;Resize=(412,232))
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪೊಲೀಸ್ ಕಾನ್‌ಸ್ಟೇಬಲ್‌ಗಳ ದೈಹಿಕ ಪರೀಕ್ಷೆ ವೇಳೆ ಅಭ್ಯರ್ಥಿಗಳ ಕಾಲಿಗೆ ‘ಚಿಪ್’ ಅಳವಡಿಸಿ ಓಟದ ಸಮಯ ದಾಖಲು ಸೇರಿ ಹೊಸದಾಗಿ ಪ್ರಮುಖ ನಾಲ್ಕು ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಪೊಲೀಸ್ ನೇಮಕಾತಿ ವಿಭಾಗ ನಿರ್ಧರಿಸಿದೆ.
ಕಾನ್‌ಸ್ಟೇಬಲ್‌ಗಳ ದೈಹಿಕ ಪರೀಕ್ಷೆ ಆಯೋಜನೆಗೆ ವಲಯವಾರು ಐಜಿಪಿ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚನೆ, ಕರ್ನಾಟಕ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಮೈದಾನದಲ್ಲಿ ದೈಹಿಕ ಪರೀಕ್ಷೆ ಹಾಗೂ ಪರೀಕ್ಷೆ ನಡೆದ 24 ತಾಸಿನಲ್ಲೇ ಜಿಲ್ಲಾವಾರು ಫಲಿತಾಂಶ ಪ್ರಕಟಣೆಗೆ ನೇಮಕಾತಿ ವಿಭಾಗದ ಡಿಜಿಪಿ ಉಮೇಶ್ ಕುಮಾರ್ ಸೂಚಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ನೇಮಕಾತಿ ಕರ್ಮಕಾಂಡ ಹಾಗೂ 2021ರಲ್ಲಿ ನಡೆದ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ ಸೇರಿ ಸರ್ಕಾರಿ ಹುದ್ದೆ ನೇಮಕಾತಿ ಅಕ್ರಮಗಳು ಬಯಲಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ದೇಶವ್ಯಾಪಿ ಸರ್ಕಾರಿ ನೇಮಕಾತಿಯಲ್ಲಿ ಪಾರದರ್ಶಕತೆ ಹಾಗೂ ಮುಕ್ತ ವ್ಯವಸ್ಥೆ ಅನುಷ್ಠಾನಗೊಳಿಸುವಂತೆ ಜೆನ್-ಝೀ ಯುವ ಸಮೂಹ ಪ್ರಬಲ ದನಿ ಎತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ, ಪಿಎಸ್ಐ ನೇಮಕಾತಿ ಹಗರಣದ ಸಿಐಡಿ ತನಿಖೆಯ ಸಾರಥ್ಯವನ್ನೂ ವಹಿಸಿದ್ದ ಡಿಜಿಪಿ ಉಮೇಶ್ ಕುಮಾರ್ ಅವರು, ಪೊಲೀಸ್ ನೇಮಕಾತಿಯನ್ನು ದೋಷಮುಕ್ತವಾಗಿ ನಡೆಸಲು ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದ್ದಾರೆ.
ಐದು ವರ್ಷಗಳ ಬಳಿಕ 3,800 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಲಿಖಿತ ಪರೀಕ್ಷೆಯನ್ನು ಯಾವುದೇ ಅಕ್ರಮಗಳ ಆರೋಪ ಇಲ್ಲದೆ ಸುಸೂತ್ರವಾಗಿ ಮುಗಿಸಿರುವ ನೇಮಕಾತಿ ವಿಭಾಗ, ಈಗ ದೈಹಿಕ ಪರೀಕ್ಷೆಯನ್ನು ಕೂಡ ಪಾರದರ್ಶಕವಾಗಿ ನಡೆಸಲು ಯೋಜಿಸಿದೆ. ಇದಕ್ಕೆ ದೈಹಿಕ ಪರೀಕ್ಷೆಯಲ್ಲಿ ಹೊಸದಾಗಿ ಮಾರ್ಗಸೂಚಿಯನ್ನು ಅಧಿಕಾರಿಗಳಿಗೆ ನೇಮಕಾತಿ ವಿಭಾಗದ ಡಿಜಿಪಿ ಉಮೇಶ್ ಕುಮಾರ್ ಹೊರಡಿಸಿದ್ದಾರೆ.
1.ಎಸ್ಪಿ ಬದಲು ಐಜಿಪಿ ಅವರಿಗೆ ಹೊಣೆ
ಇದುವರೆಗೆ ಕಾನ್‌ಸ್ಟೇಬಲ್‌ಗಳ ನೇಮಕಾತಿ ದೈಹಿಕ ಪರೀಕ್ಷೆಯ ಹೊಣೆಗಾರಿಕೆಯನ್ನು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ವಹಿಸುತ್ತಿದ್ದರು. ಆದರೆ ಈಗ ಎಸ್ಪಿಗಳ ಬದಲಿಗೆ ವಲಯ ಐಜಿಪಿ ಅಥವಾ ಡಿಐಜಿ ಅವರಿಗೆ ವಹಿಸಲಾಗಿದೆ. ಯಾವುದೇ ಲೋಪವಾಗದಂತೆ ಐಜಿಪಿ ಮಟ್ಟದಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ.
