ರಾಜ್ಯದ ಕಾವೇರಿ ಹಿತರಕ್ಷಣೆಗೆ ಬದ್ಧ: ಡಿಕೆಶಿ

Published : Aug 01, 2026, 05:04 AM IST
DK Shivakumar

ಸಾರಾಂಶ

ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿರುವುದರಿಂದ ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ಆದೇಶ ಮಾಡಿವೆ. ಆದರೆ, ರಾಜ್ಯದ ಹಿತದೃಷ್ಟಿಯಿಂದ ಭಾನುವಾರ ಸರ್ವ ಪಕ್ಷ ಸಭೆಯಲ್ಲಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

  ಬೆಂಗಳೂರು :  ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿರುವುದರಿಂದ ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ಆದೇಶ ಮಾಡಿವೆ. ಆದರೆ, ರಾಜ್ಯದ ಹಿತದೃಷ್ಟಿಯಿಂದ ಭಾನುವಾರ ಸರ್ವ ಪಕ್ಷ ಸಭೆಯಲ್ಲಿ ಕಾನೂನು ತಜ್ಞರು, ವಿರೋಧ ಪಕ್ಷಗಳ ನಾಯಕರ ಸಲಹೆಗಳನ್ನು ಪಡೆದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸೇರಿ ವಿವಿಧ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಜನ, ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್‌ನಂತೆ 15 ದಿನಗಳ ಕಾಲ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶಿಸಿತ್ತು. ಈ ಆದೇಶವನ್ನು ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ(ಸಿಡಬ್ಲ್ಯುಎಂಎ) ಮುಂದೆ ಪ್ರಶ್ನಿಸಿ ಸಮರ್ಥವಾಗಿ ವಾದ ಮಂಡಿಸಿದ್ದೆವು. ಆದರೆ, ಪ್ರಾಧಿಕಾರ ಕೂಡ ನೀರು ಬಿಡಲು ಸೂಚಿಸಿದೆ. ಈ ಆದೇಶ ಮಾಡಲು ಅವರು ನೀಡಿರುವ ಕಾರಣ ಕೆಲ ದಿನಗಳಿಂದ ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ಒಳಹರಿವು ಹೆಚ್ಚಾಗಿರುವುದು.

ಹಾರಂಗಿ ಜಲಾಶಯ ಶೇ.95, ಕಬಿನಿ ಶೇ.83, ಕೆಆರ್‌ಎಸ್‌ ಶೇ.36 ಮತ್ತು ಹೇಮಾವತಿಯಲ್ಲಿ ಶೇ.67 ನೀರು ಶೇಖರಣೆಯಾಗಿದೆ. ನಮ್ಮ ಅಣೆಕಟ್ಟುಗಳ ಒಳಹರಿವು 25 ಸಾವಿರ ಕ್ಯುಸೆಕ್‌ನಷ್ಟಿದ್ದು, ಈ ಅಂಕಿ-ಅಂಶಗಳನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಅದರಲ್ಲಿ 3,500 ಕ್ಯುಸೆಕ್‌ ನೀರು ಬಿಡಲು ಸಮಿತಿ ಮತ್ತು ಪ್ರಾಧಿಕಾರದವರು ಸೂಚಿಸಿದ್ದಾರೆ. ಆದರೂ ರಾಜ್ಯದ ಜನರ, ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ಹಾಗಾಗಿ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಿದ್ದೇವೆ ಎಂದರು.

ಈ ವರ್ಷವೇ ತ.ನಾಡಿಗೆ ಅತಿ ಕಡಿಮೆ ನೀರು :

