ವಿಧಾನಮಂಡಲ ಅಧಿವೇಶನದ ಕೊನೆಯ ದಿನವೂ ಸಂಪೂರ್ಣ ಧರಣಿ, ಗದ್ದಲದಿಂದಲೇ ಮುಳುಗಿಹೋಯಿತು. ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ, ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದ್ದ ವಿಪಕ್ಷ ಸದಸ್ಯರು ಬುಧವಾರ ಇಡೀ ದಿನ ಪ್ರತಿಭಟನೆ ಮಾಡಿದರು.

ವಿಧಾನಮಂಡಲ ಅಧಿವೇಶನದ ಕೊನೆಯ ದಿನವೂ ಸಂಪೂರ್ಣ ಧರಣಿ, ಗದ್ದಲದಿಂದಲೇ ಮುಳುಗಿಹೋಯಿತು. ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ, ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದ್ದ ವಿಪಕ್ಷ ಸದಸ್ಯರು ಬುಧವಾರ ಇಡೀ ದಿನ ಪ್ರತಿಭಟನೆ ಮಾಡಿದರು. ಮತ್ತೊಂದೆಡೆ, ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಅವರು ಬಿಜೆಪಿಗರನ್ನು ಟೀಕಿಸಿದ್ದು, ಗದ್ದಲಕ್ಕೆ ತುಪ್ಪ ಸುರಿದು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಿತು. ಮೇಲ್ಮನೆಯಲ್ಲಿ ಸಿ.ಟಿ. ರವಿ ‘ಪಾಕ್‌ ನಾಲಿಗೆ’ ಮಾತು ಕಲಾಪವನ್ನು ಬಲಿ ಪಡೆಯಿತು.--

ಕೊನೆಯ ದಿನವೂ ತಿಮ್ಮಾಪುರ ಗದ್ದಲ- ಅಬಕಾರಿ ಅಕ್ರಮ ಆರೋಪ- ಇಡೀ ದಿನ ಬಾವೀಲಿ ಧರಣಿ- ಸಚಿವ ತಲೆದಂಡಕ್ಕೆ ಪಟ್ಟು

ಕನ್ನಡಪ್ರಭ ವಾರ್ತೆ ವಿಧಾನಸಭೆ

ಅಧಿವೇಶನದ ಕೊನೆಯ ದಿನವಾದ ಬುಧವಾರವೂ ವಿಧಾನಸಭೆಯಲ್ಲಿ ಅಬಕಾರಿ ಇಲಾಖೆ ಅಕ್ರಮದ್ದೇ ಗದ್ದಲ-ಕೋಲಾಹಲ. ಇಲಾಖಾ ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ್ದ ಪ್ರತಿಪಕ್ಷ ಸದಸ್ಯರು ಬುಧವಾರ ಇಡೀ ದಿನ ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು.

ಅಬಕಾರಿ ಇಲಾಖೆಯಲ್ಲಿ 6000 ಕೋಟಿ ರು. ಅಕ್ರಮ ನಡೆದಿದೆ ಎಂಬ ಆಪಾದನೆ ಅಬಕಾರಿ ಲೈಸೆನ್ಸ್‌ದಾರರ ಸಂಘದಿಂದ ಕೇಳಿ ಬಂದಿದೆ. ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಹಗರಣ. ಈ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಅವರೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಪ್ರಕರಣವನ್ನು ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ, ಕಾಂಗ್ರೆಸ್‌ ಪಕ್ಷ, ಅಬಕಾರಿ ಸಚಿವರ ವಿರುದ್ಧ ಘೋಷಣೆ ಕೂಗಿ, ಚಪ್ಪಾಳೆ ತಟ್ಟುತ್ತಾ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಲೂಟಿ ಲೂಟಿ:

ಪ್ರತಿಭಟನೆ ಕೈಬಿಟ್ಟು ಕಲಾಪ ನಡೆಸಲು ಅನುವು ಮಾಡಿಕೊಡುವಂತೆ ಎಷ್ಟೇ ಕೋರಿದರೂ ಮಣಿಯದ ಹಿನ್ನೆಲೆಯಲ್ಲಿ ಸ್ಪೀಕರ್‌ ಯು.ಟಿ.ಖಾದರ್‌ ಅವರು ಗದ್ದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಜಿ ರಾಮ್‌ ಜಿ ಕಾಯ್ದೆ ವಿರುದ್ಧ ಮಂಗಳವಾರ ಮಂಡಿಸಿದ್ದ ನಿರ್ಣಯದ ಮೇಲಿನ ಚರ್ಚೆ ಆರಂಭಿಸಿದರು. ಇದರಿಂದ ತಮ್ಮ ಪ್ರತಿಭಟನೆ ಇನ್ನಷ್ಟು ಜೋರು ಮಾಡಿದ ಪ್ರತಿಪಕ್ಷ ಸದಸ್ಯರು, ‘ಭ್ರಷ್ಟಾಚಾರ ಭ್ರಷ್ಟಾಚಾರ, ತಿಮ್ಮಾಪುರ ಭ್ರಷ್ಟಾಚಾರ’, ‘ಕೊಡಲೇ ಬೇಕು ಕೊಡಲೇಬೇಕು, ರಾಜೀನಾಮೆ ಕೊಡಲೇಬೇಕು’, ‘ರಾಹುಲ್ ಗಾಂಧಿ ಕೋಟಿ ಕೋಟಿ-ಕರ್ನಾಟಕ ಲೂಟಿ ಲೂಟಿ’ ಎಂದು ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.

