ಬಿಡಿಎ ಕೇಸಲ್ಲಿ ಸಾಕ್ಷ್ಯ ಇಲ್ಲ । ಕೋರ್ಟಿಗೆ ಲೋಕಾಯುಕ್ತ ಬಿ ರಿಪೋರ್ಟ್ । ಮಾಜಿ ಸಿಎಂ ಕುಟುಂಬ ನಿರಾಳ
---
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಸಮುಚ್ಚಯ ನಿರ್ಮಾಣ ಯೋಜನೆ ಗುತ್ತಿಗೆಯಲ್ಲಿ 12 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆದ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪುತ್ರ ಬಿ.ವೈ.ವಿಜಯೇಂದ್ರ ಸೇರಿ ಕುಟುಂಬ ಸದಸ್ಯರು ಹಾಗೂ ಉಚ್ಚಾಟಿತ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಲೋಕಾಯುಕ್ತ ಪೊಲೀಸರು ಇದೀಗ ಕ್ಲೀನ್‌ಚೀಟ್ ನೀಡಿದ್ದಾರೆ.
ಲಂಚ ಸ್ವೀಕಾರ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಲೋಕಾಯುಕ್ತ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಅನ್ನು ಸೆ.15ರಂದು ತನಿಖಾಧಿಕಾರಿ ಹಾಗೂ ಡಿವೈಎಸ್ಪಿ ಎಂ.ಎಚ್.ಸತೀಶ್ ಸಲ್ಲಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಕೆಗೂ ದೂರುದಾರ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರಿಗೆ ಲೋಕಾಯುಕ್ತ ನ್ಯಾಯಾಲಯ ಸೂಚಿಸಿದೆ.ನಾಲ್ಕು ವರ್ಷಗಳ ಹಿಂದೆ ಅಂದು ಅಧಿಕಾರದಲ್ಲಿದ್ದ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ವಿರುದ್ಧ ಕಿಕ್ ಬ್ಯಾಕ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಯಡಿಯೂರಪ್ಪ ಹಾಗೂ ಅವರ ಪುತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಳಂಕ ಮುಕ್ತರಾಗಿರುವುದು ರಾಜಕೀಯವಾಗಿ ವಿರೋಧಿಗಳ ಹಣಿಯಲು ಶಕ್ತಿ ಬಂದಂತಾಗಿದೆ ಎನ್ನಲಾಗಿದೆ.
ಮೊಮ್ಮಗನ ಶೆಲ್ ಕಂಪನಿಗಳಿಗೆ ಹಣ ಆರೋಪ:2020ರಲ್ಲಿ ಹೊಸಕೋಟೆ ಸಮೀಪದ ಕೋನದಾಸಪುರದಲ್ಲಿ 116 ಕೋಟಿ ರು. ವೆಚ್ಚದ ವಸತಿ ಸಮುಚ್ಚಯ ನಿರ್ಮಾಣ ಯೋಜನೆಯನ್ನು ಬಿಡಿಎ ರೂಪಿಸಿತ್ತು. ಈ ಯೋಜನೆಯ ಕಾಮಗಾರಿಯನ್ನು ರಾಮಲಿಂಗಂ ಕಂಪನಿಯ ಚಂದ್ರಕಾಂತ್ ರಾಮಲಿಂಗಂ ಅವರಿಗೆ ಬಿಡಿಎ ನೀಡಿತ್ತು. ಆದರೆ ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದು ರಾಮಲಿಂಗಂ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಇದಕ್ಕೆ ಅಂದಿನ ಬಿಡಿಎ ಆಯುಕ್ತ ಜೆ.ಸಿ.ಪ್ರಕಾಶ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗುತ್ತಿಗೆದಾರರು ಲಂಚ ಕೊಟ್ಟಿದ್ದಾರೆ. ಅಲ್ಲದೆ ಸರ್ಕಾರದ ಇತರೆ ಇಲಾಖೆಗಳ ಕೋಟ್ಯಂತರ ವೆಚ್ಚದ ಯೋಜನೆಗಳ ಗುತ್ತಿಗೆಯೂ ರಾಮಲಿಂಗಂ ಕಂಪನಿಗೆ ಸಿಗುವಂತೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಪ್ರಭಾವ ಬೀರಿತ್ತು ಎಂದು ಆರೋಪಿಸಲಾಗಿತ್ತು.
