ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ

Published : Jan 13, 2026, 07:42 AM IST
bjp

ಸಾರಾಂಶ

ಬಳ್ಳಾರಿ ಗಲಭೆ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.

  ಬೆಂಗಳೂರು :  ಬಳ್ಳಾರಿ ಗಲಭೆ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.

ಸೋಮವಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಲೋಕಭವನಕ್ಕೆ ತೆರಳಿದ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿತು.

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕ

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕಕ್ಕೆ ಅಂಕಿತ ಹಾಕಬಾರದು, ಬಳ್ಳಾರಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಕುಟುಂಬದ ಮೇಲೆ ನಡೆದ ಫೈರಿಂಗ್ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವ ಜತೆಗೆ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಡಕಾಯಿತರು, ಕೊಲೆಗಾರರು, ಭೂ ಮಾಫಿಯಾದ ಜೊತೆ ಸೇರಿ ಅಪರಾಧ ಎಸಗುವ ಪ್ರಕರಣಗಳಿಂದ ಇಡೀ ಕರ್ನಾಟಕ ರಾಜ್ಯ ತಲೆತಗ್ಗಿಸುವಂತೆ ಆಗಿರುವುದು ದುರದೃಷ್ಟಕರ. ಸುಮಾರು 236 ಪೊಲೀಸರು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸಿದ ಕಾರಣ ಸಸ್ಪೆಂಡ್ ಮಾಡಲಾಗಿದೆ. 42 ಪೊಲೀಸರು ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿರುವ ವರದಿ ಬಂದಿದೆ. ಪೊಲೀಸ್ ಪೇದೆಯೊಬ್ಬರು 7.11 ಕೋಟಿ ರು. ದರೋಡೆಯಲ್ಲಿ ಭಾಗಿಯಾಗಿರುವುದು ಕಾನೂನು ಸುವ್ಯವಸ್ಥೆಗೆ ಒಂದು ಕಪ್ಪು ಚುಕ್ಕೆಯಾಗಿ ರಾಜ್ಯ ಕಂಡಿದೆ. ಕಾನೂನು ಅಪರಾಧಗಳು ದಿನೇದಿನೇ ಹೆಚ್ಚುತ್ತಿರುವುದು. ಡ್ರಗ್ಸ್ ಮಾಫಿಯಾ ಕರ್ನಾಟಕ ರಾಜ್ಯಾದ್ಯಂತ ಪೊಲೀಸರ ಪರಿಧಿಯಲ್ಲಿ ನಡೆಯುತ್ತಿರುವುದು. ಕರ್ನಾಟಕವು ಇಂದು ಗೂಂಡಾ ರಾಜ್ಯವಾಗಿ ಪರಿವರ್ತನೆ ಆಗಿದೆ. ಹಾಗಾಗಿ ಪ್ರತಿನಿತ್ಯ ಕಾನೂನು ಸುವ್ಯವಸ್ಥೆಗಳ ಬಗ್ಗೆ ಚರ್ಚೆ ಜನಸಾಮಾನ್ಯರನ್ನು ಬೆಚ್ಚಿಬಿಳಿಸುವ ರೀತಿಯಲ್ಲಿ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಜಂಗಲ್‌ ರಾಜ್‌ ಬಗ್ಗೆ ರಾಜ್ಯಪಾಲರಿಕೆ ಮನವರಿಕೆ -ಅಶೋಕ್‌

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದೆ ಜಂಗಲ್‌ ರಾಜ್‌ ಆಗಿರುವುದರ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಕರ್ನಾಟಕವನ್ನು ಗೂಂಡಾ ರಾಜ್ಯದಿಂದ ಕಾಪಾಡಿ ಎಂದು ಮನವಿ ಮಾಡಿದ್ದೇವೆ ಎಂದರು.

ಮಸೂದೆ ರಚಿಸಲು ಮಾತ್ರ ಅಧಿವೇಶನವನ್ನು ಕರೆಯಬೇಕಿದೆ. ಆದರೆ ಕಾಂಗ್ರೆಸ್‌ ಸರ್ಕಾರ ದ್ವೇಷಭಾಷಣ ಪ್ರತಿಬಂಧಕ ಮಸೂದೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ. ಕಣ್ಣು ಮಿಟುಕಿಸಿದರೆ, ಕೈ ತೋರಿಸಿದರೆ ಬಂಧನ ಮಾಡುವಂತಹ ಕಾನೂನು ತರಲಾಗಿದೆ. 1975ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ತಂದ ತುರ್ತು ಪರಿಸ್ಥಿತಿಯಂತೆಯೇ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಪರಿಸ್ಥಿತಿ ಹೇರುತ್ತಿದ್ದಾರೆ. ಆದ್ದರಿಂದ ಇದಕ್ಕೆ ಸಹಿ ಹಾಕಬಾರದು ಎಂದು ಮನವಿ ಮಾಡಲಾಗಿದೆ ಎಂದರು.

ಈ ಕಾನೂನು ಜಾರಿಯಾದರೆ ಪ್ರತಿಪಕ್ಷಗಳ ಶಾಸಕರನ್ನು ಪೊಲೀಸರು ಸುಲಭವಾಗಿ ಬಂಧಿಸುತ್ತಾರೆ. ಸರ್ಕಾರದ ಸೂಚನೆ ಮೇರೆಗೆ ಯಾರ ಮೇಲೆ ಬೇಕಾದರೂ ಪೊಲೀಸರು ಪ್ರಕರಣ ದಾಖಲಿಸಬಹುದು. ಇದು ಕಾಂಗ್ರೆಸ್‌ ಕುತಂತ್ರದ ಮಸೂದೆ ಹಾಗೂ ವಾಕ್‌ ಸ್ವಾತಂತ್ರ್ಯ ಕಸಿಯುವ ಮಸೂದೆ ಎಂದು ಮನವರಿಕೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ ಪಕ್ಷದವರಿಂದ ಕಾರ್ಯಕರ್ತನ ಕೊಲೆಯಾಗಿದೆ. ಇದರ ಹಿಂದೆ ಇದ್ದವರನ್ನು ಬಂಧಿಸದೆ ಜನಾರ್ದನ ರೆಡ್ಡಿಯವರ ಮೇಲೆ ಆರೋಪ ಹೊರಿಸಲಾಗಿದೆ. ಸತ್ಯ ಸಂಗತಿ ಹೊರ ಬರಲು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಕೋರಲಾಗಿದೆ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