ಪ್ರತಿಭಟನೆ ನಡುವೆಯೇ ಆಡಳಿತ ಪಕ್ಷದ ಹಲವು ಸದಸ್ಯರು, ಕೇಂದ್ರ ಸರ್ಕಾರ ಮನರೇಗಾ ರದ್ದುಪಡಿಸಿದ್ದನ್ನು ಖಂಡಿಸಿ, ಕೇಂದ್ರದ ‘ಜಿ ರಾಮ್‌ ಜಿ’ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರದ ಅಧಿಕೃತ ನಿರ್ಣಯ ಬೆಂಬಲಿಸಿ ಮಾತನಾಡಿದರು. ಬಿಜೆಪಿ ಉಚ್ಚಾಟಿತ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತ್ರ ನಿರ್ಣಯ ವಿರೋಧಿಸಿ ಕಾಯ್ದೆ ಸಮರ್ಥಿಸಿಕೊಂಡು ಮಾತನಾಡಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಅಷ್ಟೇ ಅಲ್ಲದೆ, ಪ್ರತಿಭಟನೆ ನಡುವೆಯೇ ‘ಜಿ ರಾಮ್‌ ಜಿ’ ವಿರುದ್ಧ ನಿರ್ಣಯ ಮೇಲೆ ಮಾತನಾಡಿದ ಕಾಂಗ್ರೆಸ್‌ ಸದಸ್ಯರನ್ನೂ ಕೆಣಕಿ ಅವರ ವಿರುದ್ಧ ಘೋಷಣೆ ಕೂಗಿ ಗೇಲಿ ಮಾಡಿದರು. ಈ ವೇಳೆ, ಕೆಲವರು ವಿಚಲಿತರಾಗದೆ ತಮ್ಮ ಭಾಷಣ ಮಾಡಿದರೆ, ಸದಸ್ಯ ಶಿವಲಿಂಗೇಗೌಡ ಅವರು ರೊಚ್ಚಿಗೆದ್ದು ಬಿಜೆಪಿ ಸದಸ್ಯರನ್ನು ವಾಚಾಮಗೋಚರವಾಗಿ ಬೈದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಭೋಜನ ವಿರಾಮದ ನಂತರ ಅಬಕಾರಿ ಹಗರಣದ ಜೊತೆಗೆ ಶಿವಲಿಂಗೇಗೌಡ ಅವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿಯೂ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಗದ್ದಲ ನಡುವೆಯೇ ನಿರ್ಣಯದ ಮೇಲಿನ ಚರ್ಚೆ ಮುಂದುವರೆದು ಕೊನೆಗೆ ಮುಖ್ಯಮಂತ್ರಿ ಅವರು ಸದನಕ್ಕೆ ಆಗಮಿಸಿ ನಿರ್ಣಯಕ್ಕೆ ಅಂಗೀಕಾರ ಕೋರುವ ಮುನ್ನ ಪ್ರತಿಪಕ್ಷ ಸದಸ್ಯರು ಅಬಕಾರಿ ಹಗರಣ, ‘ಜಿ ರಾಮ್‌ ಜಿ’ ವಿರುದ್ಧದ ನಿರ್ಣಯ ವಿರೋಧಿಸಿ ಸಭಾತ್ಯಾಗ ಮಾಡಿದರು.

