ಸಂವಿಧಾನ ಬದಲಿಸಲ್ಲ ಅಂದ್ರೆ, ಬದಲಿಸ್ತೀನಿ ಎಂದ ಹೆಗಡೆ ಉಚ್ಚಾಟಿಸಿ: ಸಿಎಂ, ಡಿಸಿಎಂ

KannadaprabhaNewsNetwork |  
Published : Apr 14, 2024, 01:45 AM ISTUpdated : Apr 14, 2024, 05:35 AM IST
ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ | Kannada Prabha

ಸಾರಾಂಶ

ಡಾ। ಬಿ.ಆರ್‌. ಅಂಬೇಡ್ಕರ್‌ ಅವರೇ ಬಂದರೂ ಸಂವಿಧಾನ ರದ್ದಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

 ಮೈಸೂರು/ಬೆಂಗಳೂರು : ಡಾ। ಬಿ.ಆರ್‌. ಅಂಬೇಡ್ಕರ್‌ ಅವರೇ ಬಂದರೂ ಸಂವಿಧಾನ ರದ್ದಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಗ ಹೇಳುವವರು ಸಂವಿಧಾನ ಬದಲಿಸುವ ಹೇಳಿಕೆ ಕೊಟ್ಟಿದ್ದ ಸಂಸದ ಅನಂತ ಕುಮಾರ್‌ ಹೆಗಡೆ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಸಂವಿಧಾನ ಬದಲಿಸುತ್ತೇವೆ ಎಂದವರನ್ನು ಮೊದಲು ತಮ್ಮ ಪಕ್ಷದಿಂದ ಉಚ್ಚಾಟಿಸಲಿ ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿರಲಿಲ್ಲ. ಅನಂತ ಕುಮಾರ್ ಹೆಗಡೆ ಹಿಂದೆಯೂ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದರು. ಆಗ ಅವರು ಕೇಂದ್ರ ಸಚಿವರೂ ಆಗಿದ್ದರು. ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಹೆಗಡೆ ಉತ್ತರ ಕನ್ನಡದಲ್ಲಿ ಏನೂ ಕೆಲಸ ಮಾಡಿರಲಿಲ್ಲ. 5 ವರ್ಷ ಮನೆಯಲ್ಲೇ ಕೂತಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲಿ ಹೊರಗೆ ಬಂದಿದ್ದರು. ಇದೀಗ ಅವರ ಸೋಲು ಖಚಿತವಾದ ಕಾರಣ ಈ ಬಾರಿ ಟಿಕೆಟ್‌ ಕೊಟ್ಟಿಲ್ಲ ಅಷ್ಟೆ ಎಂದು ಹೇಳಿದರು.

ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿರಲಿಲ್ಲ. ಸಂವಿಧಾನ ಜಾರಿಯಾದಾಗ ಸಾವರ್ಕರ್ ಹಾಗೂ ಗೋಳ್ವಾಲ್ಕರ್ ಅವರು ಅದನ್ನು ವಿರೋಧಿಸಿದ್ದರು ಎಂದರು.

ಉಚ್ಚಾಟನೆ ಮಾಡಿ- ಡಿಕೆಶಿ:  ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ಪ್ರಧಾನಿ ಸಂವಿಧಾನ ಬದಲಿಸುತ್ತೇವೆ ಎಂದ ಅವರ ಪಕ್ಷದ ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿಲ್ಲ ಏಕೆ? ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಸಂವಿಧಾನ ಬದಲಿಸುತ್ತೇವೆ ಎಂದವರನ್ನು ಮೊದಲು ತಮ್ಮ ಪಕ್ಷದಿಂದ ಉಚ್ಚಾಟಿಸಲಿ ಎಂದು ಆಗ್ರಹಿಸಿದರು.ಬಿಜೆಪಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಅವರ ಪಕ್ಷದ ನಾಯಕರು, ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಇಷ್ಟು ದಿನ ಈ ವಿಚಾರವಾಗಿ ಮೌನವಾಗಿದ್ದ ಪ್ರಧಾನಿ, ಈಗ ಚುನಾವಣೆ ಬಂದಿದೆ ಎಂದು ಸಂವಿಧಾನ ಬದಲಿಸುವುದಿಲ್ಲ ಎನ್ನುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡವರು ಸೇರಿದಂತೆ ಎಲ್ಲಾ ವರ್ಗದವರು ಸಂವಿಧಾನಕ್ಕೆ ಅಪಾಯ ಬಂದಿದೆ, ನಮ್ಮ ಹಕ್ಕುಗಳಿಗೆ ಕುತ್ತು ಬಂದಿದೆ ಎಂದು ಧ್ವನಿ ಎತ್ತಿದ ನಂತರ ಈ ಹೇಳಿಕೆ ನೀಡುತ್ತಿದ್ದು, ಇದು ಕೇವಲ ರಾಜಕೀಯ ಹೇಳಿಕೆ ಎಂದು ಲೇವಡಿ ಮಾಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌
ಡಿಕೆ ರಾಜಕೀಯ ಹೋರಾಟ ಎಲ್ಲರಿಗೂ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