;Resize=(412,232))
ಸೋರಿಯಾಸಿಸ್ ಸಾಂಕ್ರಾಮಿಕವಲ್ಲ. ಇದು ಆನುವಂಶಿಕ ಪ್ರವೃತ್ತಿ ಮತ್ತು ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಉರಿಯೂತದ ಕಾಯಿಲೆ. ಇದು ಕೇವಲ ಚರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ವ್ಯಕ್ತಿಯ ಭಾವನಾತ್ಮಕ ಮತ್ತು ಸಾಮಾಜಿಕ ಜೀವನದ ಮೇಲೆಯೂ ಆಳವಾದ ಪರಿಣಾಮ ಬೀರುತ್ತದೆ. ಈ ಕಾಯಿಲೆಯಿಂದ ಬಳಲುವವರು ಆತಂಕ, ಆತ್ಮವಿಶ್ವಾಸದ ಕೊರತೆ, ಖಿನ್ನತೆಯಿಂದ ಬಳಲುತ್ತಾರೆ.
ತ್ವಚೆಯಿಂದಾಚೆ ನೋಡಿರಣ್ಣ
ಕಡೆಗಣಿಸದಿರಿ ಎನ್ನ
ಅದೊಂದು ಮಧ್ಯಾಹ್ನ ಬಿಸಿಲು ಪ್ರಖರವಾಗಿತ್ತು. ಸುಮಾರು ಇಪ್ಪತೈದು ವಯಸ್ಸಿನ ಯುವತಿ ತನ್ನ ತಾಯಿಯೊಂದಿಗೆ ನಮ್ಮ ಆಸ್ಪತ್ರೆಗೆ ಬಂದಿದ್ದಳು. ಅವರಿಬ್ಬರ ಮುಖದಲ್ಲಿ ಆತಂಕದ ಕಾರ್ಮೋಡಗಳ ಛಾಯೆ ಕಂಡು ಬಂತು. ಅವರಿಬ್ಬರನ್ನು ಪರೀಕ್ಷಾ ಕೋಣೆಗೆ ಕರೆದೊಯ್ದು ಮಾತಿಗೆಳೆದೆ. ಚಿಕಿತ್ಸೆಗೆಂದು ಬಂದಿದ್ದ ಆ ಯುವತಿಯ ಕೈ, ಕಾಲು, ಬೆನ್ನು ಹೊಟ್ಟೆಯ ಭಾಗಗಳನ್ನು ಪರೀಕ್ಷೆ ಮಾಡಲಾಗಿ ಅವಳು ಸೋರಿಯಾಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ಕಂಡು ಬಂತು. ದೇಹದ ಮೇಲೆ ವಾಸಿಯಾಗದ ಮಚ್ಚೆಯಂತಹ ಕಲೆಗಳಿಂದ ಅವಳು ಅಧೀರಳಾಗಿದ್ದಳು .
ಸೋರಿಯಾಸಿಸ್ ಎಂದರೇನು?
ಸೋರಿಯಾಸಿಸ್ ಚರ್ಮ, ನೆತ್ತಿ, ಉಗುರುಗಳು ಮತ್ತು ಕೀಲುಗಳ ಮೇಲೆ ಪರಿಣಾಮ ಬೀರುವ ದೀರ್ಘಕಾಲೀನ (chronic) ಉರಿಯೂತದ (inflammatory )ಕಾಯಿಲೆಯಾಗಿದೆ. ಇದು ರೋಗನಿರೋಧಕ ವ್ಯವಸ್ಥೆಯಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದೆ. ಈ ಕಾಯಿಲೆಯಲ್ಲಿ ಚರ್ಮದ ಮೇಲಿನ ಪದರದ ಕೋಶಗಳು ಸಾಮಾನ್ಯಕ್ಕಿಂತ ವೇಗವಾಗಿ ವೃದ್ಧಿಯಾಗುವುದರಿಂದ ಚರ್ಮದ ಮೇಲೆ ದಪ್ಪವಾದ, ಕೆಂಪು ಬಣ್ಣ ಹಾಗೂ ಬೆಳ್ಳಿ ಬಣ್ಣದ ಪದರಗಳಿಂದ ಕೂಡಿದ ತೇಪೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ತುರಿಕೆ ಉಂಟಾಗಬಹುದು ಮತ್ತು ಕೆರೆದುಕೊಂಡಾಗ ರಕ್ತಸ್ರಾವವಾಗುತ್ತದೆ .