--

ರಾಜ್ಯದಲ್ಲೇ ಅತಿ ದೊಡ್ಡ ಭ್ರಷ್ಟಾಚಾರ

ಪ್ರತಿಭಟನೆಯ ಆರಂಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಅಬಕಾರಿ ಇಲಾಖೆಯಲ್ಲಿ 6000 ಕೋಟಿ ರು. ಅಕ್ರಮ ನಡೆದಿರುವುದಾಗಿ ಅಬಕಾರಿ ಲೈಸೆನ್ಸ್‌ದಾರರ ಸಂಘದವರೇ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿ ನಾನು ಆಡಿಯೋ ಸಂಭಾಷಣೆ ಸೇರಿ ಐದು ದಾಖಲೆಗಳನ್ನೂ ಕೊಟ್ಟಿದ್ದೇನೆ. ಆದರೂ, ಸರ್ಕಾರ ಸಚಿವ ತಿಮ್ಮಾಪುರ ಅವರನ್ನು ರಕ್ಷಿಸುತ್ತಿರುವುದೇಕೆ? ಕೂಡಲೇ ಸಚಿವರು ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಅವರೇ ಅವರಿಂದ ರಾಜೀನಾಮೆ ಪಡೆದು ತನಿಖೆ ನಡೆಸಬೇಕು ಎಂದರು.

ಹಿಂದೆ ವಿವಿಧ ಪ್ರಕರಣಗಳಲ್ಲಿ ತಮ್ಮ ವಿರುದ್ಧ ಆರೋಪಗಳು ಬಂದಾಗ ಕೆ.ಜೆ.ಜಾರ್ಜ್‌, ಕೆ.ಎಸ್‌.ಈಶ್ವರಪ್ಪ ಮತ್ತಿತರ ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯಲ್ಲಿ ಅವರು ತಪ್ಪಿತಸ್ಥರಲ್ಲವೆಂದು ಕಂಡುಬಂದಾಗ ಮತ್ತೆ ಸಂಪುಟ ಸೇರಿದ ಉದಾಹರಣೆಗಳಿವೆ. ಅದೇ ರೀತಿ ಅಬಕಾರಿ ಅಕ್ರಮ ಪ್ರಕರಣವನ್ನೂ ತನಿಖೆ ನಡೆಸಿ ತಿಮ್ಮಾಪುರ ಅವರಿಗೆ ಕ್ಲೀನ್‌ ಚಿಟ್ ಸಿಕ್ಕರೆ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಅವರು ತಿಮ್ಮಾಪುರ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡದಿದ್ದರೆ ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾಲೆಷ್ಟು ಎಂಬ ಅನುಮಾನ ಸೃಷ್ಟಿಯಾಗುತ್ತದೆ. ಸದನದಲ್ಲಿ ನಿಂತು ಪಾರದರ್ಶಕ ಆಡಳಿತದ ಬಗ್ಗೆ ಪಾಠ ಮಾಡಲು ಮುಖ್ಯಮಂತ್ರಿ ಅವರಿಗೆ ಯಾವ ನೈತಿಕತೆ ಇರುತ್ತದೆ. ಇವರ ಸರ್ಕಾರ ಪಾರದರ್ಶಕವಾಗಿದ್ದರೆ ಅಬಕಾರಿ ಅಕ್ರಮಕ್ಕೆ ಸಂಬಂಧಿಸಿ ಲೋಕಾಯುಕ್ತರು ಕೆಲ ಅಧಿಕಾರಿಗಳನ್ನು ಬಂಧಿಸಿ ಎಷ್ಟು ದಿನಗಳು ಕಳೆದವು. ಆದರೂ ಯಾವುದೇ ಕ್ರಮ ಆಗಿಲ್ಲ? ಕಾಂಗ್ರೆಸ್‌ ದೆಹಲಿ ನಾಯಕರಿಗೆ ಕರ್ನಾಟಕ ರಿಸರ್ವ್ ಬ್ಯಾಂಕ್‌ ಆಗಿದೆ. ಬೇರೆ ರಾಜ್ಯಗಳ ಚುನಾವಣೆಗೆ ಇಲ್ಲಿನ ಹಣ ಹೋಗುತ್ತಿದೆ. ಪ್ರಸ್ತುತ ಕೇರಳ ಮತ್ತು ಅಸ್ಸಾಂ ಚುನಾವಣೆಗೆ ಕ್ರಮವಾಗಿ ರಾಜ್ಯದ ಕೆ.ಜೆ.ಜಾರ್ಜ್‌ ಮತ್ತು ಡಿ.ಕೆ.ಶಿವಕುಮಾರ್‌ ಉಸ್ತುವಾರಿಗಳಾಗಿದ್ದಾರೆ. ಅಬಕಾರಿ ಅಕ್ರಮದ ಹಣ ಆ ರಾಜ್ಯಗಳ ಚುನಾವಣೆಗೆ ಬಳಕೆಯಾಗುವ ಅನುಮಾನಗಳಿವೆ ಎಂದರು.

