;Resize=(412,232))
ನವದೆಹಲಿ: 71ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರದ ಮುಖೇನ ಶುಭ ಕೋರಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ ಗೀತೆಯಲ್ಲಿ ಉಲ್ಲೇಖಿಸಿ, ಸಮಸ್ತ ಕನ್ನಡಿಗರಿಗೆ ಪ್ರಗತಿ, ಸಮೃದ್ಧಿ ಹಾಗೂ ಹೊಸ ಅವಕಾಶಗಳು ದೊರೆಯುವಂತಾಗಲಿ ಎಂದು ಹಾರೈಸಿದ್ದಾರೆ. ಜತೆಗೆ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬೆಂಬಲ ಇರುತ್ತದೆ ಎಂದು ತಿಳಿಸಿದ್ದಾರೆ.
ಪತ್ರದುದ್ದಕ್ಕೂ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ, ಭವ್ಯ ಇತಿಹಾಸ, ಅಧ್ಯಾತ್ಮ, ಬೌದ್ಧಿಕ ಪರಂಪರೆ, ವಚನಕಾರರ ವೈಚಾರಿಕತೆ, ಸಂತ ಮಹಾತ್ಮರ ಮಾರ್ಗದರ್ಶನ, ಸಾಹಿತಿಗಳ ಸಾಹಿತ್ಯಿಕ ಕೊಡುಗೆಯನ್ನು ಮೋದಿ ಮೆಚ್ಚಿದ್ದಾರೆ. ಇದೇ ವೇಳೆ, ವರನಟ ಡಾ.ರಾಜ್‌ಕುಮಾರ್, ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ಕನ್ನಡ ನಾಡಿನ ದಿಗ್ಗಜರು ಹಾಗೂ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.
‘ಪ್ರಧಾನಮಂತ್ರಿ ಆವಾಸ್ ಯೋಜನೆ, ಅಮೃತ್ 2.0, ಗ್ರಾಮ ಸಡಕ್ ಯೋಜನೆ, ಜಲ ಜೀವನ್ ಮಿಷನ್, ಕೌಶಲ ಭಾರತ ಮತ್ತು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಪರಿವರ್ತನೆಯನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತಿದೆ. ರಾಜ್ಯದ ಗ್ರಾಮೀಣ ಭಾಗಗಳ ಅಭಿವೃದ್ಧಿಗೂ ಬದ್ಧರಾಗಿದ್ದೇವೆ’ ಎಂಬ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ.
‘ಕರ್ನಾಟಕದ ಜನರು ಉದ್ಯಮಶೀಲತೆ, ನಾವೀನ್ಯತೆ, ಬೌದ್ಧಿಕ ಶ್ರೇಷ್ಠತೆ ಮತ್ತು ಪ್ರಗತಿಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಐಟಿ-ಬಿಟಿ, ಅಂತರಿಕ್ಷ ತಂತ್ರಜ್ಞಾನ, ಸುಧಾರಿತ ಉತ್ಪಾದನೆ, ಸಂಶೋಧನೆ ಅಥವಾ ನವೋದ್ಯಮದಂತಹ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ’ ಎಂದು ಮೋದಿ ಬಣ್ಣಿಸಿದ್ದಾರೆ. ಜತೆಗೆ, ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಸಂಪರ್ಕ ಯೋಜನೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ರಾಜ್ಯ ಭೇಟಿ ಸ್ಮರಣೆ:
ಪತ್ರದಲ್ಲಿ ಮೋದಿ, 2022ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟಿಸಿದ ಕ್ಷಣವನ್ನು ಸ್ಮರಿಸಿದ್ದಾರೆ. ಅದೇ ರೀತಿ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಹಾಗೂ ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಸಂಪರ್ಕಿಸುವ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. ಜತೆಗೆ 2023ರಲ್ಲಿ ಉದ್ಘಾಟನೆಯಾದ ತುಮಕೂರಿನ ಎಚ್‌ಎಎಲ್‌ನ ಹೆಲಿಕಾಪ್ಟರ್ ಕಾರ್ಖಾನೆಗೆ 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದನ್ನೂ ನೆನೆದಿದ್ದಾರೆ.
