ಇಂದು ಸಂಪುಟ ಸಭೆ : ಜಾತಿಗಣತಿ ಭವಿಷ್ಯ ನಿರ್ಧಾರ?

ಸಾರಾಂಶ

  ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯ ಲಿಖಿತವಾಗಿ ಸಲ್ಲಿಕೆಯಾಗಲಿದ್ದು, ಕೇಂದ್ರ ಸರ್ಕಾರವೂ ಜಾತಿಗಣತಿ ಘೋಷಿಸಿರುವುದರಿಂದ ರಾಜ್ಯದ ಜಾತಿಗಣತಿ ವರದಿ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಯಾಗುವ ನಿರೀಕ್ಷೆಯಿದೆ.

  ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿಗಣತಿ) ವಿಚಾರವಾಗಿ ಶುಕ್ರವಾರ ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯ ಲಿಖಿತವಾಗಿ ಸಲ್ಲಿಕೆಯಾಗಲಿದ್ದು, ಕೇಂದ್ರ ಸರ್ಕಾರವೂ ಜಾತಿಗಣತಿ ಘೋಷಿಸಿರುವುದರಿಂದ ರಾಜ್ಯದ ಜಾತಿಗಣತಿ ವರದಿ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಯಾಗುವ ನಿರೀಕ್ಷೆಯಿದೆ.

ಜಾತಿಗಣತಿ ವರದಿ ಕುರಿತು ಸಚಿವ ಸಂಪುಟ ಸಭೆ ಯಾವ ನಿರ್ಧಾರ ಮಾಡಲಿದೆ ಎಂಬ ಬಗ್ಗೆ ಇದೀಗ ತೀವ್ರ ಕುತೂಹಲ ಮೂಡಿದೆ.

ಏ.17 ರಂದು ನಡೆದ ಜಾತಿಗಣತಿ ವರದಿ ಕುರಿತು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆಕ್ಷೇಪ ಹಾಗೂ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಲು ಸಚಿವರಿಗೆ ಸೂಚಿಸಲಾಗಿತ್ತು. ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯಗಳು ಸಲ್ಲಿಕೆಯಾಗಲಿದ್ದು, ಇದಕ್ಕೆ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ ಉತ್ತರ ನೀಡುವ ನಿರೀಕ್ಷೆಯಿದೆ.

ಮತ್ತೊಂದೆಡೆ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ನಡೆಸುವುದಾಗಿ ಘೋಷಿಸಿದೆ. ಹೀಗಾಗಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿವಾರು ಸಮೀಕ್ಷಾ ವರದಿಯ ಭವಿಷ್ಯ ಏನು? ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಜಾತಿಗಣತಿ ನಿರ್ಧಾರ ಸ್ವಾಗತಿಸುವ ಸಾಧ್ಯತೆಯಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೇವಲ ಜಾತಿಗಣತಿ ಮಾಡಿದರೆ ಸಾಲದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕು. ಜತೆಗೆ ಮೀಸಲಾತಿಗೆ ನಿಗದಿ ಮಾಡಿರುವ ಶೇ.50 ರಷ್ಟು ಮಿತಿ ತೆಗೆಯಬೇಕು ಎಂದು ಒತ್ತಾಯಿಸಿ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸುವ ಸಾಧ್ಯತೆಯಿದೆ.

ಮತ್ತೊಂದು ಮೂಲದ ಪ್ರಕಾರ, ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳ ಜತೆಗೆ ಮೀಸಲಾತಿಗೆ ನಿಗದಿ ಪಡಿಸಿರುವ ಮಿತಿಯನ್ನೂ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಈ ಮೀಸಲಾತಿ ಮಿತಿ ಹೆಚ್ಚಳ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಹೀಗಾಗಿ ಸದ್ಯದಲ್ಲೇ ವರದಿಯನ್ನು ಅಂಗೀಕಾರ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅನುಷ್ಠಾನಗೊಳಿಸಲು ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಇಸಿವೆ.