ಸಾಮಾನ್ಯವಾಗಿ ಮೊಣಕೈ, ಮೊಣಕಾಲು, ಬೆನ್ನು, ಹೊಟ್ಟೆ, ತಲೆಬುರುಡೆಯ ಚರ್ಮ, ಅಂಗೈ ಮತ್ತು ಅಂಗಾಲುಗಳಲ್ಲಿ ಈ ತೇಪೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ದೇಹದಾದ್ಯಂತವೂ ಹರಡಬಹುದು.
ಉಗುರುಗಳ ಮೇಲೆ ಸಣ್ಣ ಸಣ್ಣ ಗುಳಿಗಳು, ಉಗುರಿನ ದಪ್ಪ ಹೆಚ್ಚಾಗುವುದು ಮತ್ತು ಉಗುರಿನ ಬಣ್ಣದಲ್ಲಿ ಬದಲಾವಣೆಗಳು ಕಂಡುಬರಬಹುದು. ಕೀಲುಗಳಿಗೂ ಈ ಕಾಯಿಲೆ ತಗುಲಿದಾಗ ಅದನ್ನು ಸೋರಿಯಾಟಿಕ್ ಆರ್ಥ್ರೈಟಿಸ್ ಎಂದು ಕರೆಯಲಾಗುತ್ತದೆ. ಇದು ಬೆನ್ನುಮೂಳೆ ಹಾಗೂ ಕೈಕಾಲುಗಳ ಸಣ್ಣ ಕೀಲುಗಳ ಮೇಲೆ ಪರಿಣಾಮ ಬೀರಿ, ಇದರಿಂದ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತ ಉಂಟಾಗುತ್ತದೆ .
ಮಾನಸಿಕ, ಸಾಮಾಜಿಕ ಪರಿಣಾಮಗಳು
ಸೋರಿಯಾಸಿಸ್ ಕೇವಲ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಲ್ಲ. ಇದು ವ್ಯಕ್ತಿಯ ಭಾವನಾತ್ಮಕ ಮತ್ತು ಸಾಮಾಜಿಕ ಜೀವನದ ಮೇಲೆಯೂ ಆಳವಾದ ಪರಿಣಾಮ ಬೀರುತ್ತದೆ. ಈ ಕಾಯಿಲೆಯಿಂದ ಬಳಲುವವರು ಆತಂಕ, ಆತ್ಮವಿಶ್ವಾಸದ ಕೊರತೆ, ಖಿನ್ನತೆ, ತಾರತಮ್ಯ ಮತ್ತು ಸಾಮಾಜಿಕವಾಗಿ ದೂರ ಉಳಿಯುವಂತಹ ಸಮಸ್ಯೆಗಳನ್ನು ಎದುರಿಸಬಹುದು.
ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಈ ಸಮಸ್ಯೆಗಳು ಹೆಚ್ಚು ಸಂಕೀರ್ಣವಾಗಿರಬಹುದು. ಸಹಪಾಠಿಗಳ ಅನಗತ್ಯ ಗಮನ, ಅಪಹಾಸ್ಯ ಮತ್ತು ತಪ್ಪು ಕಲ್ಪನೆಗಳು ಅವರ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ಇದರಿಂದ ಶಾಲಾ ಚಟುವಟಿಕೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ಕಡಿಮೆಯಾಗಬಹುದು.
ಸೋರಿಯಾಸಿಸ್ ಇರುವವರು ತಮ್ಮ ಕಾಯಿಲೆಯ ಬಗ್ಗೆ ಪದೇಪದೇ ಇತರರಿಗೆ ವಿವರಿಸಬೇಕಾದ ಪರಿಸ್ಥಿತಿ ಎದುರಿಸಬಹುದು. ಕೆಲವರು ಈ ಕಾಯಿಲೆ ಸಾಂಕ್ರಾಮಿಕವೆಂದು ತಪ್ಪಾಗಿ ಭಾವಿಸಿ ಅವರಿಂದ ದೂರ ಉಳಿಯುತ್ತಾರೆ. ಇಂತಹ ತಪ್ಪು ಕಲ್ಪನೆಗಳು ಅವರ ಜೀವನದ ಗುಣಮಟ್ಟವನ್ನು ಮತ್ತಷ್ಟು ಕುಗ್ಗಿಸುತ್ತವೆ.
ಸೋರಿಯಾಸಿಸ್ ಸಾಂಕ್ರಾಮಿಕವೇ?
