ಬಿಜೆಪಿಗರಿಂದ ಏ.1 ರಿಂದ ನಾಮಪತ್ರ ಸಲ್ಲಿಕೆ ಭರಾಟೆ

KannadaprabhaNewsNetwork | Updated : Mar 31 2024, 04:28 AM IST

ಲೋಕಸಭಾ ಸಮರಕ್ಕೆ ಬಿಜೆಪಿ ಅಭ್ಯರ್ಥಿಗಳು ಸೋಮವಾರದಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಪ್ರಾರಂಭಿಸಲಿದ್ದಾರೆ. ಘಟಾನುಘಟಿ ನಾಯಕರು ಸೇರಿದಂತೆ ಹೊಸಮುಖಗಳಾಗಿ ಅವಕಾಶ ಪಡೆದಿರುವ ಅಭ್ಯರ್ಥಿಗಳು ರೋಡ್‌ ಶೋ ನಡೆಸುವ ಮೂಲಕ ತಮ್ಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

  ಬೆಂಗಳೂರು :  ಲೋಕಸಭಾ ಸಮರಕ್ಕೆ ಬಿಜೆಪಿ ಅಭ್ಯರ್ಥಿಗಳು ಸೋಮವಾರದಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಪ್ರಾರಂಭಿಸಲಿದ್ದಾರೆ. ಘಟಾನುಘಟಿ ನಾಯಕರು ಸೇರಿದಂತೆ ಹೊಸಮುಖಗಳಾಗಿ ಅವಕಾಶ ಪಡೆದಿರುವ ಅಭ್ಯರ್ಥಿಗಳು ರೋಡ್‌ ಶೋ ನಡೆಸುವ ಮೂಲಕ ತಮ್ಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಯಾವ ಅಭ್ಯರ್ಥಿಗಳ ಜತೆ ಯಾವ ಮುಖಂಡರು ಉಪಸ್ಥಿತರಿರಬೇಕು ಎಂಬುದರ ಬಗ್ಗೆ ಬಿಜೆಪಿ ತೀರ್ಮಾನಿಸಿದೆ. ಅಂತೆಯೇ ರೋಡ್‌ ಶೋಗಳಲ್ಲಿ ಮತ್ತು ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳಲಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಉಮೇದುವಾರಿಕೆ ಸಲ್ಲಿಕೆ ಮಾಡಲು ಪಕ್ಷವು ತಿಳಿಸಿದೆ.

ಸೋಮವಾರ ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿ.ಸಿ.ಮೋಹನ್‌ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮೊದಲು ಶಿವಾಜಿನಗರದ ಮುತ್ಯಾಲಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರೋಡ್‌ ಶೋ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಅವರಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಸಂಸದ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ವಿ.ಸುನೀಲ್‌ ಕುಮಾರ್‌, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಎಸ್‌.ಸುರೇಶ್‌ ಕುಮಾರ್‌, ಜನಾರ್ದನರೆಡ್ಡಿ, ಪಕ್ಷದ ಮುಖಂಡರಾದ ಎಸ್‌.ರಘು, ತಾರಾ ಅನುರಾಧ ಉಪಸ್ಥಿತರಿರಲಿದ್ದಾರೆ.

ಬುಧವಾರದಂದು (ಏ.3) ಮೈಸೂರು ಕ್ಷೇತ್ರದಲ್ಲಿ ಯದುವೀರ ಕೃಷ್ಣರಾಜದತ್ತ ಒಡೆಯರ್‌, ಚಾಮರಾಜನಗರ ಕ್ಷೇತ್ರದಲ್ಲಿ ಎಸ್‌.ಬಾಲರಾಜ್‌, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತುಮಕೂರು ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಸೋಮಣ್ಣ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ರೋಡ್‌ ಶೋ ನಡೆಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.

ಗುರುವಾರ (ಏ.4) ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕ್ಯಾ.ಬ್ರಿಜೇಶ್‌ ಚೌಟ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಂಸದ ತೇಜಸ್ವಿ ಸೂರ್ಯ, ಚಿತ್ರದುರ್ಗ ಕ್ಷೇತ್ರದಲ್ಲಿ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್‌ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಎಲ್ಲಾ ಅಭ್ಯರ್ಥಿಗಳು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಕ್ಷದ ಮುಖಂಡರ ಜತೆ ರೋಡ್‌ ಶೋ ನಡೆಸಲಿದ್ದಾರೆ.