ಕೇಂದ್ರದಲ್ಲಿ ಬಿಜೆಪಿ 5 ವರ್ಷ ಅವಧಿ ಪೂರೈಸಲಿದೆ

KannadaprabhaNewsNetwork | Updated : Jul 15 2024, 04:35 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 99 ಸ್ಥಾನ ಲಭಿಸಿವೆ ಆದರೆ ಬಿಜೆಪಿಗೆ 294 ಸ್ಥಾನ ಸಿಕ್ಕಿದೆ, ವಿರೋಧ ಪಕ್ಷದವರು ಏನೇ ಮಾಡಿದರೂ ನಮ್ಮ ಸರ್ಕಾರ 5 ವರ್ಷ ನಡೆಯಲಿದೆ ವಿರೋಧ ಪಕ್ಷದವರಿಗೆ ಅಧಿಕಾರದ ಆಸೆ ಹೆಚ್ಚಾಗಿದೆ

 ಕೋಲಾರ :  ಪ್ರಧಾನಿ ಮೋದಿ ಅವರ ಜನ ಪ್ರಿಯತೆ ಕಡಿಮೆಯಾಗಿಲ್ಲ, ಅವರ ಜನಪ್ರಿಯತೆಗೆ ಧಕ್ಕೆ ತರಲು ವಿರೋಧಿಗಳು ಪ್ರಯತ್ನಿಸಿದ್ದರು, ಕಾಂಗ್ರೆಸ್ ಕಾಲದಲ್ಲಿ ಆಗದ ಅಭಿವೃದ್ದಿ ಕೆಲಸಗಳು ಮೋದಿ ಕಾಲದಲ್ಲಿ ಆಗಿರುವುದರಿಂದ ಕರ್ನಾಟಕದಲ್ಲೂ ಈ ಬಾರಿ ನಮಗೆ ಉತ್ತಮ ಬೆಂಬಲ ಸಿಕ್ಕಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಥಾವಲೆ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಯಿತು, ಆದರೆ ಮಹಾರಾಷ್ಟ್ರದಲ್ಲಿ ಕೊಂಚ ಹಿನ್ನಡೆಯಾಯಿತು, ಸಂವಿಧಾನ ಬದಲಾವಣೆ ಮಾಡುತ್ತಾರೆ ಅನ್ನೋ ವಿಚಾರ ಪ್ರಭಾವ ಬೀರಿದೆ, ಯಾಕೆಂದರೆ ಅಂಬೇಡ್ಕರ್ ಅವರು ಮಹಾರಾಷ್ಟ್ರದವರು ಅದಕ್ಕಾಗಿ ಅಲ್ಲಿ ಎಫೆಕ್ಟ್ ಆಯಿತು ಎಂದು ಹೇಳಿದರು.ಸ್ಪಷ್ಟ ಬಹುಮತದ ಸರ್ಕಾರ

ಆದರೆ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದೇವೆ, ಐದು ವರ್ಷಗಳ ಕಾಲ ಸರ್ಕಾರ ನಿರಾತಂಕವಾಗಿ ನಡೆಯಲಿದೆ, ಮೋದಿ ಅವರು ತುಂಬಾ ಯೋಚಿಸಿ ಕೆಲಸ ಮಾಡುತ್ತಾರೆ, ನಮ್ಮ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ 99 ಸ್ಥಾನ ಲಭಿಸಿವೆ ಆದರೆ ಬಿಜೆಪಿಗೆ 294 ಸ್ಥಾನ ಸಿಕ್ಕಿದೆ, ವಿರೋಧ ಪಕ್ಷದವರು ಏನೇ ಮಾಡಿದರೂ ನಮ್ಮ ಸರ್ಕಾರ 5 ವರ್ಷ ನಡೆಯಲಿದೆ ವಿರೋಧ ಪಕ್ಷದವರಿಗೆ ಅಧಿಕಾರದ ಆಸೆ ಹೆಚ್ಚಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಲ್ಲೂ ಒಡಕು ಉಂಟಾಗಬಹುದು, ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ದೇವೇಗೌಡರು, ಪವನ್ ಕಲ್ಯಾಣ್ ನಮ್ಮ ಜೊತೆಗಿದ್ದಾರೆ, ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಮನಮೋಹನ್ ಸಿಂಗ್ ಸರ್ಕಾರ ಹತ್ತು ವರ್ಷಗಳ ಆಡಳಿತ ನೀಡಿದೆ. ಆದರೆ ಅವರಿಗೆ 200 ಸ್ಥಾನಗಳಿಸಿತ್ತು, ನರಸಿಂಹರಾವ್ ಸರ್ಕಾರಕ್ಕೂ ಬಹುಮತ ಇರಲಿಲ್ಲ ಎಂದು ಹೇಳಿದರು.ಹಿನ್ನಡೆ ಕುರಿತು ಆತ್ಮಾವಲೋಕನ

ಆದರೆ ನಮಗೆ ಸ್ಪಷ್ಟ ಬಹುಮತ ಇದೆ. 5 ವರ್ಷ ಸರ್ಕಾರ ನಡೆಸುತ್ತೇವೆ, ನಮ್ಮ ವಿರೋಧಿಗಳಿಗೆ ಹೆಚ್ಚಿನ ಸ್ಥಾನ ಬಂದಿರಬಹುದು, ಆದರೆ ಪ್ರಜಾಪ್ರಭುತ್ವದ ತೀರ್ಪು ಒಪ್ಪಿ ನಡೆಯುತ್ತೇವೆ, ನಮಗೆ ಹಿನ್ನಡೆಯಾಗಲು ಕಾರಣ ಕುರಿತು ಆತ್ಮಾವಲೋಕನ ಮಾಡಲಿದ್ದೇವೆ, ಮುಸ್ಲಿಂ ಹಾಗೂ ದಲಿತ ಮತಗಳು ನಮ್ಮ ವಿರುದ್ಧವಾದದ್ದು ನಮಗೆ ಹಿನ್ನಡೆಗೆ ಕಾರಣ, ಸಂವಿಧಾನ ಬದಲಾವಣೆ ವಿಚಾರ ಕೂಡ ಚುನಾವಣೆಯಲ್ಲಿ ಪ್ರಭಾವ ಬೀರಿತ್ತು, ನಾವು ಸಂವಿಧಾನ ಬಲಪಡಿಸಲು ಬಂದಿದ್ದೇವೆ ಎಂದು ತಿಳಿಸಿದರು.

Share this article