ಇಲ್ಲ. ಸೋರಿಯಾಸಿಸ್ ಸಾಂಕ್ರಾಮಿಕ ಕಾಯಿಲೆಯಲ್ಲ.
ಇದು ಆನುವಂಶಿಕ (genetically determined) ಪ್ರವೃತ್ತಿ ಮತ್ತು ರೋಗನಿರೋಧಕ (autoimmune) ವ್ಯವಸ್ಥೆಗೆ ಸಂಬಂಧಿಸಿದ ಉರಿಯೂತದ ಕಾಯಿಲೆಯಾಗಿದೆ. ಸ್ಪರ್ಶಿಸುವುದರಿಂದ, ಒಟ್ಟಿಗೆ ಊಟ ಮಾಡುವುದರಿಂದ, ಬಟ್ಟೆ ಹಂಚಿಕೊಳ್ಳುವುದರಿಂದ, ಕೈಕುಲುಕುವುದರಿಂದ ಅಥವಾ ಒಟ್ಟಿಗೆ ವಾಸಿಸುವುದರಿಂದ ಈ ಕಾಯಿಲೆ ಹರಡುವುದಿಲ್ಲ. ಇದು ಸ್ವಚ್ಛತೆಯ ಕೊರತೆಯಿಂದಲೂ ಉಂಟಾಗುವುದಿಲ್ಲ.
ಆದ್ದರಿಂದ ಸೋರಿಯಾಸಿಸ್ ಇರುವವರನ್ನು ದೂರವಿಡುವುದು ಅಥವಾ ಅವರೊಂದಿಗೆ ತಾರತಮ್ಯ ಮಾಡುವುದು ಸಂಪೂರ್ಣವಾಗಿ ತಪ್ಪು. ಅವರಿಗೆ ಪ್ರೀತಿ, ಕಾಳಜಿ, ಸಹಾನುಭೂತಿ ಮತ್ತು ಗೌರವ ದೊರೆಯಬೇಕು.
ಸೋರಿಯಾಸಿಸ್ಗೆ ಕಾರಣಗಳೇನು?
ಸೋರಿಯಾಸಿಸ್ ಉಂಟಾಗುವ ನಿಖರವಾದ ಕಾರಣ ಸಂಪೂರ್ಣವಾಗಿ ತಿಳಿದಿಲ್ಲ. ಪ್ರಸ್ತುತ ತಿಳುವಳಿಕೆಯ ಪ್ರಕಾರ, ಆನುವಂಶಿಕ ಪ್ರವೃತ್ತಿ, ರೋಗನಿರೋಧಕ ವ್ಯವಸ್ಥೆಯಲ್ಲಿನ ಬದಲಾವಣೆಗಳು ಮತ್ತು ಪರಿಸರದ ವಿವಿಧ ಅಂಶಗಳು ಈ ಕಾಯಿಲೆಯ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ.
ಕೆಲವು ಸಾಮಾನ್ಯ ಅಂಶಗಳು:
ಮಾನಸಿಕ ಒತ್ತಡ
ನಿದ್ರೆಯ ಕೊರತೆ
ಕೆಲವು ಸೋಂಕುಗಳು
ಚರ್ಮಕ್ಕೆ ಆಗುವ ಗಾಯಗಳು
ಧೂಮಪಾನ
ಅತಿಯಾದ ಮದ್ಯಪಾನ
ಹವಾಮಾನದಲ್ಲಿನ ಬದಲಾವಣೆಗಳು
ಬೊಜ್ಜು
* ಹೃದಯರಕ್ತನಾಳದ ಕಾಯಿಲೆಗಳು ಮತ್ತು ಚಯಾಪಚಯ ಸಂಬಂಧಿತ ಸಮಸ್ಯೆಗಳು
ಕೆಲವು ಔಷಧಿಗಳೂ ಸೋರಿಯಾಸಿಸ್ನ ಲಕ್ಷಣಗಳನ್ನು ಉಲ್ಬಣಗೊಳಿಸಬಹುದು.
ಸೋರಿಯಾಸಿಸ್ ಗುಣಪಡಿಸಬಹುದೇ?
