ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸುವುದಕ್ಕೆ ತತ್ವವನ್ನ ಬದಿಗೊತ್ತಿ, ಈ ತುರ್ತು ಅಧಿವೇಶನವನ್ನು ಕರೆದಿದೆ . ರಾಜ್ಯಪಾಲರ ಹತ್ತಿರ ಸುಳ್ಳು ಹೇಳಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸುವುದಕ್ಕೆ ತತ್ವವನ್ನ ಬದಿಗೊತ್ತಿ, ಈ ತುರ್ತು ಅಧಿವೇಶನವನ್ನು ಕರೆದಿದೆ . ರಾಜ್ಯಪಾಲರ ಹತ್ತಿರ ಸುಳ್ಳು ಹೇಳಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಸೋಮವಾರ ನಡೆದ ವಿಧಾನ ಪರಿಷತ್‌ ಕಲಾಪದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸುಳ್ಳನ್ನು ಮುತ್ತಿನ ಹಾರದಂತೆ ಪೋಣಿಸಿ ರಾಜ್ಯದ ಜನತೆಯ ಕುತ್ತಿಗೆಗೆ ಹಾಕಿದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ಮುಕ್ಕಾಲು ವರ್ಷವಾದರೂ ರಾಜ್ಯದ ಯುವಕರಿಗೆ ಯಾವ ಉದ್ಯೋಗವನ್ನು ನೀಡುತ್ತಿಲ್ಲ. ರಾಜ್ಯದಲ್ಲಿ 2,80,000 ಉದ್ಯೋಗಗಳು ಖಾಲಿ ಉಳಿದಿವೆ. ಪಂಚ ಗ್ಯಾರೆಂಟಿಗಳ ಜೊತೆಗೆ ರಾಜ್ಯದ ಯುವಕರಿಗೆ ಉದ್ಯೋಗ ಗ್ಯಾರೆಂಟಿ ಕೊಡುವುದು ಯಾರು? ಜೀವನದ ಗ್ಯಾರಂಟಿ ಕೊಡುವುದು ಯಾರು? ಎನ್ನುವುದು ಪ್ರಶ್ನೆಯಾಗಿ ಉಳಿದಿದೆ ಎಂದರು.

ರಾಜ್ಯದ ಅಂಗನವಾಡಿ ಕಾರ್ಯಕರ್ತರು ನಿರಂತರವಾಗಿ ಹೋರಾಟ ನಡೆಸುತ್ತಾ ಬರುತ್ತಿದ್ದಾರೆ ಆದರೂ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. 25 ವರ್ಷ ಸೇವೆ ಸಲ್ಲಿಸಿರುವ 6,000 ಅತಿಥಿ ಉಪನ್ಯಾಸಕರನ್ನು ಇವತ್ತು ಕಾಂಗ್ರೆಸ್ ಸರ್ಕಾರ ಬೀದಿಗಿಳಿಸಿದೆ. ಅವರಿಗೆ ಸರ್ಕಾರ ಯಾವ ನ್ಯಾಯ ಕೊಡಿಸಿದೆ. ಹಾಲಿನ ಪ್ರೋತ್ಸಾಹ ಧನವನ್ನು ಸರ್ಕಾರ 5 ರಿಂದ 7 ರೂಪಾಯಿಗೆ ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿತ್ತು, ಪ್ರೋತ್ಸಾಹ ಧನವನ್ನು ಹೆಚ್ಚಿಸುವುದಿರಲಿ ಸುಮಾರು 38,000 ಕೋಟಿ ರು.ಬಾಕಿ ಉಳಿಸಿಕೊಂಡಿದೆ ಎಂದು ಗುತ್ತಿಗೆದಾರರೆ ಹೇಳಿದ್ದಾರೆ. ಇವತ್ತು ಹೈನುಗಾರಿಕೆ ಮಾಡುತ್ತಿರುವಂತಹ ರೈತರು ಬಾಕಿ ಹಣ ಬಿಡುಗಡೆ ಮಾಡಿ ಇಲ್ಲವೇ ವಿಷ ಕೊಡಿ ಎಂದು ಕೇಳ್ತಾ ಇದ್ದಾರೆ ಎಂದು ದೂರಿದರು.

ಜ್ಯೋತಿ ಸಂಜೀವಿನಿ ಯೋಜನೆಯನ್ನು ರಾಜ್ಯದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ಅನುಷ್ಠಾನಗೊಳಿಸಿಲ್ಲ, ಸಾಧ್ಯವಾದರೆ ರಾಜ್ಯ ಸರ್ಕಾರ ಪತ್ರಕರ್ತರಿಗೂ ಕೂಡ ಯಾವುದಾದರು ಒಂದು ಆರೋಗ್ಯ ಯೋಜನೆಯಲ್ಲಿ ಅಳವಡಿಸಿದರೆ ತುಂಬಾ ಉಪಯೋಗವಾಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯರಿಗೆ ಭಾರತದ ತುಂಬಾ ರಾಜ್ಯದಲ್ಲಿ ಈ ಯೋಜನೆ ಜಾರಿಯಾದರೆ ರಾಜ್ಯದಲ್ಲಿ ಇನ್ನೂ ಕೂಡ ಜಾರಿಯಾಗಿಲ್ಲ ಎಂದು ಆಪಾದಿಸಿದರು.

ರಾಜ್ಯದಲ್ಲಿ 1,417 ಜನೌಷಧಿ ಕೇಂದ್ರಗಳಿದ್ದರೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 180 ಜನ ಔಷಧಿ ಕೇಂದ್ರಗಳಿವೆ. ರಾಜ್ಯ ಸರ್ಕಾರ ಜನೌಷಧಿ ಕೇಂದ್ರ ತೆರೆಯುವುದಕ್ಕೆ ಮೀನಾ ಮೇಷ ಎಣಿಸುತ್ತಿದೆ. ಸರ್ಕಾರ ಸರ್ಕಾರಿ ಮೆಡಿಕಲ್ ಗಳಲ್ಲಿ ಉಚಿತವಾಗಿ ಔಷಧಿಗಳು ಸಿಗುತ್ತಿರುವಾಗ ಜನೌಷಧಿ ಕೇಂದ್ರಗಳು ಯಾಕೆ ಬೇಕು ಎಂದು ಹೇಳುತ್ತಿವೆ. ಆದರೆ, ಸರ್ಕಾರಿ ಮೆಡಿಕಲ್ ಗಳಲ್ಲಿ 693 ಔಷಧಿಗಳಲ್ಲಿ 344 ಔಷಧಿಗಳು ಅಂದರೆ ಸುಮಾರು ಶೇ.50ರಷ್ಟು ಔಷಧಿಗಳು ಲಭ್ಯವಿಲ್ಲ ಎಂದು ಹರಿಹಾಯ್ದರು.