SIRನಿಂದ ಹೆಸರು ಬಿಟ್ಟಿದ್ದಾರಾ ನೋಡ್ಕೊಳ್ಳಿ-ದಾಖಲೆ ಕೊಟ್ಟು ಸೇರಿಸಿಕೊಳ್ಳಿ

Published : Aug 08, 2026, 06:06 AM IST
Karnataka SIR

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪರಿಷ್ಕರಿಸಿದೆ. ಇದೀಗ ಆ.17ರವರೆಗೂ ವಿಸ್ತರಿಸಲಾಗಿದೆ.

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪರಿಷ್ಕರಿಸಿದೆ.

ಬೂತ್‌ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಹಾಗೂ ವಾಪಸ್‌ ಪಡೆಯಲು ಆ.8 ಕೊನೆಯ ದಿನವಾಗಿತ್ತು. ಇದೀಗ ಆ.17ರವರೆಗೂ ವಿಸ್ತರಿಸಲಾಗಿದೆ. ಹೀಗಾಗಿ ಇನ್ನು ಗಣತಿ ನಮೂನೆ ವಾಪಸ್‌ ನೀಡದ ಮತದಾರರು 17ರ ಸಂಜೆವರೆಗೂ ಸಂಬಂಧಿತ ಬೂತ್‌ ಮಟ್ಟದ ಅಧಿಕಾರಿಗೆ(ಬಿಎಲ್‌ಒ) ನೀಡಬಹುದು.

ಅಲ್ಲದೆ, ಎಎಸ್‌ಡಿಡಿಒ (ಗೈರು, ಸ್ಥಳಾಂತರ, ಸಾವು, ಡ್ಯುಪ್ಲಿಕೆಟ್‌ ಹಾಗೂ ಇತರೆ) ವರ್ಗದ ಪೈಕಿ ಶಾಶ್ವತವಾಗಿ ಸ್ಥಳಾಂತರಗೊಂಡವರಲ್ಲಿ 66.01 ಲಕ್ಷ ಮತದಾರರು ಇದ್ದಾರೆ. ಈ ಮತದಾರರಿಗೆ ರೋಲ್‌ಬ್ಯಾಕ್‌ಗೆ ಅವಕಾಶವಿಲ್ಲ. ಹೀಗಾಗಿ ಈ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರ್ಮ್‌ 6 ಭರ್ತಿ ಮಾಡಿ ಸಲ್ಲಿಸಬೇಕು. ಆಗ ಸಂಬಂಧಿತ ಮತದಾರರ ನೋಂದಣಾಧಿಕಾರಿ ಪರಿಶೀಲಿಸಿ, ಮತದಾರರ ಪಟ್ಟಿಗೆ ಸೇರಿಸಲಿದ್ದಾರೆ. ಈ ಎಎಸ್‌ಡಿಡಿಒ ಎಂದು ವರ್ಗೀಕರಿಸಲಾದ ಮತದಾರರ ವಿವರಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಜಾಲತಾಣ ceo.karnataka.gov.inದಲ್ಲಿ ಲಭ್ಯವಿದೆ.

ಅಂತೆಯೇ ಅರ್ಹತೆ ಇದ್ದರೂ ಈವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಯಾಗದವರು ಕೂಡ ಫಾರ್ಮ್‌ 6 ಭರ್ತಿ ಮಾಡಿ ಸೇರ್ಪಡೆಯಾಗಲು ಅವಕಾಶವಿದೆ. 2026ರ ಅ.1ರೊಳಗೆ 18 ವರ್ಷ ಪೂರೈಸಿದವರೂ ಫಾರ್ಮ್‌ 6 ಭರ್ತಿ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು.

