;Resize=(412,232))
ನವದೆಹಲಿ : ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಮೇಲೆ ಒತ್ತಡ ಹೇರಲು ದೆಹಲಿಗೆ ತೆರಳಿರುವ ಕಾಂಗ್ರೆಸ್‌ನ ಹಿರಿಯ ಶಾಸಕರು ಗುರುವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದರು.
ದೆಹಲಿಯಲ್ಲಿ ಸುರ್ಜೇವಾಲ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಶಾಸಕರು, ಆದಷ್ಟು ಶೀಘ್ರ ಸಂಪುಟ ಪುನಾರಚನೆಗೆ ಒತ್ತಾಯಿಸಿದರು. ಅಲ್ಲದೆ, ಸಂಪುಟ ಪುನಾರಚನೆ ವೇಳೆ, ತಮಗೂ ಅವಕಾಶ ಕೊಡುವಂತೆ ಕೋರಿದರು.
‘ಸಂಪುಟ ಪುನಾರಚನೆ ವೇಳೆ ನಮಗೂ ಸಚಿವ ಸ್ಥಾನ ಕೊಡಿ’ ಎಂದು ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಲು ಕಾಂಗ್ರೆಸ್‌ನ ಹಲವು ಹಿರಿಯ ಶಾಸಕರು ಈಗಾಗಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಯಾಗಿ ಮನವಿ ಸಲ್ಲಿಸಲು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸುರ್ಜೇವಾಲ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸಂಪುಟ ಪುನಾರಚನೆಗೆ ಮನವಿ ಮಾಡಿದರು.
ಟಿ.ಬಿ.ಜಯಚಂದ್ರ, ಷಡಕ್ಷರಿ, ರಾಘವೇಂದ್ರ ಹಿಟ್ನಾಳ್, ಪ್ರಿಯಕೃಷ್ಣ, ಅಶೋಕ್ ಪಟ್ಟಣ್, ಅಪ್ಪಾಜಿ ನಾಡಗೌಡ, ಜಿ.ಎಸ್. ಪಾಟೀಲ್, ಆನೇಕಲ್ ಶಿವಣ್ಣ, ಶಾಂತನಗೌಡರ್, ಪುಟ್ಟರಂಗಶೆಟ್ಟಿ, ಯಶವಂತ್ ರಾಯ್ ಗೌಡ ಈ ನಿಯೋಗದಲ್ಲಿದ್ದರು.
ಈ ಮಧ್ಯೆ, ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯ ಶಾಸಕ ಟಿ.ಬಿ.ಜಯಚಂದ್ರ, ಕೆ.ಸಿ.ವೇಣುಗೋಪಾಲ ಭೇಟಿಗೂ ಸಮಯ ಕೋರಿದ್ದೇವೆ. ಸಾಧ್ಯವಾದರೆ ಉಳಿದವರ ಭೇಟಿಗೂ ಯತ್ನಿಸುತ್ತೇವೆ. ಸಂಸತ್ ಅಧಿವೇಶನ ನಡೆಯುತ್ತಿದ್ದು, ಉನ್ನತ ನಾಯಕರು ಬ್ಯುಸಿಯಾಗಿದ್ದಾರೆ. ಈವಾಗ ಭೇಟಿಯಾಗಲು ಸಾಧ್ಯವಾಗದಿದ್ದರೆ, ಇನ್ನೊಂದು ಬಾರಿ ದೆಹಲಿಗೆ ಬರಲು ತೀರ್ಮಾನ ಮಾಡಿದ್ದೇವೆ ಎಂದರು.
ಹಿರಿಯ ಶಾಸಕ ಷಡಕ್ಷರಿ ಮಾತನಾಡಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಬೇಕು ಅಂತ ಬಂದಿದ್ದೇವೆ. ಅಧಿವೇಶನ ನಡೆಯುತ್ತಿದ್ದು, ಭೇಟಿ ಕಷ್ಟ ಆಗಬಹುದು ಎಂದರು.