ಜಾತಿ ಗಣತಿ ವರದಿಯನ್ನು ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಮಂಡ್ಯ : ಜಾತಿ ಗಣತಿ ವರದಿಯನ್ನು ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ನೂರಾರು ಕೋಟಿ ಖರ್ಚು ಮಾಡಿ ಜಾತಿ ಗಣತಿ ಮಾಡಿದೆ. ವರದಿಯನ್ನು ಬಿಡುಗಡೆ ಮಾಡುತ್ತಿಲ್ಲವೆಂದು ಬಿಜೆಪಿ-ಜೆಡಿಎಸ್‌ನವರೇ ದೂರಿದ್ದರು. ಈಗ ಸರ್ಕಾರ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಆ ಕುರಿತು ಚರ್ಚೆ ಮಾಡುತ್ತೇವೆ. ಅದಕ್ಕಿಂತ ಮುಂಚೆಯೇ ಬಿಜೆಪಿ-ಜೆಡಿಎಸ್ ವಿರೋಧ ಸರಿಯಲ್ಲ ಎಂದು ಚಾಟಿ ಬೀಸಿದರು.ಎಲ್ಲ ಸಮಾಜಕ್ಕೂ ನ್ಯಾಯ ಕೊಡಿಸುವ ದೃಷ್ಟಿಯಿಂದ ಜಾತಿ ಗಣತಿ ನಡೆಸಲಾಗಿದೆ. ಒಬ್ಬರಿಗೆ ನ್ಯಾಯ, ಮತ್ತೊಬ್ಬರಿಗೆ ಅನ್ಯಾಯವಾಗುವ ಪ್ರಶ್ನೆಯೇ ಇಲ್ಲ. ಸಣ್ಣ-ಪುಟ್ಟ ನೂನ್ಯತೆ ಇದ್ದರೆ ಸಚಿವ ಸಂಪುಟದಲ್ಲಿಯೇ ತೀರ್ಮಾನಿಸಿ ಸರಿಪಡಿಸಿಕೊಳ್ಳುತ್ತೇವೆ.
ವಿರೋಧ ಪಕ್ಷದವರು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದರಲ್ಲಿ ಅವರಿಗೆ ಜನರಿಂದ ನಿರೀಕ್ಷಿತ ಶಕ್ತಿ ಸಿಗುವುದಿಲ್ಲ. ಮೀನು ಕೈ ಜಾರಿ ಹೋದಂತೆ ಬಿಜೆಪಿಗೆ ಯಾವ ವಿಚಾರವೂ ಸಿಕ್ತಿಲ್ಲ. ಬಿಜೆಪಿಯವರನ್ನ ನೋಡಿದರೆ ನನಗೆ ಹೊಟ್ಟೆ ಉರಿಯುತ್ತೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜೊತೆಗೆ ಸ್ವಾಮೀಜಿಗಳು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, ಸ್ವಾಮೀಜಿಗಳಿಗೆ ವರದಿ ಕೈ ತಲುಪಿಲ್ಲ. ಜಾತಿಗಣತಿ ವರದಿಯಲ್ಲಿ ಏನಿದೆ ಎಂದು ಅವರಿಗೆ ಗೊತ್ತಿಲ್ಲ. ಊಹಾಪೋಹದಿಂದ ಕೆಲವರು ಮಾತನಾಡುತ್ತಿದ್ದಾರೆ.
ನಮ್ಮ ಸರ್ಕಾರ, ನಮ್ಮ ಪಕ್ಷ ಯಾವ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಜಾತಿ ಗಣತಿ ವರದಿ ಸಚಿವ ಸಂಪುಟದಲ್ಲಿ ಮಂಡನೆ ಆಗಿದೆ, ಇನ್ನೂ ಅಂಗೀಕಾರವಾಗಿಲ್ಲ. ಬಳಿಕ ಎಲ್ಲರೂ ಅದರ ಬಗ್ಗೆ ಚರ್ಚೆ ಮಾಡಲಿ ಎಂದರು.
ಮುಸ್ಲಿಂರಿಗೆ ಮೀಸಲಾತಿ ನೀಡಿ ಉಳಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆಂಬ ಆರೋಪದ ಬಗ್ಗೆ ಕೇಳಿದಾಗ ಪ್ರಧಾನಿ ಮೋದಿ ವಿರುದ್ಧ ಚಲುವರಾಯಸ್ವಾಮಿ ಕಿಡಿಕಾರಿದರು. ಮೋದಿ ಮುಸಲ್ಮಾನರಿಗೆ ಏಕೆ ರಂಜಾನ್ ಕಿಟ್ ಕೊಟ್ಟರು. ಅಧಿಕಾರಕ್ಕೆ ಬಂದು ಹತ್ತು ವರ್ಷ ಆಗಿದೆ. ಹಿಂದುತ್ವದ ಹೆಸರು ಹೇಳಿಕೊಂಡು ಮೋದಿ ಜನರನ್ನು ಮರುಳು ಮಾಡುತ್ತಿದ್ದಾರೆ. ನಮ್ಮದು ಜಾತ್ಯತೀತ ರಾಷ್ಟ್ರ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಕಾಂಗ್ರೆಸ್ ಪಕ್ಷ. ಅದನ್ನು ಬಿಟ್ಟು ಮಾಡುವುದಾದರೆ ಮೋದಿ ಮಾಡಲಿ. ಎಲ್ಲವನ್ನೂ ಸರಿಪಡಿಸಲಿ ಎಂದು ಸವಾಲು ಹಾಕಿದರು.
ಮುಸಲ್ಮಾನರಿಗೆ ಶೇ.೪ರಷ್ಟು ಮೀಸಲಾತಿ ಕೊಟ್ಟಿದ್ದೇ ದೇವೇಗೌಡರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿಯೇ ಹುಟ್ಟಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದರು. ಇವತ್ತು ಮುಸಲ್ಮಾನರು ಅವರಿಂದ ದೂರವಾಗಿಬಿಟ್ಟರಾ ಎಂದು ಬಿಜೆಪಿ ಜೊತೆಗೆ ದೇವೇಗೌಡರ ವಿರುದ್ಧವೂ ಹರಿಹಾಯ್ದರು.
ಕುಮಾರಸ್ವಾಮಿ ಆಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಆಣೆ ಮಾಡಲು ನನ್ನ ಜೊತೆ ಬರಬೇಕೆಂದು ನಾನು ಹೇಳಿಲ್ಲ. ಧರ್ಮಸ್ಥಳದ ಮಂಜುನಾಥನ ಹೆಸರು ಹೇಳಿ ಅವರು ಏನು ಹೇಳುವರೋ ಹೇಳಲಿ. ಅದಕ್ಕಿಂತ ಹೆಚ್ಚು ಆಣೆ ಏನೂ ಇಲ್ಲ. ಅವರು ಹಾಗೆ ಹೇಳಿದರೆ ನಾನು ಬದ್ಧನಾಗುತ್ತೇನೆ ಎಂದರು.