ತರಾತುರಿ ನಿರ್ಧಾರ ಸಾಧ್ಯತೆ ಕಡಿಮೆ:

ಜಾತಿಗಣತಿ ವರದಿ ಬಗ್ಗೆ ಸಮುದಾಯಗಳಲ್ಲಿ ತೀವ್ರ ಆಕ್ಷೇಪ ಹಾಗೂ ಗೊಂದಲ ಇರುವುದರಿಂದ ಈ ವಿಚಾರದಲ್ಲಿ ತರಾತುರಿ ನಿರ್ಧಾರ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲ. ಲಿಂಗಾಯತ ಹಾಗೂ ಒಕ್ಕಲಿಗ ಸಚಿವರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅವರಿಗೆ ಇರುವ ಗೊಂದಲಗಳನ್ನು ಬಗೆಹರಿಸಿದ ಬಳಿಕವೇ ಸೂಕ್ತ ನಿರ್ಧಾರ ಮಾಡಲಿದೆ.

ಇದಕ್ಕಾಗಿ ವರದಿ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ ವರದಿ ನೀಡಲು ಸಚಿವ ಸಂಪುಟ ಉಪಸಮಿತಿ ರಚನೆ ಮಾಡುವ ಅಥವಾ ರಾಜಕೀಯೇತರವಾಗಿ ಅಧ್ಯಯನ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾದರೆ ತಜ್ಞರ ಸಮಿತಿ ರಚನೆ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಪಡೆಯಬೇಕೆಂಬ ಒತ್ತಾಯ ಇರುವ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಿರೀಕ್ಷಿಸಲಾಗಿದೆ.

ಪ್ರಸ್ತುತ ದೇಶಾದ್ಯಂತ ಪಹಲ್ಗಾಂ ದಾಳಿ ಹಾಗೂ ಆಪರೇಷನ್‌ ಸಿಂದೂರ್‌ ಬಗ್ಗೆ ಚರ್ಚೆ ಜೋರಾಗಿದೆ. ಹೀಗಾಗಿ ಇದೇ ನೆಪ ನೀಡಿ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಮಹತ್ವದ ತೀರ್ಮಾನ ಮಾಡದೆ ಮುಂದೂಡಬಹುದು ಎಂದೂ ಹೇಳಲಾಗಿದೆ.

ಗ್ರೇಟರ್‌ ಬೆಂಗಳೂರು ಪ್ರದೇಶ ಘೋಷಣೆ:

ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಎಂದು ಗುರುತಿಸಿ ಘೋಷಿಸಲು ಸೂಕ್ತ ಕಾನೂನು ತಿದ್ದುಪಡಿ ಮಾಡಲು ತೀರ್ಮಾನಿಸುವ ಸಾಧ್ಯತೆಯಿದೆ. ಜತೆಗೆ ಆಶಾ ಕಾರ್ಯಕರ್ತರಿಗೆ 1,000 ರು. ಗ್ರೂಪ್‌ ಇನ್ಸೆಂಟಿವ್‌ ನೀಡುವ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆಯಿದೆ.

ಸಭೆಯಲ್ಲಿ ಏನು ಆಗಬಹುದು?

ಕೇಂದ್ರವೂ ಜಾತಿ ಸಮೀಕ್ಷೆ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಜಾತಿಗಣತಿ ಭವಿಷ್ಯ ಕುರಿತು ಸಭೆಯಲ್ಲಿ ಚರ್ಚೆ

ಕೇಂದ್ರದ ಕ್ರಮ ಸ್ವಾಗತಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಲು ಮನವಿ ಮಾಡುವ ನಿರೀಕ್ಷೆ

ಜತೆಗೆ ಶೇ.50ರಷ್ಟು ಮೀಸಲಾತಿ ಮಿತಿ ತೆಗೆಯುವಂತೆ ಒತ್ತಾಯಿಸುವ ನಿರ್ಣಯ ಕೇಂದ್ರಕ್ಕೆ ಕಳುಹಿಸಲು ನಿರ್ಧಾರ?

ಅಥವಾ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಅದರ ಶಿಫಾರಸು ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆ

Share this article