ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಇಂದಿನಿಂದ

Published : Sep 01, 2026, 06:58 AM IST
BJP

ಸಾರಾಂಶ

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು. ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ‘ಬಳ್ಳಾರಿ ಚಲೋ’

ಲಿಂಗಸುಗೂರು/ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು. ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯು ಮಂಗ‍ಳವಾರದಿಂದ ಆರಂಭ‍ವಾಗಲಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬಳ್ಳಾರಿವರೆಗೆ 10 ದಿನಗಳ ಕಾಲ ಸುಮಾರು 175 ಕಿ.ಮೀ. ಪಾದಯಾತ್ರೆ ನಡೆಯಲಿದ್ದು, ಮಂಗಳವಾರ ಬೆಳಗ್ಗೆ 11 ಗಂಟೆಗೆ ಲಿಂಗಸುಗೂರಿನ ಬೈಪಾಸ್ ರಸ್ತೆಯಲ್ಲಿನ ಜಿ.ಕೆ. ರೆಸಿಡೆನ್ಸಿ ಮುಂಭಾಗದ ಮೈದಾನದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್‌ ಜೋಶಿ ಅವರು ಚಾಲನೆ ನೀಡಲಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧದ ಮುಡಾ ಹಗರಣ ವಿಚಾರವಾಗಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸಂಘಟಿತ ಹೋರಾಟ ನಡೆಸಿತ್ತು. ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿತ್ತು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ ಕೋಟ್ಯಂತರ ರು. ಮೌಲ್ಯದ 14 ಬದಲಿ ನಿವೇಶನಗಳನ್ನು ವಾಪಸ್‌ ನೀಡಿದ್ದರು. ಅದಾದ ಬಳಿಕ ವಾಲ್ಮೀಕಿ ನಿಗಮದ ಹಗರಣ ಬಯಲಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರು ರಾಜಿನಾಮೆ ಸಲ್ಲಿಸಿದ್ದರು.

ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮತ್ತೆ ಸಚಿವ ಸ್ಥಾನ ಅಲಂಕರಿಸಿದ ನಾಗಂದ್ರ ವಿರುದ್ಧ ವಿಜಯೇಂದ್ರ ಅವರು ಮೈತ್ರಿ ಪಕ್ಷ ಜೆಡಿಎಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನದ ಒಳಗೆ ಮತ್ತು ಹೊರಗೆ ಸಂಘಟಿತ ಹೋರಾಟ ರೂಪಿಸಿದರು. ಮಿತ್ರ ಪಕ್ಷ ಜೆಡಿಎಸ್‌ ಸಹಯೋಗದೊಂದಿಗೆ ಸದನದ ಒಳಗೆ ಮತ್ತು ಹೊರಗೆ ಅಧಿವೇಶನದ ಕೊನೆಯ ದಿನದವರೆಗೂ ಹೋರಾಟ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಹೋರಾಟಕ್ಕೆ ಮಣಿಯದ ಸರ್ಕಾರ ಸದನವನ್ನು ಮೊಟಕುಗೊಳಿಸಿತ್ತು. ಆದರೆ, ರಾಜೀನಾಮೆ ವಿಚಾರ ಕೈಬಿಡದ ವಿಜಯೇಂದ್ರ ಅವರು ಸದನದ ಹೊರಗೆ ಹೋರಾಟ ಮುಂದುವರೆಸಲು ನಿರ್ಧರಿಸಿದರು. ನಾಗೇಂದ್ರ ರಾಜೀನಾಮೆ ಸೇರಿದಂತೆ ವಿವಿಧ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಆಗ್ರಹಿಸಿ ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಘೋಷಿಸಿದರು. ಸರ್ಕಾರಕ್ಕೆ ಮುಜುಗರವಾಗಲಿದೆ ಎಂಬ ಕಾರಣಕ್ಕಾಗಿ ಸಚಿವ ನಾಗೇಂದ್ರ ಅಂತಿಮವಾಗಿ ರಾಜೀನಾಮೆ ನೀಡಿದರು.

ರಾಜ್ಯದ ಬರಗಾಲ ನಿರ್ವಹಣೆಯಲ್ಲಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯ

ಇದೀಗ ರಾಜ್ಯದ ಬರಗಾಲ ನಿರ್ವಹಣೆಯಲ್ಲಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯ, ಕೆಪಿಎಸ್‌ಸಿ ಅಕ್ರಮ, ಗೃಹಲಕ್ಷ್ಮೀ ಹಣದ ದುರ್ಬಳಕೆ ಸೇರಿದಂತೆ ಸರ್ಕಾರದ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆಯನ್ನು ನಡೆಸಲು ವಿಜಯೇಂದ್ರ ನಿರ್ಧರಿಸಿ ಸಿದ್ಧತೆ ಕೈಗೊಂಡರು.