ರಾಜ್ಯದಲ್ಲಿ 5,54,32,314 ಮತದಾರರು ಇದ್ದಾರೆ. ರಾಜ್ಯದಲ್ಲಿ ಕಳೆದ 40 ದಿನಗಳಿಂದ ನಡೆದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರಿಗೆ ಗಣತಿ ನಮೂನೆ ವಿತರಣೆ ಹಾಗೂ ವಾಪಸ್ ನೀಡಿದ ಗಣತಿ ನಮೂನೆಗಳ ಡಿಜಿಟಲೀಕರಣ ಬಹುತೇಕ ಪೂರ್ಣಗೊಂಡಿದೆ. ಮತದಾರರು ಭರ್ತಿ ಮಾಡಿ ವಾಪಸ್ ನೀಡಿದ ಗಣತಿ ನಮೂನೆಗಳ ಪೈಕಿ 4,44,48,231 (ಶೇ.80.18) ಗಣತಿ ನಮೂನೆಗಳ ಡಿಜಿಟಲೀಕರಣ ಮುಗಿದೆ. 182 ಗಣತಿ ನಮೂನೆಗಳ ಡಿಜಿಟಲೀಕರಣ ಮಾತ್ರ ಬಾಕಿ ಇದೆ.

ಎಎಸ್‌ಡಿಡಿಒ 1.09 ಕೋಟಿ ಮತದಾರರು:

ಬೂತ್‌ ಮಟ್ಟದ ಅಧಿಕಾರಿಗಳು ಗಣತಿ ನಮೂನೆ ವಿತರಣೆ ವೇಳೆ 1,09,83,901(ಶೇ.19.81) ಮತದಾರರು ಲಭ್ಯರಾಗದ ಹಿನ್ನೆಲೆಯಲ್ಲಿ ಅವರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಿದ್ದಾರೆ. ಎ-ಆಬ್ಸೆಂಟ್‌ 15,90,165, ಎಸ್‌-ಪರ್ಮನೆಂಟ್‌ ಶಿಫ್ಟ್‌ 66,01,954 , ಡಿ-ಡೆತ್‌ 16,34,326, ಡಿ-ಡೂಪ್ಲಿಕೇಟ್‌ 6,96,536, ಒ-ಅದರ್ಸ್‌ 4,47,920 ಮತದಾರರನ್ನು ಎಎಸ್‌ಡಿಡಿಒ ಎಂದು ವರ್ಗೀಕರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ. ಅಂದರೆ, ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ.

ದಿನಾಂಕ ವಿಸ್ತರಣೆಗೆ ಒತ್ತಾಯ:

ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಿತರಣೆ ವೇಳೆ ಬಿಎಲ್‌ಒಗಳು ರಾಜ್ಯದ ಹಲವು ಕಡೆ ಅರ್ಹ ಮತದಾರರನ್ನೂ ಈ ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಿರುವ ಆರೋಪ ಕೇಳಿ ಬಂದಿದೆ. ಎಎಸ್‌ಡಿಡಿಒ ವರ್ಗದ 1.09 ಕೋಟಿ ಮತದಾರರ ಪೈಕಿ ಅರ್ಹ ಮತದಾರರನ್ನು ಸೇರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೇಗೆಂದರೆ, ಕಳೆದ ಮೂರು ದಿನಗಳ ಹಿಂದೆ ಎಎಸ್‌ಡಿಒ ವರ್ಗದಲ್ಲಿ 1.11 ಕೋಟಿ ಮತದಾರರು ಇದ್ದರು. ಬಳಿಕ ದಿನಕ್ಕೆ ಕನಿಷ್ಠ 1 ಲಕ್ಷಕ್ಕೂ ಅಧಿಕ ಮತದಾರರ ಸಂಖ್ಯೆ ಕಡಿಮೆಯಾಗಿದೆ.

ಅಂದರೆ, ಅರ್ಹ ಮತದಾರರು ರೋಲ್‌ಬ್ಯಾಕ್‌ ಅವಕಾಶ ಬಳಸಿಕೊಂಡು ತಮ್ಮ ಗಣತಿ ನಮೂನೆ ವಾಪಸ್‌ ಪಡೆದು ಭರ್ತಿ ಮಾಡಿ ವಾಪಸ್ ನೀಡಿದ್ದಾರೆ. ಹೀಗಾಗಿ ಎಎಸ್‌ಡಿಡಿಒ ವರ್ಗದಲ್ಲಿರುವ ಅರ್ಹ ಮತದಾರರ ಹಕ್ಕು ರಕ್ಷಿಸಲು ರೋಲ್‌ ಬ್ಯಾಕ್‌ ದಿನಾಂಕ ವಿಸ್ತರಿಸುವಂತೆ ಹಲವು ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ಇದರ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆ ವೇಳಾ ಪಟ್ಟಿ ಪರಿಷ್ಕರಿಸಿ ದಿನಾಂಕಗಳನ್ನು ವಿಸ್ತರಿಸಿದೆ.

