ಗುಂಡ್ಲುಪೇಟೆ : ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಓವರ್ ಲೋಡ್ ಟಿಪ್ಪರ್ ಹಾವಳಿ ಹಾಗೂ ಕೇರಳ ರಾಜ್ಯಕ್ಕೆ ಕಲ್ಲು, ಎಂ.ಸ್ಯಾಂಡ್ ಸಾಗಾಣಿಕೆ ಖಂಡಿಸಿ ಮಂಡಲ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆದ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ , ಟಿಪ್ಪರ್ ಹಾವಳಿ ನಿಲ್ಲಿಸಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್ ಮಾತನಾಡಿ, ಅಕ್ರಮ ಗಣಿಗಾರಿಕೆ, ಟಿಪ್ಪರ್ ಹಾವಳಿ, ಕೇರಳ ರಾಜ್ಯಕ್ಕೆ ಇಲ್ಲಿನ ಖನಿಜ ಸಂಪತ್ತು ಹೋಗುವುದು ನಿಲ್ಲಬೇಕು ಹಾಗೂ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಎಲ್.ಸುರೇಶ್ ಮಾತನಾಡಿ, ಶಾಸಕರೇ, ನಿಮ್ಮ ಅಪ್ಪನವರೇ ಸಾಕಾದಷ್ಟು ದುಡ್ಡು ಮಾಡಿದ್ದಾರೆ.ನೀವೇಕೆ ಭ್ರಷ್ಟಾಚಾರದ ಹಣ ಮುಟ್ಟುತ್ತೀರಾ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಾ.ನವೀನ್ ಮೌರ್ಯ ಮಾತನಾಡಿ, ಶಾಸಕರೇ ಅಕ್ರಮ ಗಣಿಗಾರಿಕೆ, ನೈಸರ್ಗಿಕ ಸಂಪತ್ತು ಕೇರಳಕ್ಕೆ ಹೋಗೋದು ನಿಲ್ಲಿಸಬೇಕು, ಕೆರೆಗಳಿಗೆ ನೀರು ತುಂಬಿಸಬೇಕು, ಇಲ್ಲದಿದ್ದರೆ ಗುಂಡ್ಲುಪೇಟೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಲಿತ ಮುಖಂಡ ಬಸವರಾಜು ಮಾತನಾಡಿ, ಗುಂಡ್ಲುಪೇಟೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದಕ್ಕೆ ಕಾರಣವೇ ಸ್ಥಳೀಯ ಶಾಸಕರಾಗಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಹಲವು ಭಾಗ್ಯ ಕೊಟ್ಟಿದ್ದಾರೆ. ಆದರೆ ನೀವು ಗುಂಡ್ಲುಪೇಟೆಯಲ್ಲಿ ಸಾವಿನ ಭಾಗ್ಯ ಕೊಡಲು ಹೊರಟಿದ್ದೀರಾ? ಗುಂಡ್ಲುಪೇಟೆಯಲ್ಲಿ ಗಾಂಜಾ, ಅಫೀಮು, ಕೇರಳ ಲಾಟರಿ, ಅಕ್ಕಿ ದಂಧೆ ಮಿತಿ ಮೀರಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಎನ್.ಮಲ್ಲೇಶ್, ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುನೀಲ್, ಮಹೇಂದ್ರ, ಮುಖಂಡರಾದ ಹೊರೆಯಾಲ ಮಹೇಶ್, ಮಂಚಹಳ್ಳಿ ಬಾಬು, ಮಾಡ್ರಹಳ್ಳಿ ನಾಗೇಂದ್ರ, ಹುಂಡೀಪುರ ಮಂಜು, ಕೆ.ಎಸ್.ರೇವಣ್ಣ, ಚೌಡಹಳ್ಳಿ ನಂಜಪ್ಪ, ವಾಟಾಳು ಶಿವಾನಂದ, ಪ್ರವೀಣ, ಶಿವಪ್ರಸಾದ್ ಸೇರಿದಂತೆ ನೂರಾರು ಮಂದಿ ಇದ್ದರು.
3 ವರ್ಷವಾದರೂ ಕೆರೆಗೆ ನೀರು ಬಿಡಿಸಲಿಲ್ಲ: ನಿರಂಜನ್
ಗುಂಡ್ಲುಪೇಟೆ: ಗಣೇಶ್ ಪ್ರಸಾದ್ ಶಾಸಕರಾಗಿ ೩ ವರ್ಷಗಳಾದರೂ ೧ ಬಾರಿಯೂ ತಾಲೂಕಿನ ಕೆರೆಗಳನ್ನು ತುಂಬಿಸಲು ಆಗಲಿಲ್ಲ, ಇದೆಂಥ ದೌರ್ಭಾಗ್ಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ತಾಲೂಕಿನ ಈಗಿರುವ ಕೆರೆಗಳನ್ನೇ ತುಂಬಿಸಲು ಶಾಸಕರಿಗೆ ಆಗಲಿಲ್ಲ. ಕಳೆದ ಡಿಸೆಂಬರ್ ನಲ್ಲಿ ಕೆರೆಗೆ ನೀರು ಬಿಡಿಸುವುದಾಗಿ ಹೇಳಿದ್ದರು. ತುಂಬಿಸಲಿಲ್ಲ. ಈಗ 110 ಕೆರೆಗಳಿಗೆ ನೀರು ತುಂಬಿಸ್ತಾರಾ ಎಂದು ಟೀಕಿಸಿದರು.