2.ಅಭ್ಯರ್ಥಿಗಳ ಕಾಲಿಗೆ ಚಿಪ್ ಅಳವಡಿಕೆ
ಪೊಲೀಸ್ ದೈಹಿಕ ಪರೀಕ್ಷೆಯ ಓಟದ ಸ್ಪರ್ಧೆಯಲ್ಲಿ ಅಭ್ಯರ್ಥಿಗಳು ಓಡುವ ಸಮಯವನ್ನು ಸ್ಟಾಪ್ ವಾಚ್ ಬಳಸಿ ದಾಖಲು ಮಾಡಲಾಗುತ್ತಿತ್ತು. ಈಗ ಮ್ಯಾರಥಾನ್ ಮಾದರಿಯಂತೆ ಅಭ್ಯರ್ಥಿಗಳ ಕಾಲಿಗೆ ಚಿಪ್ ಅಳವಡಿಸಿ ತಾಂತ್ರಿಕತೆ ಮೂಲಕ ಸಮಯ ಅಳತೆ ಮಾಡಲಾಗುತ್ತದೆ. ಕಾನ್‌ಸ್ಟೇಬಲ್‌ಗಳಿಗೆ 1.6 ಕಿ.ಮೀ. ಕ್ರಮಿಸಲು 6 ನಿಮಿಷ 30 ಸೆಕೆಂಡ್ ನಿಗದಿಯಾಗಿರುತ್ತದೆ. ಹೀಗಾಗಿ ಚಿಪ್ ಮೂಲಕ ಪ್ರತಿ ಅಭ್ಯರ್ಥಿಯ ಸಮಯ ದಾಖಲಾಗುತ್ತದೆ. ಓಟದ ಮುಗಿದ ಕೆಲವೇ ಸೆಕೆಂಡ್‌ಗಳಲ್ಲಿ ಆ ಅಭ್ಯರ್ಥಿ ಮೊಬೈಲ್‌ಗೆ ಮೆಸೇಜ್ ಸಹ ರವಾನೆಯಾಗುತ್ತದೆ. ಇನ್ನು ಪರೀಕ್ಷೆಗೆ ಹಾಜರಾಗುವ ಮುನ್ನ ಮುಖಚಹರೆ ದಾಖಲು (ಫೇಶಿಯಲ್ ಸ್ಕ್ಯಾನಿಂಗ್) ಸಹ ನಡೆಯಲಿದೆ.
3.ಕೆಎಸ್‌ಆರ್‌ಪಿ ಮೈದಾನಗಳಲ್ಲಿ ಸ್ಪರ್ಧೆ
ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಕೆಎಸ್‌ಆರ್‌ಪಿ ಮೈದಾನಕ್ಕೆ ಪರೀಕ್ಷೆ ಸ್ಥಳಾಂತರಿಸಲಾಗಿದೆ. ಆ ಪರೀಕ್ಷೆಯನ್ನು ಆಯಾ ಕೆಎಸ್‌ಆರ್‌ಪಿ ಘಟಕದ ಅಧಿಕಾರಿಗಳನ್ನು ಬಳಸಿಕೊಂಡು ನಿರ್ವಹಿಸುವಂತೆ ಐಜಿಪಿಗಳಿಗೆ ಡಿಜಿಪಿ ಸೂಚಿಸಿದ್ದಾರೆ.
ದೈಹಿಕ ಪರೀಕ್ಷೆ ನಡೆದ 24 ತಾಸಿನಲ್ಲೇ ಆಯಾ ಜಿಲ್ಲಾವಾರು ಫಲಿತಾಂಶ ಪ್ರಕಟಣೆಗೆ ಸಹ ನೇಮಕಾತಿ ವಿಭಾಗದ ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಕಾನ್‌ಸ್ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮಾತ್ರವಲ್ಲ ಸಣ್ಣ ಲೋಪ ಸಹ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಪ್ರಥಮ ಬಾರಿಗೆ ದೈಹಿಕ ಪರೀಕ್ಷೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಆದಾಗ್ಯೂ ನೇಮಕಾತಿಯಲ್ಲಿ ಅಕ್ರಮದ ಆರೋಪ ಬಂದರೆ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ಉಮೇಶ್ ಕುಮಾರ್, ಡಿಜಿಪಿ, ರಾಜ್ಯ ಪೊಲೀಸ್ ನೇಮಕಾತಿ ವಿಭಾಗ