ಎಎಸ್‌ಡಿಡಿಒ ಪಟ್ಟಿ ಸಾರ್ವಜನಿಕರಿಗೆ ಲಭ್ಯ

ಈ ಎಎಸ್‌ಡಿಡಿಒ ಎಂದು ವರ್ಗೀಕರಿಸಲಾದ ಮತದಾರರ ವಿವರಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಜಾಲತಾಣ ceo.karnataka.gov.in ಜಾಲತಾಣದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ. ಅಲ್ಲಿ ASDDO LIST ಎಂಬ ಲಿಂಕ್‌ ನೀಡಿದ್ದು, ಮತದಾರರು ಈ ಲಿಂಕ್‌ ತೆರೆದರೆ ರಾಜ್ಯದ ಎಲ್ಲಾ ಜಿಲ್ಲೆಗಳ ಲಿಂಕ್‌ ತೆರೆದುಕೊಳ್ಳಲಿವೆ. ಅಲ್ಲಿ ಆಯಾಯ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಪ್ರತ್ಯೇಕ ಲಿಂಕ್‌ ತೆರೆದುಕೊಳ್ಳಲಿದೆ. ಅದನ್ನು ಕ್ಲಿಕ್‌ ಮಾಡಿದರೆ, ಗೂಗಲ್‌ ಡ್ರೈವ್‌ ತೆರೆದುಕೊಳ್ಳಲಿದೆ. ಅಲ್ಲಿ ಆ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗೆ ಸಂಬಂಧಿಸಿದ ಎಎಸ್‌ಡಿಡಿಒ ಪಟ್ಟಿಯ ಪ್ರತ್ಯೇಕ ಕಡತಗಳು ಲಭ್ಯವಿದೆ. ಅದನ್ನು ತೆರೆದು ಮತದಾರರು ಪರಿಶೀಲಿಸಬಹುದು.

ರೋಲ್‌ಬ್ಯಾಕ್‌ ಮಾಡಿ ಸೇರ್ಪಡೆಯಾಗಿ:

ಒಂದು ವೇಳೆ ಅರ್ಹತೆ ಇದ್ದರೂ ನಿಮ್ಮ ಹೆಸರು ಎಸ್‌ಡಿಡಿಒ ಪಟ್ಟಿಯಲ್ಲಿ ಇದ್ದಲ್ಲಿ ನಿಮ್ಮ ಮತಗಟ್ಟೆ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿಗೆ ಕರೆ ಮಾಡಿ ತಮ್ಮ ಗಣತಿ ನಮೂನೆ ರೋಲ್‌ಬ್ಯಾಕ್‌ ಮಾಡಲು ಮನವಿ ಮಾಡಬೇಕು. ಬಳಿಕ ಆ ಗಣತಿ ನಮೂನೆ ಭರ್ತಿ ಮಾಡಿ ಸಂಬಂಧಿತ ಬಿಎಲ್‌ಒಗೆ ಸಲ್ಲಿಸಬೇಕು. ಈ ಕೆಲಸ ಮಾಡಲು ಆ.17ರ ವರೆಗೂ ಅವಕಾಶವಿದೆ.