ಪರಿಸರ ಸಂರಕ್ಷಣೆಗೆ ಕರೆ:
ಪ್ರಸ್ತುತ ಉತ್ತರ ಕರ್ನಾಟಕ ಎದುರಿಸುತ್ತಿರುವ ತೀವ್ರ ಬರಗಾಲದ ಸಮಸ್ಯೆಯನ್ನು ಉಲ್ಲೇಖಿಸಿದ ಮೋದಿ, ‘ಕರ್ನಾಟಕಕ್ಕೆ ಆಶೀರ್ವಾದದಂತೆ ಲಭಿಸಿರುವ ನದಿಗಳು, ಕೆರೆಗಳು ಮತ್ತು ಸಾಂಪ್ರದಾಯಿಕ ಜಲಮೂಲಗಳಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು’ ಎಂದು ಕರೆ ನೀಡಿದ್ದಾರೆ. ಇದೇ ವೇಳೆ, ನಗರಗಳ ಸ್ವಚ್ಛತೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸ್ವಚ್ಛ ಸಾರ್ವಜನಿಕ ಸ್ಥಳಗಳು ಮತ್ತು ಸುಸ್ಥಿರ ನಗರಾಭಿವೃದ್ಧಿಗೆ ಆದ್ಯತೆ ನೀಡುವಂತೆ ಆಗ್ರಹಿಸಿದರು.
ವಿಕಸಿತ ಭಾರತದತ್ತ:
1924ರಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿಯವರು ವಹಿಸಿದ್ದನ್ನು ಸ್ಮರಿಸಿದ ಮೋದಿ, ‘ಇಂದು 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಗುರಿಯತ್ತ ನಾವು ಸಾಗುತ್ತಿರುವಾಗ ಅದೇ ರಾಷ್ಟ್ರೀಯ ಸಂಕಲ್ಪ, ಏಕತೆ ಮತ್ತು ಸಾಮೂಹಿಕ ಪ್ರಯತ್ನದ ಮನೋಭಾವವನ್ನು ಮತ್ತೊಮ್ಮೆ ಜಾಗೃತಗೊಳಿಸಬೇಕಾಗಿದೆ’ ಎಂದು ಹೇಳಿದರು.
‘ಸ್ವರಾಜ್ಯದ ಆದರ್ಶವು ಒಂದು ಇಡೀ ಪೀಳಿಗೆಯನ್ನು ಸ್ವಾತಂತ್ರ್ಯಕ್ಕಾಗಿ ಶ್ರಮಿಸಲು ಪ್ರೇರೇಪಿಸಿದಂತೆಯೇ, ವಿಕಸಿತ ಭಾರತದ ಸಂಕಲ್ಪವು ಸಮೃದ್ಧ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರತಿಯೊಬ್ಬ ನಾಗರಿಕನಿಗೂ ಸ್ಫೂರ್ತಿಯಾಗಬೇಕು’ ಎಂದು ಪ್ರಧಾನಿ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಪ್ರಧಾನಿ ಮೋದಿ ನೆನಪಿನಾಳ
- ಕರ್ನಾಟಕದ ಇತಿಹಾಸ, ಅಧ್ಯಾತ್ಮ, ವಚನಕಾರರ ವೈಚಾರಿಕತೆ ಪ್ರಸ್ತಾಪ
- ವರನಟ ಡಾ.ರಾಜ್, ಸರ್.ಎಂ.ವಿಶ್ವೇಶ್ವರಯ್ಯ ನೀಡಿದ ಕೊಡುಗೆ ಸ್ಮರಣೆ
- ರಾಜ್ಯಕ್ಕೆ ಕೇಂದ್ರದ ನೆರವಿನ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ
- ರಾಜ್ಯದ ಬರಗಾಲ ಪರಿಸ್ಥಿತಿ ಪ್ರಸ್ತಾಪಿಸಿ ನದಿ, ಜಲಮೂಲ ಸಂರಕ್ಷಣೆಗೆ ಕರೆ
- ಬೆಂಗಳೂರು, ಶಿವಮೊಗ್ಗ ಏರ್ಪೋರ್ಟ್, ವಂದೇ ಭಾರತ್ ಚಾಲನೆ ಮೆಲುಕು
- ನಗರ ಸ್ವಚ್ಛತೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸುಸ್ಥಿರ ನಗರಾಭಿವೃದ್ಧಿಗೆ ಕರೆ
- ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷತೆ ನೆನೆದ ಪ್ರಧಾನಿ