ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಬೂತ್ ಏಜೆಂಟರ ಸಭೆಯ ಬ್ಯಾನರ್‌ನಲ್ಲಿ ತಮ್ಮ ನಾಯಕರ ಫೋಟೋ ಹಾಕಿಲ್ಲವೆಂಬ ಕಾರಣಕ್ಕೆ ಪಕ್ಷದ ಎರಡು ಬಣಗಳ ನಾಯಕರ ಬೆಂಬಲಿಗರು ಕೈಕೈ ಮಿಲಾಯಿಸಿದ ಘಟನೆ ನಡೆದಿದೆ.
ಬ್ಯಾನರ್‌ನಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿಗಳಾದ ನಜೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಫೋಟೋಗಳನ್ನು ಏಕೆ ಹಾಕಿಲ್ಲ ಎಂದು ನಗರಸಭೆ ಸದಸ್ಯ ಅಂಬರೀಷ್ ಅರು ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಅವರನ್ನು ಪ್ರಶ್ನಿಸಿದರು.
ಶ್ರೀನಿವಾಸ್ ತಲೆಗೆ ಡಿಚ್ಚಿ
ಆಗ ಮುಖಂಡ ವೈ.ಶಿವಕುಮಾರ್, ಏಕವಚನದಲ್ಲೇ ಊರುಬಾಗಿಲು ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರಲ್ಲದೆ ಏಕಾಏಕಿ ವೇದಿಕೆಯತ್ತ ತೆರಳಿ ಕೊರಳಪಟ್ಟಿ ಹಿಡಿದು, ಎಳೆದಾಡಿ ತಲೆಗೆ ಡಿಚ್ಚಿ ಹೊಡೆದರು. ಕೂಡಲೇ ಎರಡೂ ಬಣಗಳ ಮುಖಂಡರು ಇಬ್ಬರನ್ನೂ ಸಮಾಧಾನಪಡಿಸಿ, ಜಗಳ ಬಿಡಿಸಿದರು.
ಹಲ್ಲೆಯಿಂದಾಗಿ ಗಾಯಗೊಂಡ ಊರುಬಾಗಿಲು ಶ್ರೀನಿವಾಸ್ ಮತ್ತು ವೈ.ಶಿವಕುಮಾರ್ ಜಿಲ್ಲಾಸ್ಪತ್ರೆಗೆ ದಾಖಲಾದರು.
ಉದ್ರಿಕ್ತರನ್ನು ಸಮಾಧಾನಪಡಿಸಲು ವಿಧಾನಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್ ಹಾಗೂ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ರಾಜ್‌ಕುಮಾರ್ ನಡೆಸಿದ ಯತ್ನ ವಿಫಲವಾಯಿತು.
ಘಟನೆಯಿಂದಾಗಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುಮಾರು ೧ ಗಂಟೆಗೂ ಅಧಿಕ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿದ್ದ ಗಲ್‌ಪೇಟೆ ಠಾಣೆ ಪೊಲೀಸರು ಇನ್ನಷ್ಟು ಸಿಬ್ಬಂದಿಯನ್ನು ಕರೆಯಿಸಿಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.
ಮತ್ತೊಂದು ಗಲಾಟೆ: ಊರುಬಾಗಿಲು ಶ್ರೀನಿವಾಸ್ ಹಾಗೂ ವೈ.ಶಿವಕುಮಾರ್ ನಡುವಿನ ಜಗಳ ಒಂದು ಕಡೆಯಾದರೆ, ಮತ್ತೊಂದು ಕಡೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಆಪ್ತ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಹಾಗೂ ಕಾರ್ಯಕರ್ತ ವೆಂಕಟೇಶ್ ಎಂಬುವರ ನಡುವೆ ಗಲಾಟೆ ನಡೆಯಿತು.
ತಮ್ಮನ್ನು ಕೆಟ್ಟದಾಗಿ ನಿಂದಿಸಿದ್ದಾರೆಂದು ಜಯದೇವ್ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಉಭಯ ನಾಯಕರು ಪರಸ್ಪರ ಕೈ ಕೈ ಮಿಲಾಯಿಸಿದರು.