ಬೆಂಗಳೂರು : ಸ್ಮಾಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಆರೋಪದಡಿ ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿ ಪ್ರಾಸಿಕ್ಯೂಷನ್‌ಗೆ ಅನುಮೋದಿಸುವಂತೆ ಈ ಹಿಂದೆ ತಮಗೆ ಸಲ್ಲಿಸಲಾದ ಮನವಿಯನ್ನು ತ್ವರಿತವಾಗಿ ಪರಿಗಣಿಸುವಂತೆ ಪ್ರತಿಪಕ್ಷ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ಬುಧವಾರ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ ಪಕ್ಷದ ಶಾಸಕರು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಖಾಸಗಿ ದೂರು ಸಲ್ಲಿಕೆ:
ಸ್ಮಾಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಅಕ್ರಮ ಎಸಗಿದ ಆರೋಪದಡಿ ಬೆಸ್ಕಾಂ ಅಧ್ಯಕ್ಷ ಕೆ.ಜೆ.ಜಾರ್ಜ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೌರವ್ ಗುಪ್ತಾ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ತಾಂತ್ರಿಕ ನಿರ್ದೇಶಕ ಎಚ್.ಜೆ.ರಮೇಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಇದೇ ವಿಚಾರ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದೇವೆ. ಪ್ರಕರಣ ಸಂಬಂಧ ವಿಚಾರಣೆ ಮಾಡಿದ ನ್ಯಾಯಾಲಯವು ಆರೋಪದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿ ಆದೇಶಿಸಿದೆ ಎಂದು ತಿಳಿಸಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಸಚಿವ ಜಾರ್ಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಮಾಡಿದ ಹೈಕೋರ್ಟ್, ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಆ,20ಕ್ಕೆ ಮುಂದೂಡಿದೆ. ಹೀಗಾಗಿ ಹೈಕೋರ್ಟ್‌ನ ಮುಂದಿನ ವಿಚಾರಣೆಗೂ ಮುನ್ನ ತಾವು ನಮ್ಮ ಮನವಿ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಬಿಜೆಪಿ ನಿಯೋಗ ಮನವಿ ಮಾಡಿದೆ.