ಸಾರಾಂಶ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಶುಕ್ರವಾರ ಜಿಬಿಎ ಕೇಂದ್ರ ಕಚೇರಿ ಆವರಣದ ಕೆಂಪೇಗೌಡ ಪೌರಸಭಾಂಗಣದಲ್ಲಿ ನಡೆಯಲಿದ್ದು, ಜಿಬಿಎ ಸಂಬಂಧ ಮಾಸ್ಟರ್ ಪ್ಲಾನ್ ರಚಿಸುವುದು ಸೇರಿದಂತೆ 11 ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಾಧಿಕಾರ ಉಪಾಧ್ಯಕ್ಷ, ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ಶಾಸಕರು, ವಿಧಾನಪರಿಷತ್ತು ಸದಸ್ಯರು, ಐದು ನಗರ ಪಾಲಿಕೆ ಆಯುಕ್ತರು, ಬೆಸ್ಕಾಂ, ಜಲಮಂಡಳಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಬಿಎ ಮುಖ್ಯ ಆಯುಕ್ತರು ಸೇರಿದಂತೆ ಪ್ರಾಧಿಕಾರದ 75 ಮಂದಿ ಸದಸ್ಯರು ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕುರಿತು ಸಂಕ್ಷಿಪ್ತ ವಿವರಣೆ ನೀಡಲಿದ್ದಾರೆ, ಜತೆಗೆ, ಬಿಸ್ಮೈಲ್ ಸಂಸ್ಥೆ ಹಾಗೂ ಜಿಬಿಎ ವ್ಯಾಪ್ತಿಯಲ್ಲಿ ಕೈಗೊಂಡಿರುವ ಪ್ರಮುಖ ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಲಿದ್ದಾರೆ.
11 ವಿಷಯ ಕುರಿತು ಚರ್ಚೆ
ಐದು ನಗರ ಪಾಲಿಕೆ ರಚನೆಯಾಗಿದ್ದು, ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಾಸ್ಟರ್ ಪ್ಲಾನ್ ರಚನೆ ತಯಾರಿ ಕುರಿತು ಚರ್ಚೆ ನಡೆಸಲಾಗುತ್ತದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ1961ರ ಅಡಿ ಜಿಬಿಎ ಯೋಜನಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವ ಕುರಿತು ಕಟ್ಟಡ ಉಪನಿಯಮಗಳು ಮತ್ತು ಯೋಜನಾ ಮಾನದಂಡಗಳ ಅಂಗೀಕಾರ ಪಡೆಯಲಾಗುವುದು.
ಆಯಾ ನಗರ ಪಾಲಿಕೆಯಲ್ಲಿ ಟಿಡಿಆರ್ ನಿರ್ವಹಣೆ ಮಾಡುವ ಬಗ್ಗೆ, ಐದು ನಗರ ಪಾಲಿಕೆಯ ಬಜೆಟ್ ರಚಿಸಿ, ಮಂಡಿಸುವ ಕುರಿತು, ಅರೆ ಸರ್ಕಾರಿ ಮತ್ತು ಜಿಬಿಎಗೆ ಸಂಬಂಧಿಸಿದಂತೆ ಇತರೆ ಸಂಸ್ಥೆಗಳ ಪುನರ್ ರಚನೆ ಕುರಿತು, ಜಿಬಿಎ ಕಾರ್ಯಕಾರಿ ಸಮಿತಿ ಮತ್ತು ಉಪ ಸಮಿತಿ ರಚನೆ ಬಗ್ಗೆ ಚರ್ಚಿಸಲಾಗುವುದು. ಆದಾಯ ಸಂಬಂಧಿತ ಮಾದರಿ ಉಪ ನಿಯಮ, ನಿಯಮ ಮತ್ತು ನೀತಿಗಳ ವಿಧಾನ ದಾಖಲಾತಿ ಬಗ್ಗೆ ಚರ್ಚೆ ನಡೆಯಲಿದೆ.
ಐದು ನಗರ ಪಾಲಿಕೆಯ ಕಟ್ಟಡಗಳ ಸ್ಥಳದ ಅನುಮೋದನೆ ಪಡೆಯುವುದು, ಜಿಬಿಎ ಬಜೆಟ್, ಅಧಿಕಾರ ಹಂಚಿಕೆ ಪ್ರಸ್ತಾವನೆಗೆ ಅನುಮೋದನೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮುಖ್ಯ ರಸ್ತೆ, ಉಪ ಮುಖ್ಯ ರಸ್ತೆ ಅಭಿವೃದ್ಧಿ ಮತ್ತು ವಾರ್ಡ್ ಮಟ್ಟದ ಕಾಮಗಾರಿಯ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಚರ್ಚಿಸಲಾಗುತ್ತದೆ.
ಅನುದಾನಕ್ಕೂ ಬೇಡಿಕೆ ಮಂಡನೆ:
ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಯ ವಿವಿಧ ಕಾಮಗಾರಿಗೆ ಹೆಚ್ಚಿನ ಅನುದಾನಕ್ಕೂ ಇದೇ ವೇಳೆ ಮನವಿ ಸಾಧ್ಯತೆ ಇದೆ. ಜತೆಗೆ, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ವಿವಿಧ ವಿಷಯದ ಕುರಿತು ಪ್ರಸ್ತಾಪಿಸುವ ಸಾಧ್ಯತೆ ಇದೆ. ಜಿಬಿಎ ಹಾಗೂ ಐದು ನಗರ ಪಾಲಿಕೆಯ ವಾರ್ಡ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಂಜಿನಿಯರ್ ಸೇರಿದಂತೆ ವಿವಿಧ ಅಧಿಕಾರಿ ಸಿಬ್ಬಂದಿ ನೇಮಕಾತಿ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.