ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದಲ್ಲಿ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಟಿಕೆಟ್ ಸಿಗುತ್ತದೆ ಎಂದು ಸಿ.ಎಸ್.ಪುಟ್ಟರಾಜು ಆದಿಚುಂಚನಗಿರಿ, ಅಯೋಧ್ಯೆ, ಧರ್ಮಸ್ಥಳ ಎಲ್ಲಾ ಕಡೆಗೂ ಕಳುಹಿಸಿದರು. ಕೊನೆಗೆ ಟಿಕೆಟ್ ಕೈತಪ್ಪಿಸಿದರು ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.
ಯಾರೋ ಇಬ್ಬರು ಹೇಳಿದ್ರು ಅಂತ ನೆಪವೊಡ್ಡಿ ಪುಟ್ಟರಾಜುಗೆ ಟಿಕೆಟ್ ತಪ್ಪಿಸಿ, ಈಗ ಅವರೇ ಬರ್ತಾರಂತೆ. ಸಿ.ಎಸ್. ಪುಟ್ಟರಾಜು ಏನಾದರೂ ಆ ಪಕ್ಷದಿಂದ ಹೊರಗೆ ಬಂದ್ರೆ ಮುಗಿದೇಹೋಯ್ತು. ಪುಟ್ಟರಾಜು ಬರ್ತಾರೋ ಅಥವಾ ಬಿಡ್ತಾರೋ ನನಗೆ ಗೊತ್ತಿಲ್ಲ. ಆದರೆ, ಅವನು ನನಗಿಂತ ಹೆಚ್ಚು ನೋವು ಅನುಭವಿಸುತ್ತಿದ್ದಾನೆ. ಆದರೆ, ಮಕ್ಕಳಿಗೋಸ್ಕರ, ತಮ್ಮ ಕುಟುಂಬಕ್ಕೋಸ್ಕರ ಬಿಜೆಪಿ ಜೊತೆ ಹೋಗಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್ಡಿಕೆ ಕಾಲೆಳೆದರು.ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮತ್ತು ನಾನು ಒಂದೇ ಪಕ್ಷದಲ್ಲಿದ್ದವರು. ಜೊತೆಯಲ್ಲಿ ಕೆಲಸ ಮಾಡಿದವರು. ನನ್ನ ವಿರುದ್ಧ ಮಾತನಾಡಿದರೆ ಆ ಪಕ್ಷದ ನಾಯಕರು ಹತ್ತಿರಕ್ಕೆ ತೆಗೆದುಕೊಳ್ಳುತ್ತಾರೆಂದು ಮಾತಾಡುತ್ತಿದ್ದಾನೆ. ಪುಟ್ಟರಾಜು ಬಗ್ಗೆ ಪಾಪ ನಾನು ಏನೂ ಮಾತಾಡಲ್ಲ ಎಂದರು.
ಕಳೆದ ವಿಧಾನಸಭಾ ಚುನಾವಣೆಗಿಂತ ಅತ್ಯಂತ ಕಠಿಣ ದೊಡ್ಡಸವಾಲು ಈಗ ನನ್ನ ಮುಂದಿದೆ. ನಿಮಗೆ ಸ್ವಾಭಿಮಾನವಿದ್ದರೆ, ಚಲುವರಾಯಸ್ವಾಮಿ ಗೌರವ ಉಳಿಸಲು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುರನ್ನು ಗೆಲ್ಲಿಸಿಕೊಡಿ ಎಂದು ಗದ್ಗದಿತರಾದರು.
ಮಾಜಿ ಎಂಎಲ್‌ಸಿ ಎನ್.ಅಪ್ಪಾಜಿಗೌಡ ಮಾತನಾಡಿ, ಅಪ್ಪಾಜಿಗೌಡ 2 ಕೋಟಿಗೆ ಸೇಲ್ ಆದ್ರು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಎಲ್ಲ ನಾಯಕರಿಗೆ ನಾನು ಸಹಾಯ ಮಾಡಿದ್ದೇನೆ ಹೊರತು, ನನ್ನ ಜೀವಮಾನದಲ್ಲಿ ಯಾರಿಂದಲೂ ನಯಾಪೈಸೆ ಪಡೆದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಗುಡುಗಿದರು.