ನವೆಂಬರ್‌ 15, 16ರೊಳಗೆ ಸಿಎಂ ಬದಲಾವಣೆ - ಆ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋಟಿಸುತ್ತೆ : ಅಶೋಕ್‌

ಸಾರಾಂಶ

ಬರುವ ನವೆಂಬರ್ 15-16ರೊಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ನಿಶ್ಚಿತವಾಗಿದ್ದು, ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸಿಡಿಯಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

 ಸಕಲೇಶಪುರ : ಬರುವ ನವೆಂಬರ್ 15-16ರೊಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ನಿಶ್ಚಿತವಾಗಿದ್ದು, ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸಿಡಿಯಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ನನಗೆ ಖಚಿತ ಮಾಹಿತಿ ಇದೆ. ಆ ಬಳಿಕ ಕಾಂಗ್ರೆಸ್‌ನಲ್ಲಿ ಉಂಟಾಗುವ ಜ್ವಾಲಾಮುಖಿ ನಂದಿಸಲು ಈಗಲೇ ಅಗ್ನಿಶಾಮಕ ವಾಹನಗಳನ್ನು ಬುಕ್‌ ಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಈಗಲೇ ಸಚಿವರು ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣವಾಗಿ ಇಬ್ಭಾಗವಾಗಿದ್ದಾರೆ. ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದರೆ ಸಿದ್ದರಾಮಯ್ಯ ಅವರ ಬಣ ಇನ್ನೊಂದು ದಾರಿ ಹಿಡಿಯುತ್ತಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದರಿದ್ರ ಸರ್ಕಾರ. ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಅಭಿವೃದ್ಧಿ ಅಭಾವ ಎದ್ದು ಕಾಣುತ್ತಿದೆ. ಮೈಕ್ರೋ ಫೈನಾನ್ಸ್ ಸಮಸ್ಯೆ, ರೈತರ ಆತ್ಮಹತ್ಯೆ, ಪೊಲೀಸರ ಮೇಲೆ ಹಲ್ಲೆ ಇವೆಲ್ಲವೂ ಆಡಳಿತದ ಮೇಲೆ ಸರ್ಕಾರದ ಹಿಡಿತ ತಪ್ಪಿರುವುದನ್ನು ಸ್ಪಷ್ಟಪಡಿಸುತ್ತವೆ ಎಂದು ಹೇಳಿದರು.

ರಾಜ್ಯ ಸರ್ಕಾರ ಸಂಪೂರ್ಣ ಪಾಪರ್ ಆಗಿದೆ. ನೌಕರರಿಗೆ ಸಂಬಳ ಕೊಡಲೂ ಸಹ ಹಣವಿಲ್ಲ. ಹೂಡಿಕೆದಾರರು ರಾಜ್ಯದಿಂದ ಹೊರಟು ಹೋಗುತ್ತಿದ್ದಾರೆ. ಬೆಂಗಳೂರಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ ಎಂದೂ ಅವರು ಟೀಕಿಸಿದರು.

Share this article