ಕಳೆದ ಅಧಿವೇಶನದಲ್ಲಿ 18 ಶಾಸಕರ ಸಸ್ಪೆಂಡ್‌ ವಿರುದ್ಧ ಬಿಜೆಪಿಗರ ಆಕ್ರೋಶ ಸ್ಫೋಟ - ಧರಣಿ

KannadaprabhaNewsNetwork | Updated : Apr 03 2025, 05:26 AM IST

ಸಾರಾಂಶ

ಕಳೆದ ಅಧಿವೇಶನದಲ್ಲಿ ಪಕ್ಷದ 18 ಶಾಸಕರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ನೇತೃತ್ವದಲ್ಲಿ ವಿಧಾನಸೌಧದ ಎದುರು ಧರಣಿ ನಡೆಸಿದ ಶಾಸಕರು ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.

  ಬೆಂಗಳೂರು :ಕಳೆದ ಅಧಿವೇಶನದಲ್ಲಿ ಪಕ್ಷದ 18 ಶಾಸಕರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ನೇತೃತ್ವದಲ್ಲಿ ವಿಧಾನಸೌಧದ ಎದುರು ಧರಣಿ ನಡೆಸಿದ ಶಾಸಕರು ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.

ಬುಧವಾರ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆ ಮುಂದೆ ಧರಣಿ ನಡೆಸಿ, ಸಭಾಧ್ಯಕ್ಷರ ನಡೆಯನ್ನು ತೀವ್ರವಾಗಿ ಖಂಡಿಸಲಾಯಿತು. ಇದೇ ವೇಳೆ 18 ಶಾಸಕರ ಅಮಾನತು ವಾಪಸ್‌ ಪಡೆಯಬೇಕು ಎಂದು ಕೋರಿ ಸಭಾಧ್ಯಕ್ಷರ ಕಚೇರಿಗೆ ಮನವಿ ಸಲ್ಲಿಸಲಾಯಿತು. ಸಭಾಧ್ಯಕ್ಷ ಯು.ಟಿ.ಖಾದರ್‌ ಕಚೇರಿಯಲ್ಲಿ ಇಲ್ಲದ ಕಾರಣ ಅವರ ಕಚೇರಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ಪ್ರತಿಭಟನೆ ವೇಳೆ ಮಾತನಾಡಿದ ವಿಜಯೇಂದ್ರ, ಸಭಾಧ್ಯಕ್ಷರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಬಿಜೆಪಿಯ 18 ಶಾಸಕರ ಅಮಾನತು ಕ್ರಮ ಸಂವಿಧಾನಬಾಹಿರ. ಜನಪ್ರತಿನಿಧಿಯನ್ನು ಆರು ತಿಂಗಳ ಕಾಲ ಅಮಾನತು ಮಾಡಿ, ವಿಧಾನಸೌಧದ ಮೊಗಸಾಲೆಗೂ ಬಾರದಂತೆ ಆದೇಶ ಮಾಡಲಾಗಿದೆ. ಮುಖ್ಯಮಂತ್ರಿಯವರನ್ನು ತೃಪ್ತಿಪಡಿಸಲು ಕಾನೂನು ಬಾಹಿರವಾಗಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಆದೇಶ ಮಾಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ತಮ್ಮ ನಿರ್ಣಯ ಸಂವಿಧಾನವಿರೋಧಿ ಎಂಬುದು ಸಭಾಧ್ಯಕ್ಷರಿಗೆ ಅರ್ಥವಾಗಿದೆ. ಆದರೂ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸಭಾಧ್ಯಕ್ಷರು ಭಂಡತನ ಪ್ರದರ್ಶಿಸುತ್ತಿದ್ದಾರೆ. ಇದು ಮತದಾರರಿಗೆ ಮಾಡಿದ ಅವಮಾನ. ಅಮಾನತು ಹಿಂಪಡೆಯುವವರೆಗೆ ಬಿಜೆಪಿಯ ಶಾಸಕರು ಸಮಿತಿ ಸಭೆಗಳಲ್ಲಿ ಭಾಗವಹಿಸದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಆರ್‌. ಅಶೋಕ್‌ ಮಾತನಾಡಿ, 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ರಾಜ್ಯಪಾಲರನ್ನೂ ಈ ಸಂಬಂಧ ಭೇಟಿ ಮಾಡುತ್ತೇವೆ. ಮುಸ್ಲಿಮರಿಗೆ ನೀಡಿದ ಮೀಸಲಾತಿ ವಿರೋಧಿಸಿ ಮತ್ತು ಹನಿಟ್ರ್ಯಾಪ್ ಪ್ರಕರಣ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ, ಎಸ್ಐಟಿ ಅಥವಾ ಯಾವುದೇ ತನಿಖೆ ಮಾಡುವುದಾಗಿ ಹೇಳಿದ್ದರೆ ಪ್ರತಿಭಟನೆ ಕೈ ಬಿಡಬಹುದಿತ್ತು. ಅಮಾನತು ಸಮಯದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಸೌಜನ್ಯಕ್ಕೂ ಶಾಸಕರನ್ನು ಕರೆದು ಮಾತಾಡಿಲ್ಲ ಎಂದು ಕಿಡಿಕಾರಿದರು.

