ಬೆಂಗಳೂರು : ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮದ ಹೇಳಿಕೆ ಮುಖಾಂತರ ದೇಶ ಮತ್ತು ರಾಜ್ಯದ ಮತದಾರರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಹಾಗೂ ಅವರ ಸಂವಿಧಾನ ವಿರೋಧಿ ನಡೆ ಖಂಡಿಸಿ ಬಿಜೆಪಿಯಿಂದ ಆ.5ರಂದು ಬೆಳಗ್ಗೆ 10ಕ್ಕೆ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿಭಟನೆಯಲ್ಲಿ ಪಕ್ಷದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಭಾಗವಹಿಸಲಿದ್ದಾರೆ. ಪ್ರತಿಭಟನೆ ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ನೀಡಲಿದ್ದೇವೆ. ಕಾಂಗ್ರೆಸ್ ಪಕ್ಷದ ಧೋರಣೆ ಜನರಿಗೆ ತಿಳಿಸಲಿದ್ದೇವೆ ಎಂದರು.
ರಾಹುಲ್ ಗಾಂಧಿ ಅವರು ಆ.5ರಂದು ಬೆಂಗಳೂರಿನಲ್ಲಿ ನಾಟಕ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿ ಬರುವ ಕಾರಣಕ್ಕೆ ರಾಜ್ಯ ಸರ್ಕಾರ ಸ್ವಾತಂತ್ರ್ಯ ಉದ್ಯಾನದ ಕಾಂಪೌಂಡ್ ಒಡೆದು ಹಾಕಿ ಅಲ್ಲಿದ್ದ ಮರವನ್ನೂ ಕಡಿದು ಹಾಕಿಸಿದೆ. ಹೀಗಾಗಿ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಒಂದು ಹೊಸ ಚರ್ಚೆ ಮತ್ತು ಹೊಸ ವರಸೆ ಆರಂಭ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯವೂ ಒಳಗೊಂಡಂತೆ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ. ಬಿಜೆಪಿ, ಚುನಾವಣಾ ಆಯೋಗದ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ಕಾಂಗ್ರೆಸ್ಸಿನ ಮಾರ್ಗದರ್ಶನವಿಲ್ಲದ ಕ್ಷಿಪಣಿಯಂತಿರುವ ಸುಪ್ರೀಂ ನಾಯಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹತಾಶ ರಾಹುಲ್ ಕಪಟ ನಾಟಕ:
ರಾಹುಲ್ ಗಾಂಧಿ ಅವರು ಗೊಂದಲದಲ್ಲಿದ್ದಾರೆ. ಸೋಲಿನ ಅವಮಾನ ಮತ್ತು ಹತಾಶರಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಈ ದೇಶದ ಜನರ ವಿಶ್ವಾಸ ಪಡೆದುಕೊಳ್ಳುವಲ್ಲಿ ವಿಫಲರಾದ ರಾಹುಲ್ ಗಾಂಧಿಯವರು ಒಂದು ಕಪಟ ನಾಟಕ ಆರಂಭ ಮಾಡಿದ್ದಾರೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.
ಕೋರ್ಟ್‌ಗೆ ಸಾಕ್ಷಿ ಕೊಟ್ಟಿಲ್ಲ ಏಕೆ?
ಚುನಾವಣೆಗಳಲ್ಲಿ ಅಕ್ರಮ ನಡೆದಿರುವುದಕ್ಕೆ ನನ್ನ ಬಳಿ ಶೇ.100ರಷ್ಟು ಪುರಾವೆ ಇದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧ್ವನಿ ಗೂಡಿಸಿದ್ದಾರೆ. ಅವರ ಬಳಿ ಚುನಾವಣೆಯಲ್ಲಿ ಅಕ್ರಮವಾಗಿರುವ ಬಗ್ಗೆ ಮತ್ತು ಚುನಾವಣಾ ಆಯೋಗ ದುರ್ಬಳಕೆ ಆಗಿದೆ ಎನ್ನುವ ಮಾಹಿತಿ ಅಥವಾ ಪುರಾವೆ ಇದ್ದರೆ, ಅದನ್ನು ರಾಜ್ಯ ಹೈಕೋರ್ಟಿಗೆ ಅಥವಾ ಸುಪ್ರೀಂ ಕೋರ್ಟಿಗೆ ನೀಡಿ ಏಕೆ ಪ್ರಶ್ನಿಸಲಿಲ್ಲ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.
