ಕಾಂಗ್ರೆಸ್‌ ಆಧಾರಸ್ತಂಭ ಸೇವಾದಳದವರಿಗೂ ಅಧಿಕಾರ - ಪಕ್ಷದಲ್ಲಿ ಎಲ್ಲರಿಗಿಂತಲೂ ಕೊನೆ ಎಂಬ ಭಾವನೆ ಬೇಡ : ಡಿಕೆಶಿ

Published : Apr 14, 2025, 10:17 AM IST
dk shivakumar

ಸಾರಾಂಶ

ಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಪಕ್ಷದಲ್ಲಿ ನೀವು ಎಲ್ಲರಿಗಿಂತ ಕೊನೆ ಎಂಬ ಭಾವನೆ ಬೇಡ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡುವ ಚಿಂತನೆ ನಡೆಸಿದ್ದೇವೆ ಎಂದು ಕಾಂಗ್ರೆಸ್‌ನ ಸೇವಾದಳ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದಾರೆ.

 ಬೆಂಗಳೂರು : ಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಪಕ್ಷದಲ್ಲಿ ನೀವು ಎಲ್ಲರಿಗಿಂತ ಕೊನೆ ಎಂಬ ಭಾವನೆ ಬೇಡ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡುವ ಚಿಂತನೆ ನಡೆಸಿದ್ದೇವೆ ಎಂದು ಕಾಂಗ್ರೆಸ್‌ನ ಸೇವಾದಳ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದಾರೆ.

ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಭಾನುವಾರ ನಡೆದ ಭಾರತೀಯ ಸೇವಾದಳದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

ನೀವು ಮಾನಸಿಕವಾಗಿ ಗಟ್ಟಿಯಾಗಿರಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸೇವಾದಳದವರಿಗೆ ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ನೀಡಲಾಗುವುದು. ಕೆಲ ನಾಯಕರು ನಿಮ್ಮನ್ನು ಅಗೌರವವಾಗಿ ನಡೆಸಿಕೊಳ್ಳುವುದನ್ನು ನೋಡಿದ್ದೇವೆ. ಸೂಕ್ತ ಕಾಲದಲ್ಲಿ ಅವರಿಗೆ ಸೂಕ್ತ ಸಂದೇಶ ರವಾನಿಸಲಾಗುವುದು ಎಂದು ಹೇಳಿದರು.

ನಮ್ಮ ಸಮಾಜದಲ್ಲಿ ರಾಮನ ತಂದೆ ದಶರಥ ಮಹಾರಾಜನಿಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಅದೇ ರೀತಿ ನೀವು ಕಾಂಗ್ರೆಸ್ ಪಕ್ಷಕ್ಕೆ ಆಧಾರಸ್ತಂಭ ಎಂಬುದನ್ನು ತಲೆಯಲ್ಲಿಟ್ಟುಕೊಳ್ಳಬೇಕು. ಸೇವಾದಳ ಕಾಂಗ್ರೆಸ್ ಪಕ್ಷದ ಕಡೆಯ ಅಂಗ, ನಮ್ಮನ್ನು ಗುರುತಿಸುವುದಿಲ್ಲ ಎಂಬುದನ್ನು ನಿಮ್ಮ ತಲೆಯಿಂದ ಕಿತ್ತೊಗೆಯಬೇಕು. ನೀವು ಶಾಸಕರು, ಮಂತ್ರಿ, ಮುಖ್ಯಮಂತ್ರಿ ಸಹ ಆಗಬಹುದು ಎಂದರು.

ಜಾತಿಗಣತಿ ಆತುರದ ನಿರ್ಧಾರವಿಲ್ಲ: ಡಿಕೆಶಿ 

‘ಜಾತಿವಾರು ಸಮೀಕ್ಷಾ ವರದಿಯನ್ನು ನಾನು ಇನ್ನೂ ನೋಡಿಲ್ಲ. ಈ ವಿಚಾರದಲ್ಲಿ ಆತುರದ ನಿರ್ಧಾರ ಮಾಡುವುದಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಕೇವಲ ಒಂದು ಸಮುದಾಯಕ್ಕೆ ಅಲ್ಲ, ಎಲ್ಲರಿಗೂ ನ್ಯಾಯ ಕೊಡಿಸಬೇಕಿರುವುದು ನನ್ನ ಹೊಣೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಮೀಕ್ಷಾ ವರದಿಯಲ್ಲಿ ಒಕ್ಕಲಿಗರನ್ನು ಆರನೇ ಸ್ಥಾನದಲ್ಲಿ ತೋರಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ. ಹೀಗಾಗಿ ಒಂದು ಸಮುದಾಯವಷ್ಟೇ ಅಲ್ಲ, ಎಲ್ಲರಿಗೂ ನ್ಯಾಯ ಕೊಡಿಸುವುದು ನನ್ನ ಹೊಣೆ. ಇದೇ ನನ್ನ ನಿಲುವು, ಬದ್ಧತೆ ಎಲ್ಲವೂ ಆಗಿರುತ್ತದೆ ಎಂದರು.

ಒಕ್ಕಲಿಗ ಸಮುದಾಯಕ್ಕೆ ನೀವು ನನ್ನ ಕೈಗೆ ಪೆನ್ನು ಕೊಡಿ ಎಂದು ಕೇಳಿದ್ದಿರಿ ಎಂಬ ಪ್ರಶ್ನೆಗೆ, ಅದೇ ಬೇರೆ ವಿಚಾರ ಇದೇ ಬೇರೆ ವಿಚಾರ. ನಾನು ಈ ವಿಚಾರದಲ್ಲಿ ಏನೂ ಹೇಳಿರಲಿಲ್ಲ. ವರದಿ ಭಾನುವಾರವಷ್ಟೇ ನನಗೆ ತಲುಪಿದೆ. ಪೂರ್ಣ ಪ್ರಮಾಣದಲ್ಲಿ ಓದಿ ಬಳಿಕ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.

ಲಿಂಗಾಯತರು ವರದಿ ಪರಿಶೀಲನೆಗೆ ತಜ್ಞರ ಸಮಿತಿ ರಚನೆ ಮಾಡುವ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹಾಗೂ ತಮ್ಮ ಹಕ್ಕು ಪ್ರತಿಪಾದನೆ ಮಾಡಿಕೊಳ್ಳಲು ಎಲ್ಲರಿಗೂ ಅವಕಾಶವಿದೆ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದಷ್ಟೇ ಹೇಳಿದರು.

ವರದಿ ಬಗ್ಗೆ ಚರ್ಚೆಗೆ ಅವಕಾಶ:

ವರದಿ ಬಗ್ಗೆ ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಪಡೆಯಲಾಗುವುದು. ಇದಕ್ಕಾಗಿ ಅಧಿವೇಶನದಲ್ಲಿ ವರದಿ ಮಂಡಿಸಿ ಚರ್ಚೆಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಆತುರದ ನಿರ್ಧಾರ ಮಾಡುವುದಿಲ್ಲ. ಏ.17 ರಂದು ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಲಾಗುವುದು. ಹೀಗಾಗಿ ಈ ಬಗ್ಗೆ ಅನಗತ್ಯ ಗೊಂದಲಗಳು ಬೇಡ. ಬಿಜೆಪಿಯವರು ರಾಜಕೀಯ ಕಾರಣಕ್ಕೆ ನೀಡುವ ಹೇಳಿಕೆಗಳಿಗೆ ಆದ್ಯತೆ ಕೊಡಬೇಕಾಗಿಲ್ಲ ಎಂದು ಇದೇ ವೇಳೆ ಶಿವಕುಮಾರ್‌ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!