ಮರಾಟ ದಾರ 2 ರು. ಹೆಚ್ಚಳ ಮತ್ತು ರೈತರಿಗೆ ಕಡಿತ ಮಾಡಿದ 2 ರೂ. ಸೇರಿದರೆ 4 ರು. ಆಗುತ್ತದೆ. ಕೋಚಿಮುಲ್‌ನಲ್ಲಿ ಸುಮಾರು 12 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಈ ಹೆಚ್ಚುವರಿ 4 ರು.ಗಳಿಂದ ದಿನಕ್ಕೆ 48 ಲಕ್ಷ ರು. ಹೆಚ್ಚುವರಿಯಾಗಿ ಬರುತ್ತಿದೆ. ಇದನ್ನು ರೈತರಿಗೆ ನೀಡುತ್ತಿಲ್ಲ
ಚಿಕ್ಕಬಳ್ಳಾಪುರ : ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದಲ್ಲಿ ರೈತರಿಗೆ ನೀಡುತ್ತಿದ್ದ ಹಣದಲ್ಲಿ 2 ರು.ಗಳನ್ನು ಕಡಿತ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ಜುಲೈ 10 ರಂದು ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಸದ ಡಾ. ಕೆ.ಸುಧಾಕರ್ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಭಾಗದ ರೈತರು ಮೌನಕ್ಕೆ ಶರಣಾಗಿದ್ದಾರೆ. ಆದರೆ ಎಲ್ಲರೂ ಈ ಅನ್ಯಾಯದ ವಿರುದ್ಧ ಹೋರಾಡಬೇಕಿದೆ ಎಂದರು.
ಆಗ ಟೀಕಿಸಿ ಈಗ ದರ ಹೆಚ್ಚಳ
ಕಾಂಗ್ರೆಸ್ ನಾಯಕರು ಚುನಾವಣೆಯ ಸಮಯದಲ್ಲಿ ದರ ಏರಿಕೆಯ ವಿಷಯ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದರು. ನಂದಿನಿ ಉಳಿಸಿ ಎಂದು ಅಭಿಯಾನ ಸಹ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಎಲ್ಲ ದರಗಳನ್ನು ಏರಿಸಿದ್ದಾರೆ ಎಂದು ಟೀಕಿಸಿದರು.
ಹಾಲು ಮಾರಾಟ ದರ ಹೆಚ್ಚಿಸಲಾಗಿದೆ. ನ್ಯಾಯವಾಗಿ ರೈತರಿಗೆ ಹೆಚ್ಚು ಹಣ ನೀಡಬೇಕಿತ್ತು. ಏರಿಕೆ ಮಾಡಿದ 2 ರೂ. ಹಾಗೂ ರೈತರಿಂದ ಕಡಿತ ಮಾಡಿದ 2 ರೂ. ಸೇರಿದರೆ 4 ರೂ. ಆಗುತ್ತದೆ. ಕೋಚಿಮುಲ್‌ನಲ್ಲಿ ಸುಮಾರು 12 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಈ ಹೆಚ್ಚುವರಿ 4 ರೂ. ನಿಂದ ದಿನಕ್ಕೆ 48 ಲಕ್ಷ ರು. ಹೆಚ್ಚುವರಿಯಾಗಿ ಬರುತ್ತಿದೆ. ಇದನ್ನು ರೈತರಿಗೆ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಜಿಲ್ಲೆಗೆ ಪ್ರತ್ಯೇಕ ಒಕ್ಕೂಟಈ ಹಿಂದೆ ನಾನು ಸಚಿವನಾಗಿದ್ದಾಗ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚಿಸಲಾಗಿತ್ತು. ಆಗ 5 ಎಕರೆ ಜಾಗ ಮತ್ತು 50 ಕೋಟಿ ರು. ಅನುದಾನಕ್ಕೆ ನಮ್ಮ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಇಷ್ಟೆಲ್ಲ ಮಾಡಿದರೂ ಹಾಲು ಒಕ್ಕೂಟವನ್ನು ರದ್ದು ಮಾಡಲಾಗಿತ್ತು. ಈಗ ಸರ್ಕಾರ ಮತ್ತೆ ಪ್ರತ್ಯೇಕ ಒಕ್ಕೂಟ ಮಾಡಲು ಪ್ರಯತ್ನ ಆರಂಭಿಸಿದೆ. ಇದನ್ನು ಸುಸಜ್ಜಿತವಾಗಿ ಮಾಡಲಿ ಎಂದರು. ಒಕ್ಕೂಟಕ್ಕೆ ಚುನಾವಣೆ ನಡೆಸುತ್ತಿಲ್ಲ
ಕೋಚಿಮುಲ್‌ನಲ್ಲಿ ಅಧ್ಯಕ್ಷ ಕೆ.ವೈ.ನಂಜೇಗೌಡರ ಅವಧಿ ಮುಗಿದ ನಂತರವೂ ಚುನಾವಣೆ ಮುಂದೂಡಲಾಗುತ್ತಿದೆ. ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಒಕ್ಕೂಟವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಅಧ್ಯಕ್ಷರಿಗೆ ಅಥವಾ ಸರ್ಕಾರಕ್ಕೆ ಖಚಿತತೆ ಇಲ್ಲ ಎಂದು ದೂರಿದರು.