ಸೋರಿಯಾಸಿಸ್ಗೆ ಸದ್ಯಕ್ಕೆ ಶಾಶ್ವತವಾದ ಗುಣಪಡಿಸುವ ಚಿಕಿತ್ಸೆ ಇಲ್ಲ. ಆದರೆ ಸೂಕ್ತ ಚಿಕಿತ್ಸೆಯಿಂದ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.ಆರಂಭದಲ್ಲೇ ಕಾಯಿಲೆಯನ್ನು ಗುರುತಿಸುವುದು, ನಿಯಮಿತವಾಗಿ ಚರ್ಮರೋಗ ತಜ್ಞರನ್ನು ಭೇಟಿಯಾಗುವುದು ಮತ್ತು ಅಗತ್ಯವಿದ್ದಲ್ಲಿ ಮಾನಸಿಕ ಬೆಂಬಲ ಪಡೆಯುವುದು ಬಹಳ ಮುಖ್ಯ.
ಚಿಕಿತ್ಸೆಯು ಕಾಯಿಲೆಯ ವಿಧ, ತೀವ್ರತೆ ಮತ್ತು ದೇಹದ ಯಾವ ಭಾಗದಲ್ಲಿ ಕಾಣಿಸಿಕೊಂಡಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸೌಮ್ಯ ಸ್ವರೂಪದ ಸೋರಿಯಾಸಿಸ್ಗೆ ವೈದ್ಯರು ಸೂಚಿಸುವ ಕ್ರೀಮ್ಗಳು ಅಥವಾ ಮುಲಾಮುಗಳು ಸಾಕಾಗಬಹುದು. ಹೆಚ್ಚು ವ್ಯಾಪಕವಾದ ಅಥವಾ ತೀವ್ರವಾದ ಕಾಯಿಲೆಗೆ ಫೋಟೋಥೆರಪಿ , ಬಾಯಿಯ ಮೂಲಕ ಸೇವಿಸುವ ಔಷಧಿಗಳು ಅಥವಾ ಇಂಜೆಕ್ಷನ್ ಮೂಲಕ ನೀಡುವ ಔಷಧಿಗಳು ಬೇಕಾಗಬಹುದು.
ಪ್ರತಿಯೊಬ್ಬ ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಚರ್ಮರೋಗ ತಜ್ಞರು ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ.
ಸೋರಿಯಾಸಿಸ್ ಇರುವವರು ದಿನನಿತ್ಯ ಅನುಸರಿಸಬಹುದಾದ ಸರಳ ಕ್ರಮಗಳು
1.ನಿಯಮಿತವಾಗಿ ಮಾಯಿಶ್ಚರೈಸರ್ ಬಳಸಿ: ಸುಗಂಧವಿಲ್ಲದ ಮಾಯಿಶ್ಚರೈಸರ್, ಸಾಮಾನ್ಯ ಪೆಟ್ರೋಲಿಯಂ ಜೆಲ್ಲಿ ಅಥವಾ ಶುದ್ಧ ತೆಂಗಿನೆಣ್ಣೆಯನ್ನು ಬಳಸಬಹುದು. ವಿಶೇಷವಾಗಿ ಸ್ನಾನದ ನಂತರ ಹಚ್ಚುವುದು ಉತ್ತಮ.
2. ಹಗುರ ಸ್ನಾನ : ಉಗುರುಬೆಚ್ಚಗಿನ ನೀರು ಮತ್ತು ಮೃದುವಾದ ಸಾಬೂನು ಅಥವಾ ಕ್ಲೆನ್ಸರ್ ಬಳಸಿ. ಅತಿಯಾದ ಬಿಸಿ ನೀರು, ಕಠಿಣ ಸಾಬೂನುಗಳು, ಪ್ಯೂಮಿಕ್ ಕಲ್ಲು ಮತ್ತು ಲೂಫಾದಿಂದ ಜೋರಾಗಿ ಉಜ್ಜುವುದನ್ನು ತಪ್ಪಿಸಿ. ಇವು ಚರ್ಮದ ಕಿರಿಕಿರಿಯನ್ನು ಹೆಚ್ಚಿಸಬಹುದು.
3. ಚರ್ಮದ ಮಡಿಕೆಗಳನ್ನು ಒಣವಾಗಿಡಿ: ಸ್ನಾನ ಮಾಡಿದ ನಂತರ ಅಥವಾ ಬೆವರು ಬಂದಾಗ ಕಂಕುಳ, ತೊಡೆಸಂದು ಮತ್ತು ಸ್ತನಗಳ ಕೆಳಭಾಗದಂತಹ ಮಡಿಕೆಗಳನ್ನು ಮೃದುವಾಗಿ ಒರೆಸಿ ಒಣಗಿಸಿಕೊಳ್ಳಿ.
