SIR ವೇಳೆ ಕೈಬಿಟ್ಟ ಮತದಾರರ ಹೆಸರು ಸೇರ್ಪಡೆಗೆ ಅಭಿಯಾನ

Published : Oct 03, 2026, 05:37 AM IST
election commission

ಸಾರಾಂಶ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ 13 ಕೋಟಿ ಮತದಾರರನ್ನು ಕೈಬಿಟ್ಟ ಕಾರಣ ವಿಪಕ್ಷಗಳ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ, ಹೆಸರು ಕೈಬಿಟ್ಟು ಹೋಗಿರುವ ಅರ್ಹ ಮತದಾರರು ಹಾಗೂ ಹೊಸ ಮತದಾರರಿಗಾಗಿ ವಿಶೇಷ ಅಭಿಯಾನ ನಡೆಸುವಂತೆ ಚುನಾವಣಾ ಆಯೋಗ ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.

ನವದೆಹಲಿ : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವೇಳೆ 13 ಕೋಟಿ ಮತದಾರರನ್ನು ಕೈಬಿಟ್ಟ ಕಾರಣ ವಿಪಕ್ಷಗಳ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ, ಹೆಸರು ಕೈಬಿಟ್ಟು ಹೋಗಿರುವ ಅರ್ಹ ಮತದಾರರು ಹಾಗೂ ಹೊಸ ಮತದಾರರಿಗಾಗಿ ವಿಶೇಷ ಅಭಿಯಾನ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.

ಸದ್ಯ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ರಾಜ್ಯಗಳಲ್ಲಿ ಈ ಅಭಿಯಾನ ನಡೆಯಲಿದೆ. ಅರ್ಥಾತ್‌, ಸದ್ಯದ ಮಟ್ಟಿಗೆ ಸುಮಾರು 20 ರಾಜ್ಯಗಳಲ್ಲಿ ಇದು ಆರಂಭವಾಗಲಿದೆ. ಉಳಿದ ರಾಜ್ಯಗಳಲ್ಲಿ ಎಸ್‌ಐಆರ್‌ ಪೂರ್ಣಗೊಂಡ ಬಳಿಕ ಶುರುವಾಗಲಿದೆ.

ಎಸ್‌ಐಆರ್‌ ಪ್ರಕ್ರಿಯೆ ವೇಳೆ ಹೆಸರು ಕೈಬಿಟ್ಟುಹೋಗಿರುವ ಮತದಾರರಿಗೆ ತಮ್ಮ ಹೆಸರು ಮರುಸೇರ್ಪಡೆಗೆ ಹಾಗೂ ಮೊದಲ ಬಾರಿಯ ಯುವ ಮತದಾರರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ಮತ್ತೆ ಅವಕಾಶ ಮಾಡಿಕೊಡುವುದೇ ಈ ಆಂದೋಲನದ ಉದ್ದೇಶ ಆಗಿದೆ.

ನಿರಂತರ ಪ್ರಕ್ರಿಯೆ- ಆಯೋಗ:

‘ಮತದಾರರ ನೋಂದಣಿ ಎಂಬುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಎಸ್‌ಐಆರ್‌ ಪ್ರಕ್ರಿಯೆ ವೇಳೆ ಹೆಸರು ಕೈಬಿಟ್ಟ ಕಾರಣಕ್ಕಾಗಿ ಯಾವುದೇ ಅರ್ಹ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಈ ಹಿಂದೆ ಮತದಾರರ ಪಟ್ಟಿಯಲ್ಲಿದ್ದ ಮತದಾರರ ಹೆಸರು ಈ ಬಾರಿ ಕೈಬಿಟ್ಟು ಹೋಗಿರುವ ಕುರಿತು ಬಿಎಲ್‌ಒಗಳು ಮರು ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಲಾಗಿದೆ.