ಮತಗಳ್ಳತನದ ಬಗ್ಗೆ ಗೊತ್ತಿದ್ದ ಮೇಲೆ ಹೇಳಲಿಲ್ಲ ಏಕೆ: ಜೋಶಿ
ರಾಜ್ಯದಲ್ಲಿ ಮತಗಳ್ಳತನ ಮಾತನಾಡಿರುವ ರಾಹುಲ್ ಗಾಂಧಿ 2024ರಲ್ಲಿ ಅವರಿಗೆ ಗೊತ್ತಾಗಲಿಲ್ಲವೇ? ಒಂದು ವರ್ಷದಿಂದ ಕತ್ತೆ ಕಾಯ್ದರಾ? 2023ರಲ್ಲಿ 139 ಕ್ಷೇತ್ರದಲ್ಲಿ ಕೈ ಗೆಲುವು ಸಾಧಿಸಿದಾಗ ಏಕೆ ಹೇಳಲಿಲ್ಲ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಗ್ಯರಿಗೆ ಮತದಾನ ಮಾಡಿದ ಬಗ್ಗೆ ರಾಜ್ಯದ ಜನತೆ ಶಪಿಸುತ್ತಿದ್ದಾರೆ. ಈಗ ಲೋಕಸಭೆ ಮತದಾನ ಬಗ್ಗೆ ಅಪಸ್ವರ ಎತ್ತಿರುವುದು ನಾಚಿಕೆಗೇಡು. ಸೋತ ಬಳಿಕ ಮತಗಳ್ಳತನವಾಗಿದೆ. ಚುನಾವಣಾ ಆಯೋಗ ಸರಿಯಲ್ಲ ಎನ್ನುವುದು ಯಾವ ನ್ಯಾಯ? ಜಾರ್ಖಂಡದಲ್ಲಿ ಕಾಂಗ್ರೆಸ್ ಅಯೋಗ್ಯತನದಿಂದ ಸೋತರೂ, ಕಾಂಗ್ರೆಸ್ ಮಿತ್ರ ಪಕ್ಷ ಗೆಲುವು ಸಾಧಿಸಿದೆ. ನಾವು ಅಲ್ಲಿ ಸೋತ ಕಾರಣಕ್ಕೆ ವಿಪಕ್ಷದಲ್ಲಿ ಇದ್ದೇವೆ. ಆದರೆ, ಉಳಿದ ಕಡೆಗಳಲ್ಲಿ ಕಾಂಗ್ರೆಸ್ ಬೇರು ಸಮೇತ ಕಿತ್ತು ಹೋಗಿದೆ. ಸೋತಾಗೊಂದು, ಗೆದ್ದಾಗೊಂದು ಹೇಳಿಕೆ ನೀಡುವುದು ನಿಲ್ಲಿಸಬೇಕು ಎಂದು ಟೀಕಿಸಿದರು.
ಈ ಹಿಂದೆ ಚುನಾವಣಾ ಆಯುಕ್ತರಾಗಿದ್ದ ಎಂ.ಎಸ್. ಗಿಲ್ ಅವರನ್ನು ನಿವೃತ್ತಿ ಬಳಿಕ ರಾಜ್ಯಸಭಾ ಸದಸ್ಯರಾಗಿ ಮಾಡಿದ್ದು, ಟಿ.ಎನ್. ಶೇಷನ್ ಅವರನ್ನು ಎಲ್.ಕೆ.ಅಡ್ವಾನಿ ವಿರುದ್ಧ ಸ್ಪರ್ಧೆಗೆ ಇಳಿಸಿದ್ದು ಇದೇ ಕಾಂಗ್ರೆಸ್ ಎಂಬುದು ಮರೆತಿದ್ದೀರಾ? ಎಂದು ಪ್ರಶ್ನಿಸಿದರು.
ಬಾಂಬು ಇಲ್ಲ, ಭೂಕಂಪನೂ ಆಗಲಿಲ್ಲ:
ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಚುನಾವಣಾ ಆಯುಕ್ತರು, ರಾಜ್ಯಪಾಲರ ನೇಮಕಕ್ಕೆ ಸಮಿತಿಗಳು, ನಿಯಮಗಳು ಇವೆ. ಅದರ ಪ್ರಕಾರವೇ ಎಲ್ಲವೂ ನಡೆಯುತ್ತದೆ. ಎಲ್ಲದಕ್ಕೂ ಅಪಸ್ವರ ಎತ್ತುವುದು ಕಾಂಗ್ರೆಸ್ಸಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಅಧಿವೇಶನದಲ್ಲಿ ರಾಹುಲ್ ಗಾಂಧಿ ಮಾತಾಡಿದರೆ ಭೂಕಂಪದಂತೆ ಅಂದಿದ್ದರು. ಬಳಿಕ ಮತಗಳ್ಳತನದ ಬಾಂಬ್ ಅಂದರು. ದೇವರ ದಯೆಯಿಂದ ಅಧಿವೇಶನದಲ್ಲಿ ಭೂಕಂಪವೂ ಆಗಲಿಲ್ಲ ಹಾಗೂ ಬಾಂಬ್ ಸಿಡಿಯಲಿಲ್ಲ ಎಂದು ಜೋಶಿ ವ್ಯಂಗ್ಯವಾಡಿದರು.
ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದ್ದು, ಆ ಪಕ್ಷ ಹಾಗೂ ಕೆಲ ಮಿತ್ರ ಪಕ್ಷಗಳು ಅಧಿವೇಶನ ನಡೆಸಲು ಬಿಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನಕ್ಕೂ ಮೊದಲು ಕಾಂಗ್ರೆಸ್ ಆಪರೇಷನ್ ಸಿಂದೂರ ಬಗ್ಗೆ ಚರ್ಚಿಸಲು ಒತ್ತಾಯಿಸಿತ್ತು. ಚರ್ಚೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದರೂ, ಕಾಂಗ್ರೆಸ್ ಅಧಿವೇಶನ ನಡೆಸಲು ಬಿಡುತ್ತಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ 28 ಕಡೆಗೆ ಬಾಂಬ್ ದಾಳಿ ನಡೆದಿವೆ. ಆದಾಗ್ಯೂ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳದ ಕುರಿತು ಅಧಿವೇಶನದಲ್ಲಿ ಬಯಲಿಗೆ ತಂದಿದ್ದೇವೆ. ಈ ಕಾರಣಕ್ಕೆ ಅಧಿವೇಶನಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಸರ್ವೋಚ್ಛ ನ್ಯಾಯಾಲಯ, ಚುನಾವಣಾ ಆಯೋಗ, ರಾಜ್ಯಪಾಲರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸದಂತೆ ಬಲರಾಮ್ ಝಾಖಡ್ ಸಭಾಧ್ಯಕ್ಷರಿದ್ದಾಗ ರೂಲಿಂಗ್ ಮಾಡಿದೆ. ಆದರೂ, ಕಾಂಗ್ರೆಸ್ ಈ ಬಗ್ಗೆ ಮಾತಾಡುವುದು ಸರಿಯಲ್ಲ ಎಂದರು.