ಸಿಎಂ ಪುತ್ರನ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ

Published : Oct 24, 2025, 06:15 AM IST
 Yathindra Siddaramaiah

ಸಾರಾಂಶ

ಸಿದ್ದರಾಮಯ್ಯನವರ ಸ್ಥಾನ ತುಂಬುವ ಶಕ್ತಿ ಜಾರಕಿಹೊಳಿ ಅವರಿಗೆ ಇದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅವರೇ ಮುನ್ನಡೆಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

  ಬೆಳಗಾವಿ :  ‘ನನ್ನ ತಂದೆ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾ ಕಾಲದಲ್ಲಿದ್ದಾರೆ. ರಾಜಕೀಯ ಬದುಕಿನ ಕೊನೆ ಘಟ್ಟದಲ್ಲಿ ಇದ್ದಾರೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಸತೀಶ್‌ ಜಾರಕಿಹೊಳಿ ಕೂಡ ಅದೇ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯನವರ ಸ್ಥಾನ ತುಂಬುವ ಶಕ್ತಿ ಜಾರಕಿಹೊಳಿ ಅವರಿಗೆ ಇದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅವರೇ ಮುನ್ನಡೆಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಯತೀಂದ್ರ, ಸಿದ್ದರಾಮಯ್ಯನವರು 2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪಕ್ಷದಲ್ಲಿ ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತ ಇಟ್ಟುಕೊಂಡಿರುವ ಎಷ್ಟೋ ಜ‌ನ ನಾಯಕರಿದ್ದಾರೆ. ಅವರೆಲ್ಲರನ್ನೂ ಸತೀಶ ಜಾರಕಿಹೊಳಿ‌ಯವರು ಮುನ್ನಡೆಸಲಿ. 2028ರ ನಂತರ ಆ ರೀತಿ ಲೀಡ್ ಮಾಡೋರು ಬೇಕು ಎಂದರು.

ಪ್ರಗತಿಪರ ಚಿಂತನೆ ಹೊಂದಿರುವವರಿಗೆ ಪ್ರಸ್ತುತ ಸೈದ್ಧಾಂತಿಕವಾಗಿ ಮಾರ್ಗದರ್ಶನ ಮಾಡಲು ಮತ್ತು ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ. ಜಾರಕಿಹೊಳಿಯವರು ಈ ಜವಾಬ್ದಾರಿ ತೆಗೆದುಕೊಳ್ಳಲು ಸಮರ್ಥರು. ಕಾಂಗ್ರೆಸ್‌ ಸಿದ್ಧಾಂತದಲ್ಲಿ ನಂಬಿಕೆ ಇರುವ ನಾಯಕರಿಗೆ ಮತ್ತು ಯುವಕರಿಗೆ ಅವರು ಮಾದರಿ ಎಂದರು.

ತಮ್ಮ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದ ಬೆನ್ನಲ್ಲೇ ಬೆಳಗಾವಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಯತೀಂದ್ರ, ಕೊನೆ ದಿನ ಎಂದರೆ ನಾಳೆಯೇ ಕೊನೆಯ ದಿನ ಎಂದಲ್ಲ. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದೇನೆ. ಸೈದ್ಧಾಂತಿಕ ರಾಜಕಾರಣ ಮಾಡುವುದರಲ್ಲಿ ಸತೀಶ್ ಜಾರಕಿಹೊಳಿ‌ ಕೂಡ ಒಬ್ಬರು. ಆ ರೀತಿ ಸಿದ್ಧಾಂತ ಇಟ್ಟುಕೊಂಡವರಿಗೆ ಸತೀಶ್ ಜಾರಕಿಹೊಳಿ‌ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು.

ಅಂದರೆ, ಸಿದ್ದು ಮುಂದಿನ ರಾಜಕೀಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ‌ ಎಂಬುದು ತಮ್ಮ ಹೇಳಿಕೆಯ ಅರ್ಥವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ‘ನಾನು ರಾಜಕೀಯ ಉತ್ತರಾಧಿಕಾರಿ ಬಗ್ಗೆ ಮಾತನಾಡಿಲ್ಲ. ಆದರೆ, ಆ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರನ್ನು ಲೀಡ್ ಮಾಡಲಿ ಎನ್ನುವ ಉದ್ದೇಶ ಇಟ್ಟುಕೊಂಡು ಹೇಳಿದ್ದೇನೆ’ ಎಂದು ಹೇಳಿದರು.

ನವೆಂಬರ್ ಕ್ರಾಂತಿ ಬಗ್ಗೆ ಪ್ರತಿಕ್ರಿಯಿಸಿ, ನವೆಂಬರ್‌ ಕ್ರಾಂತಿ ಬರೀ ಊಹಾಪೋಹ. ಯಾವುದೇ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ‌. ಈ ರೀತಿಯ ಚರ್ಚೆಯೇ ಪಕ್ಷದಲ್ಲಿ ನಡೆದಿಲ್ಲ. ಸಿಎಂ ಆಗುವ ಅರ್ಹತೆ ಇರುವವರು ಪಕ್ಷದಲ್ಲಿ ಹಲವು ನಾಯಕರಿದ್ದಾರೆ. ಈ ಬಗ್ಗೆ ಪಕ್ಷದ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯನವರನ್ನು ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್‌ಗೆ ಖಂಡಿತಾ ಇದೆ. ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿಯಾದ ಬಳಿಕ ಆ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿ‌ಗೆ ಇದೆ ಎಂದರು.