4. ಆರಾಮದಾಯಕ ಬಟ್ಟೆಗಳನ್ನು ಧರಿಸಿ: ಗಾಳಿಯಾಡುವ ಹತ್ತಿ ಬಟ್ಟೆಗಳು ಚರ್ಮದ ಮೇಲಿನ ಘರ್ಷಣೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
5. ಚರ್ಮವನ್ನು ಕೆರೆದುಕೊಳ್ಳಬೇಡಿ: ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ತುರಿಕೆ ಕಡಿಮೆ ಮಾಡಲು ಮಾಯಿಶ್ಚರೈಸರ್ ಅಥವಾ ತಂಪಾದ ಒದ್ದೆ ಬಟ್ಟೆಯ ಪಟ್ಟಿಯನ್ನು ಬಳಸಬಹುದು. ಚರ್ಮವನ್ನು ಕೆರೆದುಕೊಳ್ಳುವುದು ಅಥವಾ ಗಾಯಗೊಳಿಸುವುದು ಹೊಸ ತೇಪೆಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು.
6. ಮಾನಸಿಕ ಒತ್ತಡವನ್ನು ನಿಯಂತ್ರಿಸಿ: ನಿಯಮಿತ ವ್ಯಾಯಾಮ, ಯೋಗ, ಧ್ಯಾನ ಮತ್ತು ಸಾಕಷ್ಟು ನಿದ್ರೆ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒತ್ತಡವು ಕೆಲವು ವ್ಯಕ್ತಿಗಳಲ್ಲಿ ಕಾಯಿಲೆಯ ಉಲ್ಬಣಕ್ಕೆ ಕಾರಣವಾಗಬಹುದು.
7. ಸಮತೋಲಿತ ಆಹಾರ ಸೇವಿಸಿ: ತರಕಾರಿಗಳು, ಹಣ್ಣುಗಳು, ಸಂಪೂರ್ಣ ಧಾನ್ಯಗಳು, ಬೇಳೆಕಾಳುಗಳು, ಬೀಜಗಳು ಮತ್ತು ಇತರ ಪೌಷ್ಟಿಕ ಆಹಾರಗಳನ್ನು ಸೇವಿಸಿ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯಕ್ಕೆ ಮತ್ತು ಸೋರಿಯಾಸಿಸ್ ನಿರ್ವಹಣೆಗೆ ಸಹಾಯಕವಾಗಿದೆ.
8. ಸೂರ್ಯನ ಬೆಳಕಿನ ಬಗ್ಗೆ ಎಚ್ಚರಿಕೆ ವಹಿಸಿ: ಕೆಲವು ರೋಗಿಗಳಲ್ಲಿ ಮಿತವಾದ ಸೂರ್ಯನ ಬೆಳಕು ಪ್ರಯೋಜನಕಾರಿಯಾಗಬಹುದು. ಆದರೆ ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರುವುದನ್ನು ಮತ್ತು ವೈದ್ಯರ ಸಲಹೆಯಿಲ್ಲದೆ ಮನೆಯಲ್ಲಿ ಯುವಿ (UV) ಬೆಳಕಿನ ಚಿಕಿತ್ಸೆಯನ್ನು ಪ್ರಯತ್ನಿಸುವುದನ್ನು ತಪ್ಪಿಸಬೇಕು. ಬಿಸಿಲಿನಿಂದ ಚರ್ಮ ಸುಡುವುದು ಕಾಯಿಲೆಯನ್ನು ಉಲ್ಬಣಗೊಳಿಸಬಹುದು.
ಈ ತಪ್ಪುಗಳನ್ನು ಮಾಡಬೇಡಿ:
* ವಿಶೇಷವಾಗಿ ಮುಖ ಮತ್ತು ಚರ್ಮದ ಮಡಿಕೆಗಳ ಮೇಲೆ ವೈದ್ಯರ ಸಲಹೆಯಿಲ್ಲದೆ ಸ್ಟಿರಾಯ್ಡ್ಗಳ ಮಿಶ್ರಣವಿರುವ ಕ್ರೀಮ್ಗಳನ್ನು ಬಳಸಬೇಡಿ. ಇವುಗಳ ತಪ್ಪಾದ ಬಳಕೆಯಿಂದ ಚರ್ಮ ತೆಳುವಾಗುವುದು ಸೇರಿದಂತೆ ಹಲವು ತೊಂದರೆಗಳು ಉಂಟಾಗಬಹುದು.