ಜುಲೈ ಅಂತ್ಯದವರೆಗೆ ನಾವು ತಮಿಳುನಾಡಿಗೆ 0.6 ಟಿಎಂಸಿ ನೀರು ಮಾತ್ರ(ಜುಲೈ ಅಂತ್ಯದವರೆಗೆ) ತಮಿಳುನಾಡಿಗೆ ಹರಿಸಿದ್ದು, ಕಳೆದ 100 ವರ್ಷಗಳಲ್ಲಿ ತಮಿಳುನಾಡಿಗೆ ಹರಿಸಲಾಗಿರುವ ಅತ್ಯಂತ ಕಡಿಮೆ ಪ್ರಮಾಣದ ನೀರಾಗಿದೆ. ತಮಿಳುನಾಡಿನವರು 9.94 ಟಿಎಂಸಿ ನೀರು ಹರಿಸಬೇಕು ಎಂದು ವಾದ ಮಂಡಿಸಿದ್ದರು. ಆದರೆ ಸಮಿತಿಯು ಅದರಲ್ಲಿ ಅರ್ಧದಷ್ಟು ಪ್ರಮಾಣದ ನೀರು ಹರಿವಿಗೆ ಸೂಚಿಸಿದ್ದಾರೆ. ಕಳೆದ 2-3 ದಿನಗಳಿಂದ ನಮ್ಮಲ್ಲಿ ಒಳಹರಿವು ಹೆಚ್ಚಾಗಿದೆ ಎಂದರು.

ಈ ವಿಚಾರವಾಗಿ ಚರ್ಚೆ ಮಾಡಲು ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾವೇರಿ ಭಾಗದ ಎಲ್ಲಾ ಪಕ್ಷಗಳ ಶಾಸಕರು, ಸಂಸತ್ ಸದಸ್ಯರಿಗೆ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ನಾನು ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು, ರಾಜ್ಯದ ಹಿತಕ್ಕೆ ಅವರ ಸಲಹೆ ಪಡೆಯುತ್ತೇವೆ. ಸರ್ವಪಕ್ಷ ಸಭೆಗೆ ಅವರು ಬರಲಿ, ಸಲಹೆ ನೀಡಲಿ. ರಾಜ್ಯದ ಹಿತಕ್ಕೆ ನಾವು ಬದ್ಧರಾಗೋಣ. ಕಾನೂನು ತಂಡದ ಜೊತೆ, ಅಧಿಕಾರಿಗಳ ಜತೆ ನಾನು, ಪರಮೇಶ್ವರ್, ರಾಮಲಿಂಗಾ ರೆಡ್ಡಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಸರ್ವಪಕ್ಷ ಸಭೆಯಲ್ಲಿ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಮಂಡಿಸಿ, ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿ ಸಂಸದರು, ಕೇಂದ್ರ ಸಚಿವರು ನಮಗೆ ಸಹಕಾರ ನೀಡಿದ್ದಾರೆ. ಇಲ್ಲಿ ಕೆಲವರು ವಿರೋಧ ಮಾಡಿರಬಹುದು, ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರಾಜ್ಯದ ಹಿತವನ್ನು ಅವರು ಕಾಪಾಡುತ್ತಾರೆ ಎಂದು ಭಾವಿಸಿದ್ದೇನೆ ಎಂದರು.

ವಿಶ್ವಾಸಕ್ಕೆ ಪಡೆಯದೆ ತೀರ್ಮಾನ ಇಲ್ಲ:

ಸಿಡಬ್ಲ್ಯುಎಂಎ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವಿರಾ ಎಂದು ಕೇಳಿದಾಗ, ಈ ಹಿಂದೆ ಇಂಥ ಸಂಕಷ್ಟ ಕಾಲದಲ್ಲಿ ಅನೇಕ ತೀರ್ಮಾನ ಬಂದಿವೆ. 2016, 2017, 2018, 2023ರಲ್ಲಿ ಇಂಥ ಆದೇಶ ಬಂದಿವೆ. ಆಗೆಲ್ಲಾ ಯಾವ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದು ದೆಹಲಿ ಕಾನೂನು ತಜ್ಞರ ಸಲಹೆ, ಸರ್ವಪಕ್ಷ ಸಭೆಯಲ್ಲಿ ಮಾಜಿ ಸಿಎಂಗಳು ಹಾಗೂ ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆಯದೆ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ, ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೆ ಎಂಬ ಸುದ್ದಿಗಾರರ ಕೇಳಿದ ಪ್ರಶ್ನೆಗೆ, ಈಗ ನಾವು ಅದರ ಬಗ್ಗೆ ಯಾಕೆ ಯೋಚನೆ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜೆನ್‌ಝೀಗಳ ಹೋರಾಟದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ
ಕಾವೇರಿಗಾಗಿ 13ಕ್ಕೆ ಕರ್ನಾಟಕ ಬಂದ್‌