೧೧೦ ಕೆರೆ ಕಟ್ಟೆಗಳ ನೀರು ತುಂಬಿಸಲು ಚಾಲನೆ ಕೊಟ್ಟಂತೆ ನಾಟಕ ಮಾಡಲು ಶಾಸಕರು ಹೊರಟಿದ್ದಾರೆ. ನೀರು ತುಂಬಿಸಲು ವಿಫಲರಾಗಿದ್ದೇನೆ ಎಂದು ಶಾಸಕರೇ ಹೇಳಿಕೊಂಡಿದ್ದಾರೆ ಎಂದಮೇಲೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿ, ಮೊದಲು ಕೆರೆಗೆ ನೀರು ತುಂಬಿಸಿ, ಆಮೇಲೆ ಚರ್ಚೆಗೆ ಬನ್ನಿ ಎಂದು ಶಾಸಕರಿಗೆ ತಿರುಗೇಟು ನೀಡಿದರು.
ಟಿಪ್ಪರ್ ಹಾವಳಿ ತಡೆಯಲು ಸಂಪೂರ್ಣ ವಿಫಲರಾಗಿದ್ದೀರಾ, ಟಿಪ್ಪರ್ ಗೆ ನಾಲ್ವರು ಬಲಿಯಾದರು, ಕಳೆದ ತಿಂಗಳು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ, ಇಷ್ಟಾದರೂ ಟಿಪ್ಪರ್ ಹಾವಳಿಗೆ ಕಡಿವಾಣ ಹಾಕಲಾಗಲಿಲ್ಲ ಎಂದರು.
ಕೇರಳ ರಾಜ್ಯಕ್ಕೆ ಸಾಗುವ ಮೂಲಕ ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಕೇರಳಕ್ಕೆ ಖನಿಜ ಸಂಪತ್ತು ಹೋಗುವುದನ್ನು ನಿಲ್ಲಿಸಿ ಎಂದರೆ ಪಾಲಿಸಿ ಮ್ಯಾಟರ್ ಅಂತೀರಾ, ನೀವು ಕೇರಳ ರಾಜ್ಯದ ಶಾಸಕರಾ ಎಂದು ಪ್ರಶ್ನಿಸಿ, ಗುಂಡ್ಲುಪೇಟೆ ಶಾಸಕರಾಗಿ ತಾಲೂಕಿನ ಸಂಪತ್ತಿನ ಲೂಟಿ ತಪ್ಪಿಸಿ ಎಂದು ಆಗ್ರಹಿಸಿದರು.
ವಿಪಕ್ಷ ನಾಯಕ ಕೇರಳ ರಾಜ್ಯಕ್ಕೆ ನೈಸರ್ಗಿಕ ಸಂಪತ್ತು ಲೂಟಿ ವಿಚಾರ ಟ್ವೀಟ್ ಮಾಡಿದ್ದು, ಗುಂಡ್ಲುಪೇಟೆ ಮಾನ, ಮರ್ಯಾದೆ ರಾಜ್ಯಮಟ್ಟದಲ್ಲಿ ಹೋಗಿದೆ, ಇದಕ್ಕೇನು ಹೇಳ್ತೀರಾ ಶಾಸಕರೇ ಎಂದು ಕೇಳಿದರು.
ಹಿರಿಯ ಭೂ ವಿಜ್ಞಾನಿಗೆ ನಿರಂಜನ್, ಪತ್ರಕರ್ತರ ತರಾಟೆ
ಗುಂಡ್ಲುಪೇಟೆ: ಮಂಡಲ ಬಿಜೆಪಿ ಶುಕ್ರವಾರ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಾಜೇಶ್‌ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಹಾಗೂ ಕೆಲ ಪತ್ರಕರ್ತರು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರ ಪ್ರಶ್ನೆಗೆ ಹಿರಿಯ ಭೂ ವಿಜ್ಞಾನಿ ರಾಜೇಶ್ ಪ್ರತಿಕ್ರಿಯಿಸಿ, ಶಾಲಾ ಸಮಯದಲ್ಲಿ ಟಿಪ್ಪರ್ ಸಂಚಾರ ನಿಲ್ಲಿಸುತ್ತೇನೆ. ರಾಯಲ್ಟಿ ಕಟ್ಟೋದರಿಂದ ಕೇರಳಕ್ಕೆ ಸಾಗಿಸುವ ಖನಿಜ ಸಂಪತ್ತು ತಡೆಯಲು ನನಗೆ ಅಧಿಕಾರವಿಲ್ಲ. ನಿಲ್ಲಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ. ಅಕ್ರಮವಾಗಿ ಒತ್ತುವರಿಯಾದ ಕ್ವಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ. ಬ್ಲಾಸ್ಟಿಂಗ್ ಸಂಜೆ 6 ಬಳಿಕ ಮಾಡಲು ಸೂಚಿಸುತ್ತೇನೆ. ಓವರ್ ಲೋಡ್ ಮೇಲೆ ನಿಗಾ ಇಡಲು ಸ್ಕ್ವಾಡ್ ಮಾಡುತ್ತೇನೆ ಎಂದರು.
2 ತಂಡದಲ್ಲಿ ಕಾರ್ಯಾಚರಣೆ: ಆರ್‌ಟಿಒ
ಗುಂಡ್ಲುಪೇಟೆ: ಪಟ್ಟಣದಲ್ಲಿ ಓವರ್ ಲೋಡ್ ಟಿಪ್ಪರ್ ಸಾಗಾಣಿಕೆ ಕುರಿತು ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿಯವರು, ನಾಳೆಯಿಂದ ಮದ್ದೂರು ಚೆಕ್ ಪೋಸ್ಟ್ ಹಾಗೂ ಹಿರೀಕಾಟಿ ಚೆಕ್ ಪೋಸ್ಟ್ ಗೆ ಎರಡು ತಂಡ ಕಾರ್ಯಾಚರಣೆ ನಡೆಸಲಿದೆ ಎಂದು ಭರವಸೆ ನೀಡಿದರು.