ವಿಕಸಿತ ಕರ್ನಾಟಕ 2047ಕ್ಕಾಗಿ ಸಿಎಂ ಡಿಕೆ ಸಪ್ತ ಯೋಜನೆ

Published : Oct 31, 2026, 08:11 AM IST
DK Shivakumar

ಸಾರಾಂಶ

ಸಮೃದ್ಧ ಕರ್ನಾಟಕ, ಉದ್ಯಮ ಕರ್ನಾಟಕ, ಸಂಚಾರಿ ಕರ್ನಾಟಕ ಹಾಗೂ ಪ್ರತಿಭಾ ಕರ್ನಾಟಕದ ಆಶಯದೊಂದಿಗೆ ರಾಜ್ಯದ ಎಲ್ಲ ಭಾಗಗಳಿಗೂ ಸಮಾನ ಅಭಿವೃದ್ಧಿ ಅವಕಾಶ ಕಲ್ಪಿಸಲು ಏಳು ಪ್ರಮುಖ ಆದ್ಯತೆಗಳನ್ನು ಆಧರಿಸಿ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗುತ್ತಿದೆ

ಬೆಂಗಳೂರು : ಸಮೃದ್ಧ ಕರ್ನಾಟಕ, ಉದ್ಯಮ ಕರ್ನಾಟಕ, ಸಂಚಾರಿ ಕರ್ನಾಟಕ ಹಾಗೂ ಪ್ರತಿಭಾ ಕರ್ನಾಟಕದ ಆಶಯದೊಂದಿಗೆ ರಾಜ್ಯದ ಎಲ್ಲ ಭಾಗಗಳಿಗೂ ಸಮಾನ ಅಭಿವೃದ್ಧಿ ಅವಕಾಶ ಕಲ್ಪಿಸಲು ಏಳು ಪ್ರಮುಖ ಆದ್ಯತೆಗಳನ್ನು ಆಧರಿಸಿ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ‘ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047’ರ ವರದಿ ಬಿಡುಗಡೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 2047ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದನ್ನು ಈಗಲೇ ಕಲ್ಪಿಸಿಕೊಂಡು ಅದಕ್ಕೆ ಅಗತ್ಯವಾದ ಮಾರ್ಗಸೂಚಿ ಸಿದ್ಧಪಡಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ನಗರಗಳು, ಉತ್ತಮ ರಸ್ತೆಗಳು ಮತ್ತು ಉತ್ತಮ ಜೀವನಮಟ್ಟ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಯೋಜನೆ ಮುಂದಿನ ಎರಡು ದಶಕಗಳ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಮಾತ್ರ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಒದಗಿಸಲು ಸಾಧ್ಯ. ನಗರಗಳ ಬೆಳವಣಿಗೆಯಿಂದ ಪಟ್ಟಣಗಳು ಅಭಿವೃದ್ಧಿಯಾಗಬೇಕು, ಪಟ್ಟಣಗಳ ಬೆಳವಣಿಗೆಯಿಂದ ಗ್ರಾಮೀಣ ಬದುಕು ಸಮೃದ್ಧವಾಗಬೇಕು. ಇದು ನಮ್ಮ ಅಭಿವೃದ್ಧಿಯ ಚಿಂತನೆ ಎಂದು ಹೇಳಿದರು.

