಳಿದಂತೆ ತಿರುವನಂತಪುರದಿಂದ ಕಣಕ್ಕಿಳಿಯುತ್ತಿರುವ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೇರಿ ಹಲವು ಕೇಂದ್ರ ಸಚಿವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಣಾಳಿಕೆ ರಚನಾ ಸಮಿತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸ್ಥಾನ ಪಡೆದಿದ್ದಾರೆ. ಅಲ್ಲದೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ಸಮಿತಿಯಲ್ಲಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಸ್ಥಾನ ಪಡೆದಿಲ್ಲ.
ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಅಯೋಧ್ಯೆ ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದು, ಸಿಎಎ ಜಾರಿ ಮೊದಲಾದ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿತ್ತು. ಆದರೆ ಅವೆಲ್ಲಾ ಈ ಬಾರಿ ಈಡೇರಿರುವ ಕಾರಣ, ಯಾವ ಹೊಸ ಅಂಶಗಳಿಗೆ ಬಿಜೆಪಿ ಮೊರೆ ಹೋಗಬಹುದೆಂಬ ಕುತೂಹಲ ಇದೆ.ಬಿಜೆಪಿಯು ಕಳೆದ ಬಾರಿ ಸಂಕಲ್ಪ ಪತ್ರ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಿತ್ತು. ಆಗಲೂ ರಾಜ್‌ನಾಥ್ ಅವರೇ ಪ್ರಣಾಳಿಕೆ ಸಮಿತಿ ಮುಖ್ಯಸ್ಥರಾಗಿದ್ದರು.