ಎಸ್ಐಆರ್‌ ಪರಿಷ್ಕತ ವೇಳಾಪಟ್ಟಿ

ಬಿಎಲ್‌ಒಗಳ ಮನೆ-ಮನೆ ಭೇಟಿ ಕೊನೆಯ ದಿನ ಆ.17

ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ಆ.17

ಕರಡು ಮತದಾರರ ಪಟ್ಟಿ ಪ್ರಕಟ ಆ.24

ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಆ.24ರಿಂದ ಸೆ.23

ನೋಟಿಸ್‌/ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಆ.24ರಿಂದ ಅ.22

ಅಂತಿಮ ಮತದಾರರ ಪಟ್ಟಿ ಪ್ರಕಟ ಅ.27

-ಯುವ ಮತದಾರ

ಸೇರ್ಪಡೆಗೆ ವಿಶೇಷ ಅಭಿಯಾನ

2026ರ ಅ.1ಕ್ಕೆ 18 ವರ್ಷ ಪೂರೈಸುವ ಯುವ ಮತದಾರರ ನೋಂದಣಿ ಹಾಗೂ ಎಸ್‌ಐಆರ್‌ ವೇಳೆ ಸ್ಥಳಾಂತರಗೊಂಡವರು/ಗೈರಾದ ಮತದಾರರ ನೋಂದಣಿಗೆ ವಿಶೇಷ ಅಭಿಯಾನ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಮತದಾರರ ನೋಂದಣಾಧಿಕಾರಿಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಸೂಚನೆ ನೀಡಿದ್ದಾರೆ. ಅಂದರೆ, ಕರಡು ಮತದಾರರ ಪಟ್ಟಿ ಪ್ರಕಟವಾಗಿ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಬಿಎಲ್‌ಒಗಳನ್ನು ಮತಗಟ್ಟೆಗಳು ಮತ್ತು ನಿಗದಿತ ಸ್ಥಳಗಳಿಗೆ ನಿಯೋಜಿಸಿ ಫಾರ್ಮ್‌ 6 ಪಡೆದುಕೊಳ್ಳಬೇಕು. ಮಿಂಚಿನ ನೋಂದಣಿ ಹೆಸರಿನಲ್ಲಿ ವಾಸಸ್ಥಳಗಳು, ಅಪಾರ್ಟ್‌ಮೆಂಟ್‌, ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಪ್ರದೇಶಗಳು, ಐಟಿ ಪಾರ್ಕ್‌ಗಳು ಸೇರಿ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಅರ್ಹ ಮತದಾರರ ನೋಂದಣಿ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಏನಿದು ಎಎಸ್‌ಡಿಡಿಒ?

Absent, Shifted, Death, Duplicate, Others ಎಂಬುದರ ಸಂಕ್ಷಿಪ್ತ ರೂಪ. ಈ ವರ್ಗಕ್ಕೆ ಸೇರಿದವರ ಹೆಸರು ಮತದಾರರ ಪಟ್ಟಿಗೆ ಸೇರುವುದಿಲ್ಲ. ನಿಮ್ಮ ಹೆಸರು ಇದೆಯಾ ಎಂದು ceo.karnataka.gov.inದಲ್ಲಿ ಪರಿಶೀಲಿಸಬಹುದು

ಮುಂದೇನು?

ಸ್ಥಳಾಂತರಗೊಂಡವರಲ್ಲಿ 66 ಲಕ್ಷ ಮತದಾರರಿದ್ದಾರೆ. ಅವರು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಉಳಿದ ಮತದಾರರು ದಾಖಲೆ ಕೊಟ್ಟು ಮತ ಉಳಿಸಿಕೊಳ್ಳಬಹುದು

ಎಸ್‌ಐಆರ್‌ 17ರವರೆಗೆ ವಿಸ್ತರಿಸಿದ ಆಯೋಗ

ಬೂತ್‌ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಎಸ್‌ಐಆರ್‌ ಗಣತಿ ನಮೂನೆ ವಿತರಣೆ ಹಾಗೂ ವಾಪಸ್‌ ಪಡೆಯಲು ಆ.8 ಕೊನೆಯ ದಿನವಾಗಿತ್ತು. ಇದೀಗ ಆ.17ರವರೆಗೂ ವಿಸ್ತರಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಂತ್ರಿ ಸ್ಥಾನ ಬಿಟ್ಟು ಬೇರೆ ಏನನ್ನೂ ಒಪ್ಪಲ್ಲ: ಕೃಷ್ಣಪ್ಪ
ಹೊಸ ಸಂಪುಟದಲ್ಲಿ ಸಣ್ಣ ಬದಲಾವಣೆಗೆ ಕಸರತ್ತು- ಇಂದು/ನಾಳೆ ಸಿಎಂ ದೆಹಲಿಗೆ?