ಬಿಜೆಪಿ ಭಿನ್ನಮತೀಯರ ಮನವೊಲಿಕೆಗೆ ಸರ್ಕಸ್‌ - ಯತ್ನಾಳ್‌ ಉಚ್ಚಾಟನೆಯಿಂದ ಭಿನ್ನರ ಬಣ ತಟಸ್ಥ

ಸಾರಾಂಶ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದ್ದು, ಇದರ ಬೆನ್ನಲ್ಲೇ ಇತರ ಭಿನ್ನಮತೀಯ ಮುಖಂಡರ ಮನವೊಲಿಸಲು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತರು ಮುಂದಾಗಿದ್ದಾರೆ.

ಬೆಂಗಳೂರು :  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದ್ದು, ಇದರ ಬೆನ್ನಲ್ಲೇ ಇತರ ಭಿನ್ನಮತೀಯ ಮುಖಂಡರ ಮನವೊಲಿಸಲು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತರು ಮುಂದಾಗಿದ್ದಾರೆ.

ಯತ್ನಾಳ್ ಅವರ ಕಾರಣಕ್ಕಾಗಿ ಭಿನ್ನಮತೀಯರ ಗುಂಪು ಬಲಗೊಂಡಿತ್ತು. ಆದರೆ, ಯಾವಾಗ ಯತ್ನಾಳ್‌ರನ್ನು ಪಕ್ಷದಿಂದ ಹೊರಗೆ ಹಾಕಿದರೋ ಆಗಿನಿಂದ ಭಿನ್ನಮತೀಯರ ಬಣದ ಇತರ ಮುಖಂಡರು ತಟಸ್ಥರಾಗಿದ್ದಾರೆ. ಭಿನ್ನಮತೀಯ ಚಟುವಟಿಕೆಗಳೂ ತಟಸ್ಥಗೊಂಡಿವೆ. ಹೀಗಾಗಿ, ಇದನ್ನೇ ಬಳಸಿಕೊಂಡು ಆ ಮುಖಂಡರ ಅಸಮಾಧಾನ ಹೋಗಲಾಡಿಸಬಹುದು ಎಂಬ ಲೆಕ್ಕಾಚಾರ ವಿಜಯೇಂದ್ರ ಅವರ ಆಪ್ತರಲ್ಲಿ ಮೂಡಿದೆ. ಈ ನಿಟ್ಟಿನಲ್ಲಿ ವಿಜಯೇಂದ್ರ ಆಪ್ತರು ಭಿನ್ನಮತೀಯರನ್ನು ಸಂಪರ್ಕಿಸಿ ವಿಜಯೇಂದ್ರ ಅವರೊಂದಿಗಿನ ಮುನಿಸು ತಣಿಸಲು ಪ್ರಯತ್ನ ನಡೆಸಿದ್ದಾರೆ. ಈವರೆಗೆ ಯಾವುದೇ ಮುಖಂಡರನ್ನು ಸಂಪರ್ಕಿಸಿದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ತೆರೆಮರೆಯಲ್ಲಿ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ, ಈ ಪ್ರಯತ್ನಕ್ಕೆ ಭಿನ್ನಮತೀಯರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ಮಾತ್ರ ಖಚಿತವಾಗಿಲ್ಲ. ಈ ಕ್ಷಣದವರೆಗೆ ಯತ್ನಾಳ ಅವರು ಪಕ್ಷದಿಂದ ಹೊರಹೋಗಿದ್ದರೂ ಭಿನ್ನಮತೀಯರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಆದರೆ, ಮೊದಲಿನ ಆತ್ಮೀಯತೆ ಉಳಿದಿಲ್ಲ. ಯತ್ನಾಳ್‌ ಹೋರಹೋದ ಬಳಿಕ ಮುಂದೇನು ಎಂಬ ಆತಂಕದಲ್ಲಿರುವ ಹಲವರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಅವರು ಹಿಂದೆಯೂ ಯತ್ನಾಳ್ ಬಣದ ಮುಖಂಡರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ಬದಲಾದ ಸನ್ನಿವೇಶದಲ್ಲಿ ಈ ಪ್ರಯತ್ನ ಯಶಸ್ಸು ತಂದು ಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ಮೊದಲ ಹಂತದ ನಾಯಕರ ಮೇಲೆ ಕಣ್ಣು: ರಾಜ್ಯದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿದೆ. ವಿಜಯೇಂದ್ರ ಅವರ ನಡೆ ಬಗ್ಗೆ ಮುನಿಸಿಕೊಂಡಿದ್ದ ಎರಡನೆಯ ಹಂತದ ಮುಖಂಡರ ಪೈಕಿ ಬಹುತೇಕರು ಈಗ ತಟಸ್ಥರಾಗಿ ಪಕ್ಷದ ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು ಯತ್ನಾಳ್ ಬಣದ ಮೊದಲ ಸಾಲಿನಲ್ಲಿರುವ ಮುಖಂಡರನ್ನು ಮನವೊಲಿಸುವಲ್ಲಿ ಯಶಸ್ವಿಯಾದರೆ ಪಕ್ಷದಲ್ಲಿನ ಭಿನ್ನಮತವೇ ಅಂತ್ಯಗೊಳ್ಳಬಹುದು ಎಂಬ ಎಣಿಕೆ ವಿಜಯೇಂದ್ರ ಆಪ್ತರಲ್ಲಿದೆ.

ಇದೇ ತಿಂಗಳ ಅಂತ್ಯ ಅಥವಾ ಬರುವ ಮೇ ಮೊದಲ ವಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಆಗುವ ಸಾಧ್ಯತೆಯಿದೆ. ಆ ಹೊತ್ತಿಗೆ ಭಿನ್ನಮತ ತಣ್ಣಗಾದಲ್ಲಿ ವಿಜಯೇಂದ್ರ ಅವರ ಮುಂದುವರಿಕೆಗೆ ಯಾವುದೇ ಅಡ್ಡಿ ಇಲ್ಲದಂತಾಗುತ್ತದೆ.

Share this article