ಜನತಾದರ್ಶನ ಮಾಡಲು ಸಂಸದರಿಗೆ ಅಧಿಕಾರ ಇಲ್ಲ: ಚಲುವರಾಯಸ್ವಾಮಿ

KannadaprabhaNewsNetwork | Updated : Jul 07 2024, 04:50 AM IST

ಸಾರಾಂಶ

ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಸಂಸದರಾಗಿಲ್ಲ. ಅವರಿಗೂ ತುಂಬಾ ಅನುಭವವಿದೆ ಎಂದು ಭಾವಿಸಿದ್ದೇನೆ. ಯಾರಿಗೂ ಇಲ್ಲದ ನಿರ್ಬಂಧವನ್ನು ಇವರಿಗೇಂತ ಹೊಸದಾಗಿ ಮಾಡಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರ್ಯಾರಿಗೆ ಏನೇನು ವ್ಯಾಪ್ತಿ ಇದೆ ಎನ್ನುವುದು ಅವರಿಗೂ ಗೊತ್ತಿದೆ.

 ಮಂಡ್ಯ :  ಜನತಾದರ್ಶನ ಮಾಡುವುದಕ್ಕೆ ಕೇಂದ್ರ ಸಚಿವರಿಗಾಗಲೀ, ಸಂಸದರಿಗಾಗಲೀ ಅವಕಾಶವಿಲ್ಲ. ಈ ನಿಯಮಾವಳಿಯನ್ನು ಸರ್ಕಾರ ಹೊಸದಾಗೇನೂ ಮಾಡಿಲ್ಲ. ಅವರು ಎರಡು ಬಾರಿ ಸಿಎಂ ಆಗಿದ್ದಾಗ ಇದ್ದ ಆದೇಶವೇ ಈಗಲೂ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಸಂಸದರಾಗಿಲ್ಲ. ಅವರಿಗೂ ತುಂಬಾ ಅನುಭವವಿದೆ ಎಂದು ಭಾವಿಸಿದ್ದೇನೆ. ಯಾರಿಗೂ ಇಲ್ಲದ ನಿರ್ಬಂಧವನ್ನು ಇವರಿಗೇಂತ ಹೊಸದಾಗಿ ಮಾಡಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರ್ಯಾರಿಗೆ ಏನೇನು ವ್ಯಾಪ್ತಿ ಇದೆ ಎನ್ನುವುದು ಅವರಿಗೂ ಗೊತ್ತಿದೆ. ಅವರು ಎರಡು ಬಾರಿ ಸಿಎಂ ಆಗಿದ್ದಾಗ ಇದ್ದ ಆದೇಶ ಈಗಲೂ ಇದ್ದು, ಅದೇ ಆದೇಶವನ್ನು ಅವರ ಜನತಾದರ್ಶನಕ್ಕೂ ಜಾರಿಗೊಳಿಸಿರುವುದಾಗಿ ಸ್ಪಷ್ಟಪಡಿಸಿದರು.

ಜನತಾದರ್ಶನ ನಡೆಸಿ ಸ್ಥಳೀಯರ ಸಮಸ್ಯೆ ಬಗೆಹರಿಸಲು ಸಚಿವರು, ಶಾಸಕರು, ಅಧಿಕಾರಿಗಳು ಇದ್ದಾರೆ. ಕುಮಾರಸ್ವಾಮಿ ಅವರು ಮಂಡ್ಯದ ಎಲ್ಲಾ ತಾಲೂಕುಗಳಿಗೆ ವಿಶೇಷ ಅನುದಾನ ಕೊಡಿಸಲಿ. ಕೈಗಾರಿಕೆಗಳನ್ನ ತಂದು ಜಿಲ್ಲೆ ಅಭಿವೃದ್ಧಿ ಪಡಿಸಲಿ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಿ. ಅದಕ್ಕೆ ನಾವೂ ಸಹಕಾರ ನೀಡುತ್ತೇವೆ ಎಂದರು.

ದಿಶಾ ಸಭೆಯಲ್ಲಿ ಕೇಂದ್ರದ ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ ಮಾಡಲಿಕ್ಕೆ ಅಧಿಕಾರ ಇದೆ. ಎಲ್ಲಾ ಅಧಿಕಾರಿಗಳನ್ನು ಕೂರಿಸಿಕೊಂಡು ಜನತಾದರ್ಶನ ಮಾಡುವುದಕ್ಕೆ ಅಧಿಕಾರ ಇಲ್ಲ. ಜನರಿಂದ ಅಹವಾಲು ಸ್ವೀಕರಿಸಿ ಜಿಲ್ಲಾಧಿಕಾರಿಗೆ ತಲುಪಿಸಬಹುದು ಅಷ್ಟೇ. ಇವರೇ ಜನತಾದರ್ಶನ ಮಾಡಲು ಅವಕಾಶವಿಲ್ಲ. ಅನಧಿಕೃತವಾಗಿ ಡಿ.ಕೆ.ಸುರೇಶ್ ಈ ಕಾರ್ಯಕ್ರಮ ಮಾಡಿದ್ದರೂ ತಪ್ಪೇ ಎಂದು ಸ್ಪಷ್ಟವಾಗಿ ಹೇಳಿದರು.

ಮೋದಿ ಅವರ ಜೊತೆ ಕುಮಾರಸ್ವಾಮಿ ಉತ್ತಮ ಭಾಂದವ್ಯ ಹೊಂದಿದ್ದಾರೆ. ದೇಶ ಗಮನಿಸಿಕೊಳ್ಳಲು ಮೋದಿ ಇವರನ್ನು ಕ್ಯಾಬಿನೇಟ್‌ ಮಂತ್ರಿ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಕುಮಾರಸ್ವಾಮಿ ಅವರ ಜನತಾದರ್ಶನ ಬಗ್ಗೆ ಒಂದೇ ಒಂದು ಮಾತು ಚರ್ಚೆ ಆಗಿಲ್ಲ ಎಂದರು.

ಮೈಸೂರು ಮೂಡಾ ಪ್ರಕರಣ ಬಹಿರಂಗ ಹಿಂದೆ ಡಿಕೆಶಿ ಕೈವಾಡವಿರುವ ಕುರಿತು ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಕೇಳಿದಾಗ, ಬಿಜೆಪಿ ಸರ್ಕಾರವಿದ್ದಾಗಲೇ ಮೈಸೂರು ಮುಡಾದಲ್ಲಿ ಒಂದಷ್ಟು ಗೋಲ್‌ಮಾಲ್ ನಡೆದಿದೆ. ಜಾಗ ಕೊಟ್ಟಿರುವುದೂ ಬಿಜೆಪಿ ಸರ್ಕಾರವೇ. ಮುಖ್ಯಮಂತ್ರಿ ಹೆಸರು ಬಂದರೆ ಹಗರಣ ಮುಚ್ಚಿಹೋಗುತ್ತದೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಡಿಕೆಶಿಗೆ ಈ ರೀತಿ ಸಂಚು ಮಾಡಿ ಸಿಎಂ ಆಗುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

Share this article