* ನಿಂಬೆರಸ, ದುರ್ಬಲಗೊಳಿಸದ ಎಸೆನ್ಷಿಯಲ್ ಎಣ್ಣೆಗಳು, ಗಿಡಮೂಲಿಕೆಗಳ ಮಿಶ್ರಣ ಅಥವಾ ಇತರ ಕಠಿಣ ಪದಾರ್ಥಗಳನ್ನು ಪೀಡಿತ ಚರ್ಮದ ಮೇಲೆ ಹಚ್ಚಬೇಡಿ.
* ಚರ್ಮದ ಮೇಲಿನ ಪದರಗಳನ್ನು ಬಲವಂತವಾಗಿ ಕೆರೆದು ಅಥವಾ ಉಜ್ಜಿ ತೆಗೆಯಲು ಪ್ರಯತ್ನಿಸಬೇಡಿ.
ಚರ್ಮದ ಮೇಲೆ ದೀರ್ಘಕಾಲ ಉಳಿಯುವ ತೇಪೆಗಳು ಅಥವಾ ಮರುಕಳಿಸುವ ಚರ್ಮದ ಸಮಸ್ಯೆಗಳು ಕಂಡುಬಂದರೆ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಶೀಘ್ರದಲ್ಲೇ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಕಾಯಿಲೆಯ ತೀವ್ರತೆಯನ್ನು ನಿಯಂತ್ರಿಸಲು ಮತ್ತು ಸಂಭವನೀಯ ತೊಂದರೆಗಳನ್ನು ತಡೆಯಲು ಸಹಾಯವಾಗುತ್ತದೆ.
ಪ್ರತಿ ವರ್ಷ ಅಕ್ಟೋಬರ್ 29ರಂದು ಸೋರಿಯಾಸಿಸ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸೋರಿಯಾಸಿಸ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ Look Beyond My Skin ಅಂದರೆ ನನ್ನ ಚರ್ಮದಾಚೆಗಿನ ವ್ಯಕ್ತಿತ್ವವನ್ನು ಗುರುತಿಸಿ,
ವ್ಯಕ್ತಿಯ ಗುರುತು, ಸಾಮರ್ಥ್ಯಗಳು ಮತ್ತು ಕನಸುಗಳನ್ನು ಅವರ ಚರ್ಮದ ಕಾಯಿಲೆಯ ಆಧಾರದ ಮೇಲೆ ನಿರ್ಧರಿಸಬಾರದು ಎಂಬುದನ್ನು ಈ ಘೋಷವಾಕ್ಯ ನೆನಪಿಸುತ್ತದೆ.
ಸೋರಿಯಾಸಿಸ್ ಇರುವವರು ಸಮಾಜದಲ್ಲಿ ಗೌರವದಿಂದ ಮತ್ತು ಆತ್ಮವಿಶ್ವಾಸದಿಂದ ಬದುಕಲು ಕುಟುಂಬಗಳು, ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಆರೋಗ್ಯ ವೃತ್ತಿಪರರು ಸಹಕರಿಸಬೇಕು. ಅವರನ್ನು ತೀರ್ಪು ಮಾಡುವ ಬದಲು ಸ್ವೀಕರಿಸುವ ಮತ್ತು ಬೆಂಬಲಿಸುವ ವಾತಾವರಣವನ್ನು ನಿರ್ಮಿಸಬೇಕು.
ಈ ವಿಶ್ವ ಸೋರಿಯಾಸಿಸ್ ದಿನದಂದು ಜಾಗೃತಿಯು ಕೇವಲ ಮಾಹಿತಿಗೆ ಸೀಮಿತವಾಗದೆ, ಸಹಾನುಭೂತಿ, ಸಮಾನತೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸೂಕ್ತ ವೈದ್ಯಕೀಯ ಆರೈಕೆಯ ರೂಪದಲ್ಲಿ ವ್ಯಕ್ತವಾಗಲಿ. ನಮ್ಮಲ್ಲಿನ ಒಂದು ಸಣ್ಣ ಅರ್ಥಪೂರ್ಣ ನಡೆ ಕೂಡ ಸೋರಿಯಾಸಿಸ್ನಿಂದ ಬಳಲುತ್ತಿರುವ ವ್ಯಕ್ತಿಯ ಮನಸ್ಸಿನಲ್ಲಿರುವ ನೋವನ್ನು ಕಡಿಮೆ ಮಾಡಿ, ಅವರ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನೆರವಾಗಲಿ ಎಂಬುದೆ ಹಾರೈಕೆ.