‘ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟುಹೋಗಿರುವ ವ್ಯಕ್ತಿಗಳ ಮನೆಗೆ ತೆರಳಿ ಬಿಎಲ್‌ಒಗಳು ಪರಿಶೀಲನೆ ನಡೆಸಬೇಕು. ಪ್ರತಿ ಬಿಎಲ್‌ಒಗಳು ವಾರಕ್ಕೆ 20ರಿಂದ 25 ಮನೆಗಳನ್ನು ಪರಿಶೀಲಿಸುವ ಗುರಿ ನೀಡಲಾಗಿದೆ. ಈ ಮೂಲಕ ತಿಂಗಳೊಳಗೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದು ಆಯೋಗ ಹೇಳಿದೆ.

‘ಬಿಎಲ್‌ಒಗಳು ಫಾರ್ಮ್‌-6 ಅರ್ಜಿಗಳನ್ನು ಹೊಸ ಮತದಾರರು ಹಾಗೂ ಮತಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರಿಂದ ಸ್ಥಳದಲ್ಲೇ ಸಂಗ್ರಹಿಸಬೇಕು. ಆ ಬಳಿಕ ಪಟ್ಟಿಯನ್ನು ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ನೇರವಾಗಿ ಬೂತ್‌ ಹಂತದ ರಾಜಕೀಯ ಪಕ್ಷಗಳ ಏಜೆಂಟರ ಜತೆ ಹಂಚಿಕೊಳ್ಳಲಾಗುತ್ತದೆ’ ಎಂದು ಅದು ತಿಳಿಸಿದೆ.

ಈ ಪ್ರಕ್ರಿಯೆ ಅಕ್ರಮ- ಖುರೇಷಿ:

ಈ ನಡುವೆ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಈ ಮರು ನೋಂದಣಿ ಅಭಿಯಾನ ವಿರೋಧಿಸಿದ್ದು, ‘ಫಾರ್ಮ್ 6 ಅನ್ನು ಹೆಸರು ಡಿಲೀಟ್‌ ಆದ ಮತದಾರರು ಭರ್ತಿ ಮಾಡಲು ಸಾಧ್ಯವಿಲ್ಲ. ಇದು ಹೊಸ ಮತದಾರರಿಗೆ ಮಾತ್ರ. ಹೀಗಾಗಿ ಇದನ್ನು ಡಿಲೀಟ್‌ ಆದ ಮತದಾರರಿಂದ ಭರ್ತಿ ಮಾಡಿಸಿದರೆ ಕ್ರಿಮಿನಲ್‌ ಅಪರಾಧ ಆಗುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮತದಾರರ ಹಕ್ಕಿಗೆ ಸಂದ ವಿಜಯವಿದು

ಅರ್ಹ ಮತದಾರರ ಹೆಸರನ್ನು ಮತ್ತೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿರುವುದು ದೇಶದ ಮತದಾರರ ಹಕ್ಕಿಗೆ ಸಂದ ಜಯ. ಅರ್ಹ ಮತದಾರರ ಹಕ್ಕು ಕಸಿಯುವ ಷಡ್ಯಂತ್ರದ ವಿರುದ್ಧದ ಜಯ.

- ಡಿ.ಕೆ. ಶಿವಕುಮಾರ್‌, ಸಿಎಂ

ಜ್ಞಾನೇಶ್‌ ಪದತ್ಯಾಗಕ್ಕೆ ಆಗ್ರಹಿಸಿ ಮುಂಬೈನಲ್ಲಿ ಜಿರಳೆ ಪಾರ್ಟಿ ಚಳವಳಿ

ಮುಂಬೈ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಸಾವಿರಾರು ಯುವಕ- ಯುವತಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದೆಹಲಿಯಲ್ಲಿ 700 ಮಂದಿ ಖಾಕಿ ವಶ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳು ಬೃಹತ್‌ ಪ್ರತಿಭಟನೆ ನಡೆಸಿದವು. ಈ ವೇಳೆ 700ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಎಸ್ಐಆರ್‌ ಅಕ್ರಮ ತನಿಖೆಗೆ ಎಸ್‌ಐಟಿ ? - ಮುಂದಿನ ಸಂಪುಟ ಸಭೇಲಿ ಚರ್ಚೆ ಸಂಭವ
‘50 ಲಕ್ಷ ಅಹಿಂದ ಮತ ಡಿಲೀಟ್‌ಗೆ ದೋಸ್ತಿ ಷಡ್ಯಂತ್ರ’