;Resize=(412,232))
ಮಸ್ಕಿ (ರಾಯಚೂರು) : ರಾಜ್ಯದ ಸುಮಾರು 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರಪೀಡಿತ ಪ್ರದೇಶಗಳ ರೈತರ ಬೆಳೆ ಸಾಲವನ್ನು ₹5 ಲಕ್ಷದವರೆಗೆ ಮನ್ನಾ ಮಾಡಿ. ರೈತರ ಸಮಸ್ಯೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಗ್ರಹಿಸಿದ್ದಾರೆ.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು.ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಗುರುವಾರ 3ನೇ ದಿನ ಪೂರೈಸಿತು.ಈ ಯಾತ್ರೆ ವೇಳೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈಗ ಆ ಪ್ರೋತ್ಸಾಹಧನ ಕೂಡ ಬಿಡುಗಡೆಯಾಗುತ್ತಿಲ್ಲ ಎಂದು ಬಿವೈವಿ ಆರೋಪಿಸಿದರು.
ನಾಡಿನ ರೈತರ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು. ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. 31 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಸಮಾನಾಂತರ ಹಂಚಿಕೆ ವ್ಯವಸ್ಥೆಗೆ ನವಲಿ ಜಲಾಶಯಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 3,655 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ 937 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 295, ರಾಯಚೂರು ಜಿಲ್ಲೆಯಲ್ಲಿ 169, ಬೀದರ್‌ನಲ್ಲಿ 220 ಹಾಗೂ ಕೊಪ್ಪಳದಲ್ಲಿ 80ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಅಂಕಿ-ಅಂಶಗಳು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರೇ, ಕಲಬುರಗಿ ಜಿಲ್ಲೆಯಲ್ಲೇ 295 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು. ಅನ್ನದಾತನ ಸಂಕಷ್ಟಕ್ಕೆ ಸರ್ಕಾರ ಮಿಡಿಯುವ ಕಾಳಜಿ ತೋರಬೇಕು ಎಂದು ಹೇಳಿದರು.
ಬಿಜೆಪಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಕರೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾದಯಾತ್ರೆಯನ್ನು ತಡೆಯುವುದಾದರೆ ತಡೆಯಿರಿ. ನಮ್ಮನ್ನು ಗಲ್ಲಿಗೇರಿಸಿದರೂ ಪರವಾಗಿಲ್ಲ. ಆದರೆ, ಮೊದಲು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಪಾದಯಾತ್ರೆಗೆ ಕಪ್ಪು ಬಾವುಟ ತೋರಿಸುವುದಕ್ಕಿಂತ ಮೊದಲು ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಜನರೇ ನಿಮಗೆ ಉತ್ತರ ನೀಡುತ್ತಾರೆ ಎಂದು ಕಿಡಿ ಕಾರಿದರು.
ಯಾತ್ರೆ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಜಿಟಿಜಿಟಿ ಮಳೆ ಶುರುವಾಯಿತು. ಮಳೆಯಲ್ಲಿಯೇ ಹೆಜ್ಜೆ ಹಾಕಿದ ಬಿಜೆಪಿ ನಾಯಕರು ಕುನ್ನಟಗಿ ಕ್ಯಾಂಪ್ ಗೆ ಆಗಮಿಸಿದರು. ಕ್ಯಾಂಪಿನ ಜಮೀನೊಂದರಲ್ಲಿ ಕುಳಿತು ರೈತ ಮಹಿಳೆಯರು, ರೈತರೊಂದಿಗೆ ಸೇರಿ ನೆಲದ ಮೇಲೆ ಹಾಸಿದ ಚಾಪೆ ಮೇಲೆ ಕುಳಿತು ಮಧ್ಯಾಹ್ನದ ಭೋಜನ ಸವಿದರು. ಪಲ್ಯ, ರೊಟ್ಟಿ, ಚಪಾತಿ, ಅನ್ನಸಾಂಬಾರ್ ತಿಂದು, ರೈತ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಬಳಿಕ, ಯಾತ್ರೆ ಸಿಂಧನೂರು ನಗರಕ್ಕೆ ಆಗಮಿಸಿತು. ನಗರದ ಗಾಂಧಿ ಚೌಕ್‌ನಲ್ಲಿ ಕಾರ್ನರ್ ಸಮಾವೇಶದೊಂದಿಗೆ ಮೂರನೇ ದಿನದ ಯಾತ್ರೆ ಮುಕ್ತಾಯಗೊಂಡಿತು. ಈ ವೇಳೆ, ನೆರೆದಿದ್ದ ಜನಸ್ತೋಮ ಮೊಬೈಲ್ ಟಾರ್ಚ್ ಹಾಕಿ ಯಾತ್ರೆಯನ್ನು ಬೆಂಬಲಿಸಿದುದು ವಿಶೇಷವಾಗಿತ್ತು.
3ನೇ ದಿನ 23 ಕಿ.ಮೀ. ಸಾಗಿದ ಪಾದಯಾತ್ರೆ
ಮಸ್ಕಿ/ಸಿಂಧನೂರು: ಮೂರನೇ ದಿನವಾದ ಗುರುವಾರ ರಾಯಚೂರು ಜಿಲ್ಲೆ ಮಸ್ಕಿ ಬಳಿಯ ಗುಡದೂರಿನಿಂದ ಪಾದಯಾತ್ರೆ ಆರಂಭವಾಯಿತು. ಬಳಿಕ ಜಿಟಿ ಜಿಟಿ ಮಳೆ, ಬಿಸಿಲನ್ನೂ ಲೆಕ್ಕಿಸದೇ 23 ಕಿ.ಮೀ.ದೂರ ಸಾಗಿತು ಹಾಗೂ ಸಂಜೆ ಸಿಂಧನೂರಿನಲ್ಲಿ ಅಂತ್ಯಗೊಂಡಿತು. ಮೂರನೇ ದಿನದ ಅಂತ್ಯಕ್ಕೆ ಯಾತ್ರೆ 3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 55 ಕಿ.ಮೀ. ಸಾಗಿದಂತಾಗಿದೆ.
ಭತ್ತದ ನಾಟಿ ಮಾಡಿ ಬಂಡಿ ಏರಿದ ಬಿವೈವಿ
ಬೆಳಗ್ಗೆ 10 ಗಂಟೆಗೆ ಗುಡದೂರಿನ ಕರಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನೇಗಿಲ ಹೊತ್ತು, ಜೋಡೆತ್ತಿನ ಬಂಡಿ ಏರಿದ ವಿಜಯೇಂದ್ರ, 3ನೇ ದಿನದ ಪಾದಯಾತ್ರೆ ಆರಂಭಿಸಿದರು. ನಂತರ ಯಾತ್ರೆ ಪಾಂಡುರಂಗಾಪುರ ಕ್ಯಾಂಪಿಗೆ ಬರುತ್ತಿದ್ದಂತೆ ಕೃಷಿಕರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡರು. ಆಗ ವಿಜಯೇಂದ್ರ ಹಾಗೂ ಶ್ರೀರಾಮುಲು, ಕೆಸರಿನ ಗದ್ದೆಗಿಳಿದು ಭತ್ತದ ಸಸಿ ಮಡಿಗಳನ್ನು ಕೈಯಲ್ಲಿ ಹಿಡಿದು ನಾಟಿ ಮಾಡಿದರು. ಮಧ್ಯಾಹ್ನ ಕುನ್ನಟಗಿ ಕ್ಯಾಂಪ್‌ನಲ್ಲಿ ರೈತರ ಜತೆ ಹೊಲದಲ್ಲೇ ಭೋಜನ ಸವಿದರು.