ಎಚ್‌ಡಿಕೆ ಜನತಾದರ್ಶನಕ್ಕೆ ಚಲುವ ಜನಸ್ಪಂದನ ಸಡ್ಡು!

KannadaprabhaNewsNetwork |  
Published : Jul 07, 2024, 01:24 AM ISTUpdated : Jul 07, 2024, 04:44 AM IST
N Cheluvarayaswamy

ಸಾರಾಂಶ

ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಜನತಾದರ್ಶನ ನಡೆಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಮಂಡ್ಯದಲ್ಲಿ ‘ಜನಸ್ಪಂದನ’ ನಡೆಸಿದ್ದಾರೆ.

 ಮಂಡ್ಯ :  ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಜನತಾದರ್ಶನ ನಡೆಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಮಂಡ್ಯದಲ್ಲಿ ‘ಜನಸ್ಪಂದನ’ ನಡೆಸಿದ್ದಾರೆ. ಕೆರಗೋಡು ಗ್ರಾಮದಲ್ಲಿ ಶನಿವಾರ ದಿಢೀರ್‌ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 53 ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಜನರ ಸಮಸ್ಯೆ ಆಲಿಸುವ ಮೂಲಕ ಕುಮಾರಸ್ವಾಮಿಗೆ ಸಡ್ಡು ಹೊಡೆದಿದ್ದಾರೆ.

ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಕುಮಾರಸ್ವಾಮಿ ಅವರು ನಡೆಸಿದ ಜನತಾದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ತೆರಳದಂತೆ ರಾಜ್ಯ ಸರ್ಕಾರವೇ ನಿರ್ಬಂಧ ವಿಧಿಸಿತ್ತು. ಹೀಗಾಗಿ ಜನತಾ ದರ್ಶನ ಕೇವಲ ಅರ್ಜಿ ಸ್ವೀಕಾರ, ಅಹವಾಲು ಆಲಿಕೆಗಷ್ಟೇ ಸೀಮಿತವಾಗಿತ್ತು. ಅಧಿಕಾರಿಗಳ ಗೈರಿನ ವಿಚಾರವಾಗಿ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನೂ ಹೊರಹಾಕಿದ್ದರು. ಆದರೆ ಚಲುವರಾಯಸ್ವಾಮಿ ಅವರು ಕೆರಗೋಡು ಗ್ರಾಮದಲ್ಲಿ ಸುಮಾರು ಐದು ತಾಸು ನಡೆಸಿದ ಜನತಾದರ್ಶನದಲ್ಲಿ ಜಿಲ್ಲೆಯ ಬಹುತೇಕ ಎಲ್ಲ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

ಜಿಲ್ಲಾಮಟ್ಟದ ಅಧಿಕಾರಿಗಳ ಅಸಹಕಾರದ ನಡುವೆಯೂ ಎಚ್‌.ಡಿ.ಕುಮಾರಸ್ವಾಮಿ ಅವರು ಸಂಜೆ 7 ಗಂಟೆವರೆಗೂ ಏಳು ತಾಸು ಜನರ ಅಹವಾಲು ಆಲಿಸಿ ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದರು. ಇದಕ್ಕೆ ಸಡ್ಡು ಹೊಡೆದು ಕೆರಗೋಡಿನಲ್ಲಿ ದಿಢೀರ್‌ ಆಗಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಚಲುವರಾಯಸ್ವಾಮಿ ಅವರು ಕೂಡ ನೂರಾರು ಜನರಿಂದ ಅರ್ಜಿಗಳನ್ನು ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಇದೇ ವೇಳೆ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ನಮ್ಮ ಸರ್ಕಾರ ಬಂದ ಮೇಲೆ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಎಲ್ಲರಿಗೂ ಗ್ಯಾರಂಟಿ ತಲುಪುತ್ತಿದೆ. ಆದರೂ ವಿರೋಧ ಪಕ್ಷದವರು ಇಲ್ಲ, ಸಲ್ಲದ ಮಾತು ಆಡುತ್ತಿದ್ದಾರೆ. ಸಬ್ಸಿಡಿ ಯೋಜನೆಗಳನ್ನು ನಾವು ನಿಲ್ಲಿಸಿಲ್ಲ. ಬಿತ್ತನೆ ಬೀಜಗಳಿಗೆ ಯಾವುದೇ ತೊಂದರೆ ಮಾಡಿಲ್ಲ. ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನಗಳು ವಿರೋಧ ಪಕ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಹಿಂದೆ ಇದ್ದವರು ಯಾಕೆ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಘೋಷಣೆ ಮಾಡಲಿಲ್ಲ ಎಂದು ದಳಪತಿಗಳನ್ನು ಗುರಿಯಾಗಿಸಿಕೊಂಡು ಪ್ರಶ್ನಿಸಿದ ಅವರು, ನಮ್ಮ ಶ್ರಮ ನಿಮಗೆ(ಜನರಿಗೆ) ಅರ್ಥ ಆಗಲಿಲ್ಲವೆಂದರೆ ಅದು ನಮ್ಮ ದುರದೃಷ್ಟ ಎಂದು ಹೇಳುವ ಮೂಲಕ ಪರೋಕ್ಷವಾಗಿ ಲೋಕಸಭಾ ಚುನಾವಣಾ ಸೋಲಿಗೆ ಸಚಿವ ಬೇಸರ ವ್ಯಕ್ತಪಡಿಸಿದರು.

ನಾವು ಪಕ್ಷ ನೋಡದೆ ನಿಮ್ಮ ಸೇವೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ 27 ಸಾವಿರ ಇ-ಸ್ವತ್ತು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಗೌರವಯುತವಾಗಿ ಕೆಲಸ ಮಾಡಿದ್ದೇವೆ. ಇಲ್ಲಿ ಬರುವ ಎಲ್ಲ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಎಸ್ಪಿ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಸೇರಿ 53 ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