ರೈತ ಸಮುದಾಯ ಮತ್ತು ದುಡಿಯುವ ವರ್ಗವನ್ನು ನಿರ್ಲಕ್ಷ್ಯ ಮಾಡಿರುವ ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ ರೈತರನ್ನು ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ರಾಜ್ಯದ ಎಲ್ಲ ೨೮ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ರೈತ ಸಮುದಾಯ ಮತ್ತು ದುಡಿಯುವ ವರ್ಗವನ್ನು ನಿರ್ಲಕ್ಷ್ಯ ಮಾಡಿರುವ ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ ರೈತರನ್ನು ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ರಾಜ್ಯದ ಎಲ್ಲ ೨೮ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದು ೧೦ ವರ್ಷಗಳಾಗಿವೆ. ದೇಶದಲ್ಲಿ ಶೇ.೬೦ರಷ್ಟು ದುಡಿಯುವ ಮತ್ತು ರೈತರಿದ್ದರೂ ಈ ಸಮುದಾಯಕ್ಕೆ ಯಾವುದೇ ರೀತಿಯ ಕಾರ್ಯಕ್ರಮ ನೀಡದೆ ನಿರ್ಲಕ್ಷ್ಯ ಮಾಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸುವುದಾಗಿ ಹೇಳಿ ಅಧಿಕಾರ ಹಿಡಿದ ಎನ್‌ಡಿಎ ಈವರೆವಿಗೂ ಬೆಂಬಲ ಬೆಲೆ ರೂಪಿಸುವಲ್ಲಿ ವಿಫಲವಾಗಿದೆ.
ಈ ಹಿಂದೆ ೩೩೬ ಚುನಾವಣಾ ಪ್ರಚಾರ ಸಭೆಗಳಲ್ಲಿ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದ್ದರಾದರೂ ಅನುಷ್ಠಾನಗೊಳಿಸಲಿಲ್ಲ ಎಂದು ದೂರಿದರು.
೨೦೧೬ರ ಫೆ. ೧೬ರಂದು ಸ್ವಾಮಿನಾಥನ್ ಶಿಫಾರಸ್ಸಿನನ್ವಯ ಬೆಂಬಲ ಬೆಲೆ ಕೊಡಲಾಗದು ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿದ್ದಾರೆ. ೨೦೨೨ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ವಾಗ್ದಾನ ಮಾಡಿದ್ದರು.
ಕೃಷಿ ಸಬ್ಸಿಡಿಯನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗಿದೆ. ಕೃಷಿ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ. ಆದರೆ ಗ್ರಾಹಕರಿಗೆ ಮಾತ್ರ ಹೆಚ್ಚಿನ ಹೊರ ಹೊರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಎನ್‌ಡಿಎ ಸರ್ಕಾರ ಚಳವಳಿಗಳನ್ನು ಹಿಮ್ಮೆಟ್ಟಿಸುವ ಮೂಲಕ ಮಹಾತ್ಮಾ ಗಾಂಧಿ ಅವರ ಆಶಯಗಳಿಗೆ ಅಪಮಾನ ಮಾಡಿದೆ. ೩೮೩ ದಿನಗಳ ಕಾಲ ಪ್ರತಿಭಟನೆ ವಾಪಸ್ಸು ಪಡೆಯಲಾಗಿದೆ.
ಬೆಂಬಲ ಬೆಲೆ ಜಾರಿಗೆ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದರು. ಆದರೆ, ಅವರಿಗೆ ಬೇಕಾದವರನ್ನು ಸಮಿತಿಯೊಳಗೆ ಸೇರಿಸಿದ್ದಾರೆ. ರೈತ ಪ್ರತಿನಿಧಿಗಳನ್ನು ಸಮಿತಿಯಲ್ಲಿ ಸೇರಿಸಿಲ್ಲ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲೂ ಸಹ ರೈತ ಸಂಘದಿಂದ ಅಭಿಯಾನ ಮಾಡುತ್ತೇವೆ. ರೈತ ಸಂಘದೊಂದಿಗೆ ಕೈ ಜೋಡಿಸುವ ಸಿವಿಲ್ ಸಂಘಟನೆಗಳೊಂದಿಗೆ ಅಭಿಯಾನ ಮಾಡಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಜೆಡಿಎಸ್ ಸಹ ರೈತ ವಿರೋಧಿಯಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಭೂಸುಧಾರಣಾ ಕಾಯಿದೆ ತಿದ್ದುಪಡಿ ವೇಳೆ ಪರವಾಗಿ ಮತ ಚಲಾಯಿಸಿದ್ದಾರೆ.
ಗೇಣಿದಾರರ ಪರವಾಗಿ ಭೂಸುಧಾರಣಾ ಕಾಯ್ದೆ ಬಂದಿದೆ. ಅದಕ್ಕೆ ಕೈ ಎತ್ತುವ ಮೂಲಕ ಅದರ ಪರ ಎಂಬುದನ್ನು ಸಾಭೀತುಪಡಿಸಿದ್ದನ್ನು ವಿರೋಧಿಸುವುದಾಗಿ ತಿಳಿಸಿದರು.
ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿರಬಹುದು. ಆದರೆ, ರಾಜ್ಯ ಸರ್ಕಾರ ಅದರ ಪ್ರಣಾಳಿಕೆಯಲ್ಲಿ ರೂಪಿಸಿಲ್ಲ.
ರಾಜ್ಯ ಸರ್ಕಾರವನ್ನು ನಾವು ಒತ್ತಾಯ ಮಾಡಿ ಪತ್ರ ಬರೆದಿದ್ದೇವೆ. ಮೇಕೆದಾಟು ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ರೈತ ಪರ ಯೋಜನೆಗಳ ಕುರಿತಂತೆ ಪ್ರಸ್ತಾಪಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ತಗ್ಗಹಳ್ಳಿ ಪ್ರಸನ್ನ, ಪ್ರಕಾಶ್, ನಾಗರಾಜು, ಚಂದ್ರಶೇಖರ್, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಗೋಷ್ಠಿಯಲ್ಲಿದ್ದರು.