ಇದಕ್ಕಾಗಿ ಲಿಂಗಸುಗೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಈಗಾಗಲೇ ಬೃಹತ್ ವೇದಿಕೆ ಸಜ್ಜುಗೊಂಡಿದೆ. ವೇದಿಕೆ ಅಕ್ಕ-ಪಕ್ಕ ಸೇರಿ ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಪಕ್ಷದ ಬ್ಯಾನರ್‌, ಬಾವುಟ ಹಾಗೂ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಮೆರವಣಿಗೆಯ ಮಾರ್ಗ ಕೇಸರಿಮಯವಾಗಿದೆ.

ಮಂಗಳವಾರ ಬೆಳಗ್ಗೆ 10 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1 ಗಂಟೆಗೆ ಪಾದಯಾತ್ರೆ ಆರಂಭಗೊಳ್ಳಲಿದೆ. ಲಿಂಗಸುಗೂರು ಪಟ್ಟಣದ ಬೈಪಾಸ್‌ ರಸ್ತೆ ಬಳಿಯ ಖಾಸಗಿ ಲೇಔಟ್‌ನಿಂದ ಆರಂಭವಾಗಲಿರುವ ಪಾದಯಾತ್ರೆ, 10 ದಿನಗಳ ಕಾಲ 175 ಕಿ.ಮೀ. ಕ್ರಮಿಸಿ ಸೆ.10ಕ್ಕೆ ಬಳ್ಳಾರಿ ತಲುಪಲಿದೆ. ಲಿಂಗಸುಗೂರು, ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಕುಡತಿನಿ ಮಾರ್ಗವಾಗಿ ಪಾದಯಾತ್ರೆ ಬಳ್ಳಾರಿ ತಲುಪಲಿದೆ.

ಲಿಂಗಸುಗೂರಿನಿಂದ ಆರಂಭವಾಗುವ ಪಾದಯಾತ್ರೆ ಮೊದಲ ದಿನ ಸುಮಾರು 8 ಕಿ.ಮೀ. ಕ್ರಮಿಸಿ ಲಿಂಗಸುಗೂರು ತಾಲೂಕಿನ ಸಂತೆಕಲ್ಲೂರು ಮಠದಲ್ಲಿ ಕೊನೆಗೊಳ್ಳಲಿದೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ, ಬುಧವಾರ ಅಲ್ಲಿಂದ ಮಸ್ಕಿ ಕಡೆ ಪಾದಯಾತ್ರೆ ಸಾಗಲಿದೆ.

- ಲಿಂಗಸುಗೂರಲ್ಲಿ ಬೆಳಗ್ಗೆ 11ಕ್ಕೆ ಕೇಂದ್ರ ಸಚಿವ ಜೋಶಿ ಚಾಲನೆ

- 10 ದಿನಗಳ ಕಾಲ 175 ಕಿ.ಮೀ. ಸಂಚರಿಸಲಿರುವ ಕಾಲ್ನಡಿಗೆ

- ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮತ್ತೊಂದು ಪಾದಯಾತ್ರೆ

- ನಾಗೇಂದ್ರ ರಾಜೀನಾಮೆ ಬಳಿಕವೂ ತಗ್ಗದ ಪ್ರತಿಪಕ್ಷ ಹೋರಾಟ

- ವಾಲ್ಮೀಕಿ ನಿಗಮ ಹಗರಣದ ಆರೋಪಿ ನಾಗೇಂದ್ರರನ್ನು ಸಚಿವರಾಗಿ ನೇಮಿಸಿದ್ದಕ್ಕೆ ಸದನದೊಳಗೆ ಬಿಜೆಪಿ ಹೋರಾಟ

- ಸತತ 8 ದಿನ ಹೋರಾಟದ ಬಳಿಕವೂ ಸಚಿವ ಸ್ಥಾನದಿಂದ ನಾಗೇಂದ್ರ ತೆಗೆಯದ ಹಿನ್ನೆಲೆಯಲ್ಲಿ ಪಾದಯಾತ್ರೆ ಘೋಷಣೆ

- ಇದು ಮುಂಬರುವ ದಿನಲ್ಲಿ ಪಕ್ಷಕ್ಕೆ ಮುಳುವಾಗಬಹುದೆಂದು ದಿಢೀರ್‌ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಸಲ್ಲಿಕೆ

- ಆದರೆ ₹187 ಕೋಟಿ ಹಣ ನಿಗಮಕ್ಕೆ ಮರಳಿಲ್ಲ ಎಂದು ಬಿಜೆಪಿ ಕಿಡಿ. ಹೀಗಾಗಿ ಪಾದಯಾತ್ರೆ ಮುಂದುವರಿಸಲು ನಿರ್ಧಾರ

- ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬಳ್ಳಾರಿವರೆಗೆ 10 ದಿನಗಳ ಕಾಲ ಸುಮಾರು 175 ಕಿ.ಮೀ. ಪಾದಯಾತ್ರೆ ನಿಗದಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಗೃಹಲಕ್ಷ್ಮಿ’ಗೆ ಚಾಲನೆ ನೀಡಿದ್ದೆ ಎಂದು ಸ್ಮರಿಸಲು ಹೆಮ್ಮೆ : ಸಿದ್ದು
ಅಲ್ಲೋಲಕಲ್ಲೋಲವಾಗುವ ಪ್ರಕರಣ ಶೀಘ್ರ : ಎಚ್‌ಡಿಕೆ