---

ಸದನದಿಂದ ರವಿ 1 ದಿನ ಅಮಾನತು- ಪಾಕಿಸ್ತಾನ ನಾಲಗೆ ಹೇಳಿಕೆ

- ವಿಷಾದ ಹೇಳಲು ನಕಾರ

- ಸಭಾಪತಿಗಳ ಶಿಕ್ಷೆ ಪ್ರಕಟ

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌ಕಾಂಗ್ರೆಸ್‌ ಶಾಸಕರೊಬ್ಬರನ್ನು ಉದ್ದೇಶಿಸಿ ನೀಡಿದ ‘ಪಾಕಿಸ್ತಾನದ ನಾಲಗೆ’ ಎಂಬ ಹೇಳಿಕೆಗೆ ವಿಷಾದ ವ್ಯಕ್ತಪಡಿಸಬೇಕೆಂಬ ಕಾಂಗ್ರೆಸ್‌ ಸದಸ್ಯರ ಆಗ್ರಹ ಹಾಗೂ ಸಭಾಪತಿಗಳ ಮನವಿಗೆ ಸಿ.ಟಿ.ರವಿ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ದಿನದ ಮಟ್ಟಿಗೆ ರವಿ ಅವರನ್ನು ಸದನದಿಂದ ಅಮಾನತು ಮಾಡಿ ಆದೇಶಿಸಿದರು.

ಭೋಜನ ವಿರಾಮದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಸಿ.ಟಿ.ರವಿ ಅವರನ್ನು ಸದನದಿಂದ ಹೊರಹಾಕಬೇಕೆಂದು ಸಭಾಪತಿಗಳಿಗೆ ಕಾಂಗ್ರೆಸ್ ಮನವಿ ಸಲ್ಲಿಸಿತು. ಆದರೆ, ಸಿ.ಟಿ.ರವಿ ಕಲಾಪದಲ್ಲಿ ಹಾಜರಿರದ ಕಾರಣ, ಕಾಂಗ್ರೆಸ್‌ ಪ್ರಸ್ತಾವನೆಗೆ ಅವರ ಅಭಿಪ್ರಾಯವನ್ನೂ ಪಡೆಯಬೇಕಿದೆ. ಹೀಗಾಗಿ ಸಿ.ಟಿ.ರವಿ ಅವರನ್ನು ರಾತ್ರಿ 8 ಗಂಟೆಯೊಳಗೆ ಕರೆಸುವಂತೆ ಪ್ರತಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದರು.ಸಭಾಪತಿ ಅವರು ನಿಗದಿ ಮಾಡಿದ್ದ ಸಮಯದಲ್ಲೂ ಕಲಾಪಕ್ಕೆ ಸಿ.ಟಿ.ರವಿ ಹಾಜರಾಗದ ಕಾರಣ, ಅವರನ್ನು ಏಕೆ ಕರೆಸಿಲ್ಲ ಎಂದು ಬಸವರಾಜ ಹೊರಟ್ಟಿ ವಿರೋಧ ಪಕ್ಷದವರಿಗೆ ಪ್ರಶ್ನಿಸಿದರು. ಅದಕ್ಕೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಅವರಿಗೆ ಕರೆ ಮಾಡಿ ತಿಳಿಸುತ್ತೇನೆ ಎಂದು ಹೊರ ಹೋದರು. ಆದರೆ, ಹೊರ ಹೋದ ಛಲವಾದಿ ನಾರಾಯಣಸ್ವಾಮಿ ರಾತ್ರಿ 8.20 ಆದರೂ ಸದನಕ್ಕೆ ಬರಲಿಲ್ಲ. ಕೊನೆಗೆ ಬಸವರಾಜ ಹೊರಟ್ಟಿ ಅವರು, ಸಿ.ಟಿ.ರವಿ ಅವರನ್ನು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಿ ಆದೇಶಿಸಿದರು. ಜತೆಗೆ ಸಿ.ಟಿ.ರವಿ ಸದನಕ್ಕೆ ಬಂದರೆ ಒಳಗೆ ಬಿಡದಂತೆ ಮಾರ್ಷಲ್ಸ್‌ಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನ, ನಿಯಮ 330ಎ ಮೇರೆಗೆ ವಿಶೇಷ ಪ್ರಸ್ತಾವನೆ ಸಲ್ಲಿಸಿ ನಂತರ ಮಾತನಾಡಿದ ಸಭಾನಾಯಕ ಎನ್‌.ಎಸ್‌. ಬೋಸರಾಜು, ಸರ್ಕಾರಿ ಮುಖ್ಯಸಚೇತಕ ಸಲೀಂ ಅಹಮದ್‌, ಐವನ್‌ ಡಿಸೋಜ, ರಮೇಶ್‌ ಬಾಬು ಅವರು ಮಾತನಾಡಿ ಮಂಗಳವಾರದಿಂದ ಸಿ.ಟಿ. ರವಿ ಅವರು ಬಳಸಿರುವ ಮಾತಿಗೆ ವಿಷಾದ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿದ್ದೇವೆ. ಸಭಾಪತಿ ಹಾಗೂ ಉಪ ಸಭಾಪತಿ ಅವರೂ ಐದು ಬಾರಿ ಮನವಿ ಮಾಡಿದರೂ ವಿಷಾದಿಸಿಲ್ಲ. ಹೀಗಾಗಿ ಸಭಾಪತಿಗಳು ಈ ಕುರಿತು ಆದೇಶ ನೀಡಬೇಕು. ಪೀಠ ಹೇಳಿದ ಮೇಲೆ ವಿಷಾದ ವ್ಯಕ್ತಪಡಿಸಿದರೆ ಕಲಾಪ ಮುಂದುವರೆಯುತ್ತದೆ, ಸದನಕ್ಕೂ ಗೌರವ ಬರುತ್ತದೆ, ಈ ವಿಷಯದಲ್ಲಿ ಹಠ ಮಾಡದೆ ಪೀಠದ ಆದೇಶ ಪಾಲಿಸಬೇಕು ಎಂದರು.ಅದಕ್ಕೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಈ ವಿಷಯ ಮುಗಿದ ಅಧ್ಯಾಯ. ಸಿ.ಟಿ.ರವಿ ಅವರಿಗೆ ವಿಷಾದಿಸಬೇಕೆಂದು ಪೀಠ ಆದೇಶಿಸಿದೆ ಎಂಬ ಮಾತು ಸತ್ಯಕ್ಕೆ ದೂರವಾಗಿದೆ. ರವಿ ಅವರು ಬಳಸಿರುವ ಮಾತು ಅಸಾಂವಿಧಾನಿಕ ಶಬ್ದ ಅಲ್ಲವಾದರೂ ಕಡತದಿಂದ ತೆಗೆದು ಹಾಕಲಾಗಿದೆ. ವಿಷಾದಿಸುವ ಬಗ್ಗೆ ತಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ ಎಂದು ಪೀಠ ಹೇಳಿದಾಗ, ರವಿ ಅವರು ವಿಷಾದಿಸಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಅಲ್ಲಿಗೆ ವಿಷಯ ಮುಕ್ತಾಯವಾಗಿದೆ ಎಂದು ಹೇಳಿದರು.