ಬೆಂಗಳೂರಿಂದ ಹೈದರಾಬಾದ್‌ಗೆ ಹೋಗುವ 500 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು 10 ಪಥದ ರಸ್ತೆಯಾಗಿ ವಿಸ್ತರಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೋರಿದ್ದು, ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. 44 ಕಿ.ಮೀ. ಉದ್ದದ ಚಿಕ್ಕಬಳ್ಳಾಪುರ-ಗೌರಿಬಿದನೂರು ಹಾಗೂ 103 ಕಿ.ಮೀ. ಉದ್ದದ ಚಿಕ್ಕಬಳ್ಳಾಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮಾರ್ಗದ ನಿರ್ಮಾಣಕ್ಕೆ ಒತ್ತು ನೀಡಿ ಮನವಿ ಮಾಡಿದ್ದೇನೆ. ಮಾರಿಕುಪ್ಪಂ-ಕುಪ್ಪಂ, ಉಪನಗರ ರೈಲು ಯೋಜನೆ ಕುರಿತು ಕೂಡ ಕೋರಿಕೆ ಸಲ್ಲಿಸಿದ್ದೇನೆ ಎಂದು ಹೇಳಿದರು. ಪುಷ್ಪ ಮಂಡಳಿ ಸ್ಥಾಪನೆಗೆ ಪ್ರಸ್ತಾಪ
ಸಂಸತ್ತಿನಲ್ಲಿ ಶಾಶ್ವತ ನೀರಾವರಿ ಕುರಿತು ಮನವಿ ಮಾಡಿದ್ದೇನೆ. ಇದರ ಜೊತೆಗೆ ಪುಷ್ಪ ಮಂಡಳಿ ಆರಂಭಕ್ಕೆ ಮನವಿ ಮಾಡಿದ್ದೇನೆ. ಹೂ ಕೃಷಿಯಲ್ಲಿ 800 ಕೋಟಿ ರೂ. ಗೂ ಅಧಿಕ ವಹಿವಾಟು ನಡೆದಿದ್ದು, ಇಡೀ ದೇಶಕ್ಕೆ ಪುಷ್ಪ ಮಂಡಳಿ ಬೇಕಿದೆ. ಅದಕ್ಕೆ ಉತ್ತರ ಶೀಘ್ರ ಸಿಗಲಿದೆ ಎಂದು ತಿಳಿಸಿದರು. ಕ್ರಿಯಾ ಯೋಜನೆಗೆ ಅನುಮೋದನೆ
ನಗರೋತ್ಥಾನ 4 ನೇ ಹಂತದಡಿ 50 ಕೋಟಿ ರು. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದನ್ನು ರದ್ದುಪಡಿಸಿತ್ತು. ಸ್ಥಳೀಯ ಶಾಸಕರು ಮತ್ತು ಸಚಿವರು ನಗರಕ್ಕೆ ಒಂದು ರುಪಾಯಿ ಅನುದಾನ ತಂದಿಲ್ಲ ಎಂದು ಟೀಕಿಸಿದ ಸಂಸದರು, ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಮತ್ತು ಹೆಚ್.ಎನ್ ಮತ್ತು ಕೆ.ಸಿ ವ್ಯಾಲಿಯ ನೀರಿನ ಮೂರನೇ ಹಂತದ ಶುದ್ದೀಕರಣ ಮಾಡಿಯೇ ತೀರುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಎಂ.ಶಿವಾನಂದ್,ಎಂ.ರಾಜಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ವಿ.ರಾಮಲಿಂಗಪ್ಪ,ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತ ಮುನಿಯಪ್ಪ,ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಮತ್ತಿತರರು ಇದ್ದರು.