ಸಚಿವ ಸಂಪುಟ ಪುನರ್ ರಚನೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸದಸ್ಯರ ವಿರುದ್ಧ ಕ್ರಮ ಕೈಗೊಂಡರೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಸಭಾಧ್ಯಕ್ಷರಿಗಿದೆ. ಸಭಾಧ್ಯಕ್ಷರ ಪೀಠ ಬಹಳ ಪವಿತ್ರವಾಗಿದ್ದು, ಯಾರ, ಯಾರನ್ನೋ ಕರೆದುಕೊಂಡು ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಶಾಸಕರು ಪೀಠದ ಬಳಿ ಬಂದು ಪ್ರತಿಭಟನೆ ಮಾಡಿದರೆ ಅಮಾನತು ಮಾಡುತ್ತಾರೆ. ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಮನವಿಯಲ್ಲಿ ಕನ್ನಡಪ್ರಭ ಸಂದರ್ಶನ ಪ್ರಸ್ತಾಪ

ಬಿಜೆಪಿಯ 18 ಶಾಸಕರ ಅಮಾನತುಗೊಳಿಸಿರುವ ಆದೇಶ ವಾಪಸ್‌ ಪಡೆಯಬೇಕು ಎಂದು ನೀಡಿದ ಲಿಖಿತ ಮನವಿಯಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದ ಕುರಿತು ಪ್ರಸ್ತಾಪಿಸಲಾಗಿದೆ.

ಅಮಾನತು ವಿಚಾರದಲ್ಲಿ ಹಿಂದಿನ ಸ್ಪೀಕರ್‌ಗಳು ಕಠಿಣ ಕ್ರಮ ಕೈಗೊಂಡಿಲ್ಲ. ಅವರಿಗೆ ಧೈರ್ಯ ಇರಲಿಲ್ಲ. ನನ್ನ ನಡೆ ಸರಿ ಇದೆ ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಪತ್ರಿಕೆಗೆ ನೀಡಿದ ಸಂದರ್ಶನ ಗಮನಿಸಿದರೆ ಸಭಾಧ್ಯಕ್ಷರು ಪ್ರಜಾಸತ್ತಾತ್ಮಕ, ಸಂವಿಧಾನಿಕ ಮೌಲ್ಯಗಳನ್ನು ಗಾಳಿ ತೂರಿರುವುದು ಸ್ಪಷ್ಟ ಎಂದು ಆರೋಪಿಸಲಾಗಿದೆ.

ಪ್ರತಿಪಕ್ಷಗಳ ಧ್ವನಿ ಅಡಗಿಸಬೇಕು, ಪ್ರತಿಪಕ್ಷಗಳು ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯಬಾರದು ಎಂಬ ಉದ್ದೇಶ ಬಯಲಿಗೆ ಬರುತ್ತಿವೆ. ರಾಜ್ಯ ಸರ್ಕಾರದಿಂದಲೇ ಪ್ರಾಯೋಜಿತಗೊಂಡು ನಡೆಯುತ್ತಿರುವ ಅಕ್ರಮಗಳು, ಅನೈತಿಕ ಚಟುವಟಿಕೆಗಳು ನಾಡಿನ ನಾಗರಿಕ ಸಮಾನ ತಲೆತಗ್ಗಿಸುವಂತಾಗಿದೆ ಎಂದು ಉಲ್ಲೇಖಿಸಲಾಗಿದೆ.

- ಬಿವೈವಿ, ಅಶೋಕ್‌ ನೇತೃತ್ವದಲ್ಲಿ ಪ್ರತಿಪಕ್ಷ ಹೋರಾಟ

- ಸಿಎಂ ತೃಪ್ತಿಪಡಿಸಲು ಈ ಸಂವಿಧಾನಬಾಹಿರ ನಿರ್ಧಾರ

- ಸಭಾಧ್ಯಕ್ಷ ಖಾದರ್‌ ಕಾಂಗ್ರೆಸ್ ಪಕ್ಷದ ಕೈಗೊಂಬೆ

- ಸ್ಪೀಕರ್‌ ಖಾದರ್‌ ವಿರುದ್ಧ ವಿಜಯೇಂದ್ರ, ಅಶೋಕ್‌ ಕಿಡಿ

ಬಿಜೆಪಿ ಎಕಾಂಗಿ ಹೋರಾಟಕ್ಕೆ ಜೆಡಿಎಸ್‌ ಬೇಸರ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ, ಶಾಸಕರ ಅಮಾನತು ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಏಕಾಂಗಿಯಾಗಿ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಮಿತ್ರ ಪಕ್ಷ ಜೆಡಿಎಸ್ ಪಾಳೆಯದಲ್ಲಿ ಅಸಮಾಧಾನ ಉಂಟು ಮಾಡಿದೆ. ಈ ರೀತಿಯ ನಡೆಯಿಂದ ಮುಂದಿನ ದಿನಗಳಲ್ಲಿ ಪೆಟ್ಟು ಬೀಳಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.--

Share this article