ಇದಕ್ಕೆ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು ವಿಷಾದಿಸುವಂತೆ ಸಿ.ಟಿ. ರವಿ ಅವರಿಗೆ ಐದು ಬಾರಿ ಪೀಠ ಸೂಚನೆ ನೀಡಿದೆ. ಅವರು ನೀಡುವ ಸಲಹೆ, ಸೂಚನೆಗಳು ಒಂದು ರೀತಿಯಲ್ಲಿ ಆದೇಶ ಇದ್ದಂತೆ ಎಂದರು.--

ಮಧ್ಯಾಹ್ನದಿಂದಲೇ ಸದನಕ್ಕೆ ಬಾರದ ರವಿತಮ್ಮ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್‌ ಸದಸ್ಯರು ಸಭಾಪತಿಗಳಿಗೆ ಮನವಿ ಅರ್ಪಿಸಿದ್ದ ಮಾಹಿತಿ ತಿಳಿದಿದ್ದ ಸಿ.ಟಿ.ರವಿ ಅವರು ಮಧ್ಯಾಹ್ನದಿಂದಲೇ ಸದನಕ್ಕೆ ಬಂದಿರಲಿಲ್ಲ. ಸಭಾಪತಿಗಳು ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಹಾಗೂ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರವಿ ಅವರನ್ನು ಸದನಕ್ಕೆ ಕರೆದುಕೊಂಡು ಬರುವಂತೆ ಸೂಚನೆ ನೀಡಿದ್ದರು. ಆದರೆ ರವಿ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಸಭಾಪತಿಗಳು ಸದನದಿಂದ ರವಿ ಅವರ ಅನುಪಸ್ಥಿತಿಯಲ್ಲಿ ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡುವುದಾಗಿ ಆದೇಶಿಸಿದರು.