ರಾಜ್ಯದ ಜನಸಂಖ್ಯೆ ಪ್ರಸ್ತುತ ಸುಮಾರು 6.9 ಕೋಟಿ

ರಾಜ್ಯದ ಜನಸಂಖ್ಯೆ ಪ್ರಸ್ತುತ ಸುಮಾರು 6.9 ಕೋಟಿ ಇದ್ದು, 2047ರ ವೇಳೆಗೆ 7.7ರಿಂದ 7.8 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ರಾಜ್ಯದ ಜನಸಂಖ್ಯೆಯಲ್ಲಿ ಶೇ.46ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2047ರ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗುವ ಅಂದಾಜಿದೆ. ಈ ಬದಲಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಗರಗಳ ಮೇಲೆ ಒತ್ತಡ ಹೆಚ್ಚಾಗಲಿದೆ ಎಂಬ ಹಿನ್ನೆಲೆಯಲ್ಲಿ ಸಮಗ್ರ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಹಳ್ಳಿಗಳಿಂದ ಜನರು ನಗರಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಸಲುವಾಗಿ ಬರುತ್ತಾರೆ. ಎಲ್ಲರೂ ಬೆಂಗಳೂರಿಗೆ ಬಂದರೆ ನಗರದ ಜನಸಂಖ್ಯೆ ಹೆಚ್ಚುತ್ತದೆ. ಅದರೊಂದಿಗೆ ಸಮಸ್ಯೆಗಳೂ ಹೆಚ್ಚುತ್ತವೆ. ಹೀಗಾಗಿ ಜನರು ತಮ್ಮ ಊರು, ತಾಲೂಕು ಮತ್ತು ಜಿಲ್ಲೆಗಳಲ್ಲಿಯೇ ಉದ್ಯೋಗ ಪಡೆಯುವ ವಾತಾವರಣ ನಿರ್ಮಿಸಬೇಕು. ಬೆಂಗಳೂರು ಮತ್ತು ನಗರ ಪ್ರದೇಶಗಳು ಆರ್ಥಿಕವಾಗಿ ಬೆಳೆಯುವುದರಿಂದ ಇಡೀ ರಾಜ್ಯಕ್ಕೆ ಅನುಕೂಲವಾಗಬೇಕು. ನಗರಗಳ ಮೂಲಕ ಬರುವ ಆದಾಯವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಸಬೇಕಾಗುತ್ತದೆ. ನಗರ ಪ್ರದೇಶದ ಜನರು ತಾವು ತೆರಿಗೆ ಕಟ್ಟುತ್ತಿದ್ದೇವೆ, ನಮಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಎಂದು ಕೇಳುವುದು ಸಹಜ. ಐಟಿ, ಬಿಟಿ ಸೇರಿದಂತೆ ವಿವಿಧ ಉದ್ಯಮಗಳ ಅಗತ್ಯಗಳನ್ನೂ ಗಮನದಲ್ಲಿಟ್ಟುಕೊಂಡು ಸಮತೋಲಿತ ಅಭಿವೃದ್ಧಿ ಸಾಧಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.

ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್‌.ಕೆ. ಅತೀಕ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

7 ಪ್ರಮುಖ ವಲಯ ಆಧರಿಸಿ ಯೋಜನೆ

1. ಉದ್ಯಮ ಕರ್ನಾಟಕ: ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿ.

2. ಸೇವಾ ಉನ್ನತಿ ಕರ್ನಾಟಕ: ಗುಣಮಟ್ಟದ ಸೇವೆಗಳು ಹಾಗೂ ಮೂಲಸೌಕರ್ಯ ವಿಸ್ತರಣೆ.

3. ಸಂಚಾರ ಕರ್ನಾಟಕ: ಸುಧಾರಿತ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ.

4. ಪರಿಸರ ಕರ್ನಾಟಕ: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ನಗರಾಭಿವೃದ್ಧಿ.

5. ಪ್ರತಿಭಾ ಕರ್ನಾಟಕ: ಶಿಕ್ಷಣ, ಕೌಶಲ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ.

6. ಸಮೃದ್ಧಿ ಕರ್ನಾಟಕ: ಎಲ್ಲ ಪ್ರದೇಶಗಳ ಸಮಗ್ರ ಆರ್ಥಿಕ ಬೆಳವಣಿಗೆ.

7. ಡಿಜಿಟಲ್ ಕರ್ನಾಟಕ: ತಂತ್ರಜ್ಞಾನ ಆಧಾರಿತ ಆಡಳಿತ ಮತ್ತು ಸೇವೆಗಳ ವಿಸ್ತರಣೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಎಚ್‌ಡಿಕೆ ದಿಲ್ಲಿ ಮನೇಲಿ ಪೊಲೀಸರ ಮಹಜರ್‌!
ಸಿದ್ದು ಸ್ಟಿಂಗ್‌ ಕಟ್ಟುಕತೆ - ಮಾಜಿ ಸಿಎಂಗೆ ಸೈಬರ್‌ ಕ್ರೈಂ ಪೊಲೀಸ್‌ ಕ್ಲೀನ್‌ಚಿಟ್‌