ಇದಕ್ಕೆ ಪ್ರತಿಫಲವಾಗಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮತ್ತು ಸಂಬಂಧಿ ಸಂಜಯ ಶ್ರೀ ಪಾಲುದಾರಿಕೆಯ ಖಾಸಗಿ ಕಂಪನಿಗೆ ಕೋಲ್ಕತಾ ಮೂಲದ 7 ಶೆಲ್ ಕಂಪನಿಗಳಿಂದ 4.5 ಕೋಟಿ ರು. ಬಂದಿತ್ತು. ಒಟ್ಟಾರೆ ಗುತ್ತಿಗೆಯಲ್ಲಿ ಯಡಿಯೂರಪ್ಪ ಕುಟುಂಬಕ್ಕೆ ಗುತ್ತಿಗೆದಾರ ರಾಮಲಿಂಗಂ ಅವರಿಂದ 12 ಕೋಟಿ ರು. ಕಿಕ್ ಬ್ಯಾಕ್ ಸಂದಾಯವಾಗಿದೆ ಎಂದು ಗಂಭೀರ ಆಪಾದನೆ ಕೇಳಿಬಂದಿತ್ತು.ಎಸಿಬಿ ಬಳಿಕ ಲೋಕಾಯುಕ್ತ ಕ್ಲೀನ್ ಚಿಟ್:
ಈ ಬಗ್ಗೆ ಆಗಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರು ನೀಡಿದ್ದರು. ಆದರೆ ಈ ಬಗ್ಗೆ ಎಫ್‌ಐಆರ್ ದಾಖಲಿಸದ ಎಸಿಬಿ, ಅದನ್ನು ಮನವಿ ಎಂದು ಪರಿಗಣಿಸಿ ವಿಚಾರಣೆ ನಡೆಸಿ ಆರೋಪದಲ್ಲಿ ಸತ್ಯವಿಲ್ಲವೆಂದು ಹೇಳಿ ಇತ್ಯರ್ಥಗೊಳಿಸಿತ್ತು. ಎಸಿಬಿ ದೋಷಮುಕ್ತಗೊಳಿಸಿದ್ದನ್ನು ಆಕ್ಷೇಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅಬ್ರಹಾಂ ಅವರಿಂದ ಖಾಸಗಿ ದೂರು ಸಲ್ಲಿಕೆಯಾಗಿತ್ತು. ಆದರೆ ಭ್ರಷ್ಟಾಚಾರ ಕುರಿತು ಪ್ರಕರಣ ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆಯದ ಕಾರಣ ನೀಡಿ ನ್ಯಾಯಾಲಯವು ಅರ್ಜಿ ವಜಾಗೊಳಿಸಿತ್ತು. ಬಳಿಕ ಅಬ್ರಹಾಂ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್, 2022ರ ಸೆ.15 ರಂದು ಕಿಕ್ ಬ್ಯಾಕ್ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಮರುದಿನ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸೇರಿ 9 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗಿಳಿದರು.ಪ್ರಕರಣದ ತನಿಖೆ ನಡೆಸಿದ ಡಿವೈಎಸ್ಪಿ ಸತೀಶ್ ನೇತೃತ್ವದ ತಂಡ, ಕಿಕ್ ಬ್ಯಾಕ್ ಆರೋಪಕ್ಕೆ ಪೂರಕ ದಾಖಲೆಗಳನ್ನು ಶೋಧಿಸಿತ್ತು. ಅಂತಿಮವಾಗಿ ಆಪಾದನೆಗೆ ಸಾಕ್ಷ್ಯಗಳು ಸಿಗದ ಕಾರಣಕ್ಕೆ ಸುದೀರ್ಘಾವಧಿಯ ತನಿಖೆಗೆ ಶುಭಂ ಹೇಳಿ ನ್ಯಾಯಾಲಯಕ್ಕೆ ಯಡಿಯೂರಪ್ಪ ಸೇರಿ 9 ಆರೋಪಿಗಳ ವಿರುದ್ಧ ‘ಬಿ’ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಳಂಕ ಮುಕ್ತ ಆರೋಪಿಗಳ ಪಟ್ಟಿ ಹೀಗಿದೆ.ಎ1 ಬಿ.ಎಸ್.ಯಡಿಯೂರಪ್ಪ
ಎ2 ಬಿ.ವೈ.ವಿಜಯೇಂದ್ರಎ3 ಶಶಿಧರ್ ಮರಡಿ (ಬಿಎಸ್‌ವೈ ಮೊಮ್ಮಗ)
ಎ4 ಸಂಜಯ ಶ್ರೀ (ಬಿಎಸ್‌ವೈ ಸಂಬಂಧಿ)ಎ5 ಚಂದ್ರಕಾಂತ್ ರಾಮಲಿಂಗಂ (ಗುತ್ತಿಗೆದಾರ)
ಎ6 ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ಎ7 ಬಿಡಿಎ ನಿವೃತ್ತ ಆಯುಕ್ತ ಜೆ.ಸಿ.ಪ್ರಕಾಶ್
ಎ8 ಕ್ರೆಸೆಂಟ್ ರವಿ (ಮಧ್ಯವರ್ತಿ)ಎ9 ವಿರೂಪಾಕ್ಷ ಮರಡಿ (ಬಿಎಸ್‌ವೈ ಅಳಿಯ)
---ಬಿಎಸ್‌ವೈ ವಿರುದ್ಧದ ತನಿಖೆಗೆ
ಕೋರ್ಟ್‌ನಿಂದಲೂ ತಡೆಯಾಜ್ಞೆಕಿಕ್ ಬ್ಯಾಕ್ ಪ್ರಕರಣದ ಎಫ್‌ಐಆರ್ ದಾಖಲಾದ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ವಿರುದ್ಧ ತನಿಖೆಗೆ ನ್ಯಾಯಾಲಯವೂ ತಡೆಯಾಜ್ಞೆ ನೀಡಿತ್ತು. ಅದೇ ರೀತಿ ಮಾಜಿ ಸಚಿವ, ಯಶವಂತಪುರ ಕ್ಷೇತ್ರದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ತನಿಖೆಗೊಳಪಡಿಸಲು ಲೋಕಾಯುಕ್ತ ಪೊಲೀಸರಿಗೆ ಪ್ರಾಸಿಕ್ಯೂಷನ್ ಅನುಮತಿ ಸಿಗಲಿಲ್ಲ. ಇನ್ನುಳಿದಂತೆ ವಿಜಯೇಂದ್ರ, ಯಡಿಯೂರಪ್ಪ ಅಳಿಯ ವಿರೂಪಾಕ್ಷ ಮರಡಿ, ಮೊಮ್ಮಗ ಶಶಿಧರ್ ಮರಡಿ, ಸಂಬಂಧಿ ಸಂಜಯಶ್ರೀ, ಗುತ್ತಿಗೆದಾರ ರಾಮಲಿಂಗಂ ಹಾಗೂ ಕ್ರೆಸೆಂಟ್ ರವಿ ಅವರನ್ನು ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ತಮ್ಮ ಮೇಲಿನ ಆರೋಪವನ್ನು ಅವರು ನಿರಾಕರಿಸಿದ್ದರು.