---

ಶಿವಲಿಂಗೇಗೌಡ ಮಾತಿಂದ ಕಿಚ್ಚು

ಬಿಜೆಪಿ ಶಾಸಕರಿಂದ ಆಕ್ರೋಶ- ಕ್ಷಮೆಗೆ ಪಟ್ಟು, ಸ್ಪೀಕರ್‌ ಬಗ್ಗೆ ಸಿಟ್ಟು- ಅರ್ಧ ದಿನ ಕಲಾಪ ಮಾತಿಗೆ ಬಲಿ

ಕನ್ನಡಪ್ರಭ ವಾರ್ತೆ ವಿಧಾನಸಭೆಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದ ಬಾವಿಗಿಳಿದಿದ್ದ ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಅವರ ನಡುವೆ ನಡೆದ ತೀವ್ರ ವಾಗ್ವಾದ ಅಸಭ್ಯ ಭಾಷೆಗೆ ತಿರುಗಿದ ಪರಿಣಾಮ ಅರ್ಧ ದಿನದ ಕಲಾಪವೇ ಇದಕ್ಕೆ ಬಲಿಯಾದ ಘಟನೆ ಬುಧವಾರ ನಡೆಯಿತು.

ಸದನದ ಬಾವಿಯಿಂದಲೇ ಬಿಜೆಪಿಯ ವೇದವ್ಯಾಸ ಕಾಮತ್‌, ಶರಣು ಸಲಗಾರ್ ಅವರು, ‘ಕೊಬ್ಬರಿ ಕಳ್ಳ, ರೈತರಿಗೆ ಮೋಸ ಮಾಡಿದ್ದೀಯಾ, ದೇವೇಗೌಡರಿಗೆ ಬೆನ್ನಿಗೆ ಚೂರಿ ಹಾಕಿದ್ದೀಯಾ’ ಎಂದು ಶಿವಲಿಂಗೇಗೌಡ ಅವರಿಗೆ ಛೇಡಿಸಿದರು.ಇದರಿಂದ ತಾಳ್ಮೆ ಕಳೆದುಕೊಂಡ ಶಿವಲಿಂಗೇಗೌಡ, ‘ನಿಮ್ಮ ಜನ್ಮಕ್‌ ಬೆಂಕಿ ಹಾಕ. ಕೋತಿಗಳ ಥರ ಕೂಗಿ, ನಾಯಿಗಳಿಗಿಂತ ಕಡೆ ಆಗಿರೋ ಅಯೋಗ್ಯರು ನೀವು ಥೂ... ಏ ಶರಣು ಸಲಗಾರ್ ಚಿಂಚೋಳಿಯಲ್ಲಿ ನಿನ್ನ ತಹಸೀಲ್ದಾರ್‌ ಹೆಂಡತಿಯನ್ನು ಬಿಟ್ಟುಕೊಂಡು ಎಷ್ಟು ದುಡ್ಡು ಲೂಟಿ ಹೊಡೆದಿದ್ದೀಯಾ ಗೊತ್ತು, ಅಯೋಗ್ಯ ನೀನು’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಶಿವಲಿಂಗೇಗೌಡ ಅವರು ಸದಸ್ಯರ ಪತ್ನಿ ಬಗ್ಗೆ ಮಾತನಾಡಿದ್ದು ಹಾಗೂ ಸದಸ್ಯರನ್ನು ‘ನಾಯಿಗಳು’ ಎಂದು ಹೇಳಿರುವುದಕ್ಕೆ ಬಿಜೆಪಿ ಸದಸ್ಯರು ತೀವ್ರ ಗದ್ದಲ ಸೃಷ್ಟಿಸಿದರು. ಸಚಿವ ಪ್ರಿಯಾಂಕ್‌ ಖರ್ಗೆ ಸೇರಿ ಕೆಲ ಆಡಳಿತ ಪಕ್ಷದ ಸದಸ್ಯರೂ ಶಿವಲಿಂಗೇಗೌಡರ ಭಾಷೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಬಿಜೆಪಿ ಸದಸ್ಯರು ಶಿವಲಿಂಗೇಗೌಡರ ಕ್ಷಮೆಯಾಚನೆಗೆ ಪಟ್ಟು ಹಿಡಿದ ಪರಿಣಾಮ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.ಬಳಿಕ ಅಪರಾಹ್ನ 3.40ಕ್ಕೆ ಕಲಾಪ ಶುರುವಾದಾಗ ಬಿಜೆಪಿ ಸದಸ್ಯರು ಶಿವಲಿಂಗೇಗೌಡ ಅವರನ್ನು ಸದನದಿಂದ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಕ್ಷಮೆ ಕೇಳಿಸಬೇಕು. ಸದಸ್ಯರನ್ನು ನಾಯಿಗಳು ಎಂದರೂ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಇದಕ್ಕೆಲ್ಲ ಸ್ಪೀಕರ್‌ ನಗುತ್ತಿರುವುದು ಕೆಟ್ಟ ಸಂಪ್ರದಾಯ ಎಂದು ಕಿಡಿಕಾರಿ, ‘ಜೈ ಶಿವಾಜಿ, ಜೈ ಭವಾನಿ’ ಘೋಷಣೆಗಳನ್ನು ಕೂಗಿದರು.

