;Resize=(412,232))
ಬೆಂಗಳೂರು : ಮೂರು ವರ್ಷಗಳ ಹಿಂದೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿದ್ದೆ ಎಂಬುದನ್ನು ಸ್ಮರಿಸಲು ನನಗೆ ಹೆಮ್ಮೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಯೋಜನೆಯ ಫಲಾನುಭವಿಗಳಿಗೆ ಶುಭಾಶಯ ಕೋರಿ ಈ ವಿಷಯವನ್ನು ಹಂಚಿಕೊಂಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವ ಸಂಕಲ್ಪ ಮಾಡಿದ್ದೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನಮ್ಮ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಮೂರು ವರ್ಷಗಳ ಹಿಂದೆ ಇದೇ ದಿನ ಜಾರಿಗೆ ತಂದು, ರಾಜ್ಯದ ಪ್ರತಿಯೊಬ್ಬ ಅರ್ಹ ಮಹಿಳೆಗೆ ಪ್ರತಿ ತಿಂಗಳು 2000 ರು. ನೀಡುವ ಭರವಸೆಯನ್ನು ಈಡೇರಿಸಿದೆವು ಎಂದಿದ್ದಾರೆ.
ಇದರಿಂದ ಇಂದು ಲಕ್ಷಾಂತರ ಗೃಹಲಕ್ಷ್ಮಿಯರ ಬದುಕಿನಲ್ಲಿ ಈ ಯೋಜನೆ ಭರವಸೆಯ ಬೆಳಕಾಗಿದೆ. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ, ಆರೋಗ್ಯ, ಹೀಗೆ ತಮ್ಮ ಕುಟುಂಬದ ಅಗತ್ಯಗಳಿಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಆರ್ಥಿಕ ಶಕ್ತಿಯನ್ನು ಈ ಯೋಜನೆ ಮಹಿಳೆಯರಿಗೆ ನೀಡಿದೆ. ಒಬ್ಬ ತಾಯಿಯ ಮುಖದಲ್ಲಿ ಮೂಡುವ ನೆಮ್ಮದಿ, ಒಬ್ಬ ಗೃಹಿಣಿಗೆ ಸಿಕ್ಕಿರುವ ಆರ್ಥಿಕ ಸ್ವಾತಂತ್ರ್ಯ, ಮಕ್ಕಳ ಭವಿಷ್ಯದ ಬಗ್ಗೆ ಒಂದು ಕುಟುಂಬದಲ್ಲಿ ಮೂಡುವ ವಿಶ್ವಾಸ ಇವೇ ಗೃಹಲಕ್ಷ್ಮಿಯ ನಿಜವಾದ ಯಶಸ್ಸು ಎಂದಿದ್ದಾರೆ.
ಕೋಟ್ಯಂತರ ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ಮತ್ತು ಆತ್ಮವಿಶ್ವಾಸದ ದೀಪ ಬೆಳಗುತ್ತಿರುವುದನ್ನು ನೋಡಲು ನನಗೆ ಸಂತೋಷವಾಗುತ್ತಿದೆ. ಗೃಹಲಕ್ಷ್ಮಿ ಕೇವಲ ಒಂದು ಯೋಜನೆಯಲ್ಲ. ಅದು ಮಹಿಳೆಯರ ಮೇಲಿನ ನಮ್ಮ ನಂಬಿಕೆ, ಗೌರವ ಮತ್ತು ಬದ್ಧತೆಯ ಪ್ರತೀಕ. ಭರವಸೆಗಳು ರಾಜಕಾರಣವಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ನಿಜವಾದ ಜನಸೇವೆ ಎಂದು ಹೇಳಿದ್ದಾರೆ.