ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಕನಸಿನ ಸಮಾಜ ನಿರ್ಮಾಣ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Apr 15, 2025, 02:02 AM ISTUpdated : Apr 15, 2025, 04:06 AM IST
Ambedkar Vidhanasoudha 3 | Kannada Prabha

ಸಾರಾಂಶ

ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರವನ್ನು ಅನುಸರಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಅವರು ಬಯಸಿದಂಥ ಸಮಾಜ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಂಗಳೂರು : ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರವನ್ನು ಅನುಸರಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಅವರು ಬಯಸಿದಂಥ ಸಮಾಜ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರು ಸೋಮವಾರ ವಿಧಾನಸೌಧದ ಪೂರ್ವ ದ್ವಾರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಅಂಬೇಡ್ಕರ್ ಅವರ ಆಶಯಗಳ ಜಾರಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಮ್ಮ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಅವರು ಇಡೀ ದೇಶದ ಶಿಕ್ಷಣ ವಂಚಿತ ನೂರಾರು ಜಾತಿ ಸಮುದಾಯಗಳಿಗೆ ಶಿಕ್ಷಣ ಸಿಗಲು ಕಾರಣಕರ್ತರಾದರು. ಮುಸಲ್ಮಾನರು ಶಿಕ್ಷಣದಿಂದ ವಂಚಿತರಾಗಬಾರದು, ಅವಕಾಶಗಳಿಂದ ವಂಚಿತರಾಗಬಾರದು. ಹೀಗಾಗಿ ಸಂವಿಧಾನ ಹೇಳಿದಂತೆ ನಾವು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಇಷ್ಟಕ್ಕೇ ಕಾಂಗ್ರೆಸ್ ಬರೀ ಮುಸಲ್ಮಾನರನ್ನು ಓಲೈಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಹುತ್ವದ ದೇಶ ನಿರ್ಮಾಣಕ್ಕೆ, ಭ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಸಾರಾಯಿ ಬೇಡ, ಶಾಲೆ ಬೇಕು ಎನ್ನುವುದು ದಲಿತ ಸಂಘರ್ಷ ಸಮಿತಿ ಹೋರಾಟದ ಘೋಷಣೆಯಾಗಿತ್ತು. ನಾನು ಉಪಮುಖ್ಯಮಂತ್ರಿ ಆದ ತಕ್ಷಣ ಊರು ಊರಲ್ಲಿ ವಸತಿ ಶಾಲೆ ಆರಂಭಿಸಿದೆ. ಮುಂದಿನ ಆರ್ಥಿಕ ವರ್ಷದ ಕೊನೆಯ ವೇಳೆಗೆ ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ತೆರೆದಿರುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಎಚ್‌.ಸಿ.ಮಹದೇವಪ್ಪ ಮತ್ತಿತರ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.

ಅಂಬೇಡ್ಕರ್‌ರನ್ನು ನೆಹರೂ ವಿರೋಧಿಸಲಿಲ್ಲ:

ಅಂಬೇಡ್ಕರ್ ಅವರನ್ನು ನೆಹರೂ ವಿರೋಧಿಸಲಿಲ್ಲ. ಹಾಗಿದ್ದರೆ, ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಲು ಆಯ್ಕೆ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ತಂದಾಗ ನೆಹರೂ ಅದರ ಪರವಾಗಿಯೇ ಇದ್ದರು. ನಮ್ಮಲ್ಲಿರುವ ಕೆಲವು ಶಕ್ತಿಗಳು ನೆಹರೂ ಅವರು ಅದನ್ನು ಜಾರಿ ಮಾಡಲು ಬಿಡಲಿಲ್ಲ. ಆದರೆ ಹಿಂದೂ ಕೋಡ್ ಬಿಲ್‌ನಲ್ಲಿರುವ ಅಂಶಗಳನ್ನು ನೆಹರೂ ಅವರು ಅವರ ಅಧಿಕಾರದ ಅವಧಿಯಲ್ಲಿ ಜಾರಿ ಮಾಡುವ ಪ್ರಯತ್ನ ಮಾಡಿದ್ದರು ಎಂದು ಮುಖ್ಯಮಂತ್ರಿಯವರು ಇದೇ ವೇಳೆ ಹೇಳಿದರು.

ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ. ಸರ್ಕಾರ ಅತ್ಯಂತ ಗೌರವ, ನಮ್ರತೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸುತ್ತಿದೆ. ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಅನ್ಯಾಯದಿಂದ ಮುಕ್ತಿ ಪಡೆಯಬೇಕೆಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದು ಸ್ಮರಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