ಇದರಿಂದ ಸಂಧಾನ ಸಭೆ ನಡೆಸಲು ಮತ್ತೆ ಕಲಾಪವನ್ನು ಸ್ವಲ್ಪ ಸಮಯ ಮುಂದೂಡಲಾಯಿತು. ಆದರೆ, ಸ್ಪೀಕರ್‌ ನೇತೃತ್ವದ ಸಂಧಾನ ಸಭೆಗೆ ತೆರಳದೆ ಬಿಜೆಪಿ ಸದಸ್ಯರು ಸದನದಲ್ಲೇ ಕುಳಿತಿದ್ದರು.ಬಳಿಕ ಆರಂಭವಾದ ಕಲಾಪದಲ್ಲೂ ಗದ್ದಲ ಮುಂದುವರೆದಿದ್ದರಿಂದ ಅಸಂಸದೀಯ ಪದಗಳನ್ನು ಕಡತದಿಂದ ತೆಗೆಯಲು ಹೇಳಿದ್ದೇನೆ. ನೀವು ಪ್ರಚೋದನೆ ನೀಡಿದ್ದರಿಂದಲೇ ಶಿವಲಿಂಗೇಗೌಡ ಮಾತನಾಡಿದ್ದಾರೆ ಎಂದು ಸ್ಪೀಕರ್ ಹೇಳಿದರು.

ಇದಕ್ಕೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ‘ಬೇಡ, ಕಡತದಿಂದ ತೆಗೆಯಬೇಡಿ. ಶಿವಲಿಂಗೇಗೌಡ ಮಾತನಾಡಿರುವುದು ಇಡೀ ಜಗತ್ತಿಗೆ ಹೋಗಿದೆ ಈಗ ವಾಪಸು ಪಡೆದು ಏನೂ ಆಗಬೇಕಿಲ್ಲ. ನಾವೂ ಈ ರೀತಿ ಮಾತನಾಡಬಹುದು ಎಂಬ ಒಳ್ಳೆಯ ಸಂಪ್ರದಾಯ ಹುಟ್ಟಿಕೊಂಡಿದೆ. ನಾವೂ ಮಾತನಾಡುತ್ತೇವೆ ಆಗಲೂ ನೀವು ನಗುತ್ತಿರಬೇಕು’ ಎಂದು ಹೇಳಿದರು.ಮಿಂಡರಿಗೆ ಹುಟ್ಟಿದವರು ಎಂದಿದ್ದರು-ಸುನಿಲ್‌:

ಬಿಜೆಪಿ ಸದಸ್ಯ ಸುನಿಲ್‌ಕುಮಾರ್‌ ಅವರು, ಶಿವಲಿಂಗೇಗೌಡ ಅವರು ಈ ಹಿಂದೆ ಸದನದಲ್ಲಿ ಮಾತನಾಡಿ ಕಡತದಿಂದ ತೆಗೆದಿರುವ ಪದಗಳನ್ನು ಪ್ರಸ್ತಾಪಿಸಿದರು. ‘ಮಿಂಡರಿಗೆ ಹುಟ್ಟಿದವರು, ಶಾಸಕರು ಅಪಾಪೋಲಿಗಳು’ ಎಂಬ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದರು. ಇದನ್ನು ಶಿವಲಿಂಗೇಗೌಡ ನಿರಾಕರಿಸಿದರು.ಕೊನೆಗೆ ಸ್ಪೀಕರ್ ಯು.ಟಿ.ಖಾದರ್, ‘ಎರಡೂ ಕಡೆಯವರು ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಬೇಕು’ ಎಂದು ರೂಲಿಂಗ್‌ ನೀಡಿದರು. ಇದಕ್ಕೆ ಎರಡೂ ಕಡೆಯವರೂ ಒಪ್ಪದ ಹಿನ್ನೆಲೆಯಲ್ಲಿ ಗದ್ದಲದ ನಡುವೆಯೇ ನರೇಗಾ ಚರ್ಚೆಯನ್ನು ಮುಂದುವರೆಸಲಾಯಿತು.

ಏನಿದು ಅಸಭ್ಯ ಭಾಷೆಯ ಗದ್ದಲ?:ಸದನದಲ್ಲಿ ಬಿಜೆಪಿಯವರು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿದಾಗ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ, ‘ನೀವು ಬರೀ ಸುಳ್ಳು ಹೇಳ್ತಿದ್ದೀರಿ. ನಿಮಗೆ ಇದನ್ನೆಲ್ಲ ಹೇಳೋಕೆ ಏನು ಹಕ್ಕು ಇದೆ? ಸದನದ ಬಾವಿಗಿಳಿದು ಘೋಷಣೆ ಕೂಗುತ್ತಿರುವವರನ್ನು ಹೊರಗೆ ಹಾಕಿ’ ಎಂದು ಹೇಳಿದರು.

