ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಹಾಗೂ ಪರಿಹಾರಗಳ ಬಗ್ಗೆ ಚರ್ಚಿಸಲು ಹಾಗೂ ಪಶ್ಚಿಮಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿರುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೆ.21 ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಹಾಗೂ ಪರಿಹಾರಗಳ ಬಗ್ಗೆ ಚರ್ಚಿಸಲು ಹಾಗೂ ಪಶ್ಚಿಮಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿರುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೆ.21 ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಗುರುವಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ‘ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, 150 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಅಭಾವ ಉಂಟಾಗಿದೆ. ಈ ಬಗ್ಗೆ ಕಳೆದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಚರ್ಚೆ ಮಾಡಿಲ್ಲ. ಹೀಗಾಗಿ ಬರ ಸೇರಿ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗುವುದು’ ಎಂದು ಹೇಳಿದರು.
ಬರ ಪ್ರದೇಶ, ಸರ್ಕಾರ ತೆಗೆದುಕೊಂಡಿರುವ ಕ್ರಮ, ಕೇಂದ್ರ ನೀಡಬೇಕಿರುವ ಪರಿಹಾರ, ಇದಕ್ಕೆ ರಾಜ್ಯ ಸರ್ಕಾರ ಹಾಕಬೇಕಾದ ಒತ್ತಡ, ರಾಜ್ಯದಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿ ಮತ್ತಿತರ ವಿಚಾರಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಿ ಕೇಂದ್ರದ ಗಮನ ಸೆಳೆಯುತ್ತೇವೆ ಎಂದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ:
ಕಸ್ತೂರಿ ರಂಗನ್ ವರದಿ ಅನ್ವಯ ಪಶ್ಚಿಮಘಟ್ಟ ಭಾಗದ 10 ಜಿಲ್ಲೆಗಳ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ರಾಜ್ಯಕ್ಕೆ ಆಘಾತ ನೀಡಿದೆ. ಈ ಬಗ್ಗೆಯೂ ಅಧಿವೇಶನದಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನದ ವಿರುದ್ಧ ಒತ್ತಡ ಹೇರುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ಮಾಡಲು ಸರ್ಕಾರ ತೀರ್ಮಾನಿಸಿದೆ.
ಏಕೆ ಅಧಿವೇಶನ?
- ಕಳೆದ ಅಧಿವೇಶನದಲ್ಲಿ ನಾಗೇಂದ್ರ ವಿಚಾರದ ಗದ್ದಲದಿಂದಾಗಿ ಚರ್ಚೆಗೆ ಅವಕಾಶ ಸಿಗಲಿಲ್ಲ
- ಈ ಕಾರಣಕ್ಕೆ ಬರ ಸೇರಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ
- ಬರ, ಸರ್ಕಾರ ತೆಗೆದುಕೊಂಡಿರುವ ಕ್ರಮ, ಕೇಂದ್ರ ನೀಡಬೇಕಿರುವ ಪರಿಹಾರ ಮತ್ತಿತರ ವಿಚಾರ ಚರ್ಚೆ
- ಕಸ್ತೂರಿ ರಂಗನ್ ವರದಿ ಅನ್ವಯ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಕುರಿತು ಚರ್ಚೆಗೆ ತೀರ್ಮಾನ