ಸೈದ್ಧಾಂತಿಕ ಹೇಳಿಕೆ,  ಸಿಎಂ ಹುದ್ದೆ ದೃಷ್ಟಿಯಲ್ಲಿ ಇಟ್ಟು ಹೇಳಿಲ್ಲ: ಡಾ। ಪರಂ

ಬೆಂಗಳೂರು: ಸೈದ್ಧಾಂತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾರಿಯಲ್ಲೇ ಸತೀಶ್‌ ಜಾರಕಿಹೊಳಿ ಹೋಗುತ್ತಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಸತೀಶ್ ಜಾರಕಿಹೊಳಿ ಅವರು ಈ ಹಿಂದೆ ಅಹಿಂದ ಚಳವಳಿಯಲ್ಲಿದ್ದರು. ಅವರಿಗೆ ಆ ಬದ್ಧತೆ ಇದೆ ಎಂದು ಯತೀಂದ್ರ ಅವರು ಹೇಳಿರಬಹುದು. ಮುಖ್ಯಮಂತ್ರಿ ಹುದ್ದೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರು ಹೇಳಿಲ್ಲ. ಇದಕ್ಕೆ ಪ್ರತ್ಯೇಕ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಡಾ। ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ವ್ಯಕ್ತಿಗಿಂತ ಪಕ್ಷ ಮುಖ್ಯ,  ಪಕ್ಷ ಪೂಜೆ ಮಾಡಿ

ಯತೀಂದ್ರ ಏನು ಹೇಳಿದ್ದಾರೋ ಆ ಬಗ್ಗೆ ಅವರನ್ನೇ ಕೇಳಿ. ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಬೇಕು.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ಜಾರಕಿಹೊಳಿಗೆ ಸಿಎಂ ಆಗುವ ಅರ್ಹತೆ ಇದೆ

ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರು. ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಯಿದೆ. ಆದರೆ, ನಮ್ಮ‌ಲ್ಲಿ ಈಗ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಇನ್ನು ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ ಆದರೂ ಅವರ ನಾಯಕತ್ವ ಮುಂದೆಯೂ ಬೇಕು.

- ಎಂ.ಬಿ.ಪಾಟೀಲ್‌ ಸಚಿವ

ಯತೀಂದ್ರ ಮಾತಲ್ಲಿ ಶಕ್ತಿ ಇಲ್ಲ, ಎಳಸು ಹೇಳಿಕೆ ಅದು

ಯತೀಂದ್ರ ಅವರ ಮಾತಿನಲ್ಲಿ ಶಕ್ತಿ ಇಲ್ಲ. ಅವರದು ಒಂದು ರೀತಿಯ ಎಳಸು ಹೇಳಿಕೆ. ಅವರು ಗೌರವಯುತವಾಗಿ ನಡೆದುಕೊಳ್ಳಬೇಕು. ದೊಡ್ಡ ಮನೆತನದಿಂದ ಬಂದು ದೊಡ್ಡ ಸ್ಥಾನದಲ್ಲಿದ್ದಾರೆ. ಅವರು ಕೆಳಗೆ ಬೀಳುವುದು ನಮಗೆ ಇಷ್ಟವಿಲ್ಲ.

- ಇಕ್ಬಾಲ್‌ ಹುಸೇನ್‌, ಕಾಂಗ್ರೆಸ್‌ ಶಾಸಕ

ಸರ್ಕಾರ ಪತನಕ್ಕೆ ಗುದ್ದಲಿ ಪೂಜೆ

ಡಿಕೆಶಿ ಎಂದಿಗೂ ಸಿಎಂ ಆಗಬಾರದು ಎಂದು ಸಿದ್ದರಾಮಯ್ಯ ಬಣ ತಂತ್ರಗಾರಿಕೆ ಮಾಡುತ್ತಿದೆ. ಕಳೆದ ಬಾರಿ ಸರ್ಕಾರ ಪತನ ಪ್ರಕ್ರಿಯೆ ಪ್ರಾರಂಭವಾಗಿತ್ತು. ಈ ಬಾರಿಯೂ ಸರ್ಕಾರ ಪತನಕ್ಕೆ ಬೆಳಗಾವಿಯಿಂದಲೇ ಯತೀಂದ್ರ ಗುದ್ದಲಿ ಪೂಜೆ ಮಾಡಿದ್ದಾರೆ. ನವೆಂಬರ್‌ ಕ್ರಾಂತಿ ನಿಜವಾಗುತ್ತಿದೆ.

- ಆರ್‌.ಅಶೋಕ್‌, ಪ್ರತಿಪಕ್ಷ ನಾಯಕ

PREV
Read more Articles on

Recommended Stories

ಆರ್‌ಜೆಡಿಗೆ ಮುಂಡಿಯೂರಿದ ಕಾಂಗ್ರೆಸ್‌ : ತೇಜಸ್ವಿ ಇಂಡಿ ಸಿಎಂ ಅಭ್ಯರ್ಥಿ
ವೈಫಲ್ಯ ಮುಚ್ಚಲು ಸಂಘದ ಮೇಲೆ ನಿರ್ಬಂಧ: ಸೂಲಿಬೆಲೆ