ಈ ವೇಳೆ ಬಿಜೆಪಿಯ ಕೆಲ ಸದಸ್ಯರು, ‘ಕೊಬ್ಬರಿ ಕಳ್ಳ, ದೇವೇಗೌಡರಿಗೆ ಚೂರಿ ಹಾಕಿದವರು, ಕೊಬ್ಬರಿ ರೈತರಿಗೆ ಅನ್ಯಾಯ ಮಾಡಿದವರು’ ಎಂದು ಶಿವಲಿಂಗೇಗೌಡ ಅವರಿಗೆ ನಿಂದಿಸಿದರು.ಈ ರೀತಿಯ ಪದೇ ಪದೆ ನಿಂದನೆಯಿಂದ ಕೆರಳಿದ ಶಿವಲಿಂಗೇಗೌಡ, ಬಿಜೆಪಿ-ಜೆಡಿಎಸ್ ಶಾಸಕರನ್ನು ಉದ್ದೇಶಿಸಿ ಅಸಭ್ಯ ಮತ್ತು ಅವಾಚ್ಯ ಪದಗಳಿಂದ ನಿಂದಿಸಿದರು. ‘ಕೋತಿಗಳ ಥರ ಕೂಗ್ತಿರೋರು ನೀವು, ನಿಮಗೆ ಮಾನ, ಮರ್ಯಾದೆ ಇದೆಯಾ? ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ. ಅಯೋಗ್ಯರು ನೀವು ಥೂ..’ ಎಂದು ಶಿವಲಿಂಗೇಗೌಡ ಛೀಮಾರಿ ಹಾಕಿದರು.

ಶಾಸಕ ಶರಣ ಸಲಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ‘ನೀನು ಚಿಂಚೋಳಿಯಲ್ಲಿ ನಿನ್ನ ಹೆಂಡ್ತಿ ತಹಸೀಲ್ದಾರ್‌ ಅವರನ್ನು ಬಿಟ್ಟು ದುಡ್ಡು ಹೊಡೆದಿದ್ದೀಯ, ನಾಚಿಕೆಯಾಗಬೇಕು ನಿನಗೆ’ ಎಂದು ಹೇಳಿದರು.ಆಗ ಬಿಜೆಪಿ, ಜೆಡಿಎಸ್‌ ಸದಸ್ಯರು, ‘ದೇವೇಗೌಡರಿಗೆ ಚೂರಿ ಹಾಕಿದವನು’ ಎಂದು ಕೂಗಿದರು. ಇದಕ್ಕೆ ಮತ್ತಷ್ಟು ಕೋಪಗೊಂಡ ಶಿವಲಿಂಗೇಗೌಡ, ‘ನಿಮ್ಮ ಅಪ್ಪನಿಗೆ ಹಾಕಿದ್ದೆ, ನಿಮ್ ಅಪ್ಪ.. ನಿಮ್ ಅಪ್ಪ.. ನಿಮ್ ಅಪ್ಪ. ಮಾನ ಮರ್ಯಾದೆ ಇದೆಯಾ ಅಯೋಗ್ಯರು. ನಾಯಿಗಳಿಗಿಂತ ಕಡೆ ನೀವು.. ನಾಯಿಗಳಿಗಾದರೂ ನಿಯತ್ತು ಇದೆ’ ಎಂದು ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಪಷ್ಟನೆ ನೀಡಿದ ಅವರು, ‘ಕಳೆದ ಒಂದೂವರೆ ವರ್ಷದಿಂದ ನನ್ನನ್ನು ಟಾರ್ಗೆಟ್‌ ಮಾಡಿ ಟಾರ್ಚರ್‌ ನೀಡುತ್ತಿದ್ದಾರೆ. ವೇದವ್ಯಾಸ ಕಾಮತ್‌ ಅಂತೂ ನಾನು ಎದ್ದಾಗಲೆಲ್ಲ ಎದ್ದೆದ್ದು ಛೇಡಿಸುತ್ತಿರುತ್ತಾನೆ. ಈಗಲೂ ಅವರು ಪ್ರಚೋದನೆ ನೀಡಿದ್ದಕ್ಕಾಗಿಯೇ ಮಾತನಾಡಿದ್ದೇನೆ. ನನ್ನನ್ನು ಕಳ್ಳ ಎಂದು ಪದೇ ಪದೇ ಹೇಳಿದರೆ ಸುಮ್ಮನಿರಬೇಕೇ?’ ಎಂದು ಹೇಳಿ ಕ್ಷಮೆ ಕೇಳಲು ನಿರಾಕರಿಸಿದರು.